ಧರಣಿನಿರತರ ವಿರುದ್ಧ ರಶ್ಯದಿಂದ ‘ಕಠಿಣ ತಂತ್ರಗಾರಿಕೆ’: ಅಮೆರಿಕ, ಐರೋಪ್ಯ ಒಕ್ಕೂಟ ಖಂಡನೆ

Update: 2021-01-24 15:23 GMT

 ವಾಶಿಂಗ್ಟನ್, ಜ. 24: ಜೈಲಿನಲ್ಲಿರುವ ರಶ್ಯ ಪ್ರತಿಪಕ್ಷ ನಾಯಕ ಅಲೆಕ್ಸಿ ನವಾಲ್ನಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ದೇಶಾದ್ಯಂತ ಧರಣಿ ನಡೆಸುತ್ತಿರುವ ಅವರ ಸಾವಿರಾರು ಬೆಂಬಲಿಗರ ವಿರುದ್ಧ ‘ಕಠಿಣ ತಂತ್ರಗಾರಿಕೆ’ಗಳನ್ನು ಬಳಸುತ್ತಿರುವುದಕ್ಕಾಗಿ ಅವೆುರಿಕವು ರಶ್ಯವನ್ನು ಖಂಡಿಸಿದೆ.

‘‘ರಶ್ಯದಾದ್ಯಂತದ ನಗರಗಳಲ್ಲಿ ಪ್ರದರ್ಶನಕಾರರು ಮತ್ತು ಪತ್ರಕರ್ತರ ವಿರುದ್ಧ ವಾರಾಂತ್ಯದಲ್ಲಿ ರಶ್ಯ ಪ್ರಯೋಗಿಸಿದ ಕಠಿಣ ತಂತ್ರಗಾರಿಕೆಗಳನ್ನು ಅವೆುರಿಕ ಬಲವಾಗಿ ಖಂಡಿಸುತ್ತದೆ’’ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಹೇಳಿಕೆಯೊಂದರಲ್ಲಿ ತಿಳಿಸಿದರು.

ಧರಣಿನಿರತರ ಮೇಲೆ ರಶ್ಯ ಪೊಲೀಸರು ನಡೆಸಿದ ದಮನ ಕಾರ್ಯಾಚರಣೆಯನ್ನು ಐರೋಪ್ಯ ಒಕ್ಕೂಟವೂ ಖಂಡಿಸಿದೆ. ‘ಮುಂದಿನ ಕ್ರಮಗಳ’ ಬಗ್ಗೆ ಒಕ್ಕೂಟವು ಸೋಮವಾರ ಚರ್ಚೆ ನಡೆಸುವುದು ಎಂದು ಒಕ್ಕೂಟದ ವಿದೇಶ ನೀತಿ ಮುಖ್ಯಸ್ಥ ಜೋಸೆಫ್ ಬಾರೆಲ್ ಹೇಳಿದರು.

ರಶ್ಯದಲ್ಲಿ ಶನಿವಾರ ನಡೆದ ಧರಣಿಯ ವ್ಯಾಪ್ತಿ ಈ ಹಿಂದೆಂದೂ ಕಾಣದಷ್ಟು ವ್ಯಾಪಕವಾಗಿತ್ತು. ನೂರಕ್ಕೂ ಅಧಿಕ ನಗರಗಳಲ್ಲಿ ಧರಣಿ ನಡೆಯಿತು. ಈ ಹಿಂದೆ, 2012 ಮತ್ತು 2019ರಲ್ಲಿ ನಡೆದ ಧರಣಿಗಳು ಹೆಚ್ಚಾಗಿ ರಾಜಧಾನಿ ಮಾಸ್ಕೋದಲ್ಲೇ ಕೇಂದ್ರೀಕೃತವಾಗಿದ್ದವು.

ಶನಿವಾರದ ಧರಣಿ ವೇಳೆ, ಪ್ರದರ್ಶನಕಾರರೊಂದಿಗೆ ಪೊಲೀಸರು ಹಿಂಸಾತ್ಮಕವಾಗಿ ವರ್ತಿಸಿದರು ಹಾಗೂ ವಿವಿಧ ನಗರಗಳಲ್ಲಿ 2,500ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದರು.

 ಬರ್ಲಿನ್‌ನ ಆಸ್ಪತ್ರೆಯಲ್ಲಿ ವಿಷಪ್ರಾಶನಕ್ಕಾಗಿ ಚಿಕಿತ್ಸೆ ಪಡೆದು ಜನವರಿ 17ರಂದು ರಶ್ಯಕ್ಕೆ ಮರಳಿದ ನವಾಲ್ನಿಯನ್ನು ವಿಮಾನ ನಿಲ್ದಾಣದಲ್ಲೇ ಬಂಧಿಸಿ ಒಂದು ತಿಂಗಳ ಅವಧಿಯ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

 ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಸಾವಿರಾರು ಸಂಖ್ಯೆಯ ಅವರ ಬೆಂಬಲಿಗರು ಶನಿವಾರ ರಶ್ಯಾದ್ಯಂತ ಧರಣಿ ನಡೆಸಿದರು.

ಅಮೆರಿಕ ಮೆರವಣಿಗೆಯ ಮಾರ್ಗ ಪ್ರಕಟಿಸಿದೆ: ರಶ್ಯ

 ಮಾಸ್ಕೋ (ರಶ್ಯ), ಜ. 24: ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸಿ ನವಾಲ್ನಿ ಪರವಾಗಿ ಶನಿವಾರ ನಡೆದ ಮೆರವಣಿಗೆಯ ದಾರಿಯನ್ನು ಮಾಸ್ಕೋದಲ್ಲಿರುವ ಅಮೆರಿಕದ ರಾಯಭಾರ ಕಚೇರಿಯು ಪ್ರಕಟಿಸಿದೆ ಎಂದು ರಶ್ಯ ಶನಿವಾರ ಆರೋಪಿಸಿದೆ ಹಾಗೂ ಇದಕ್ಕೆ ಅಮೆರಿಕದ ರಾಜತಾಂತ್ರಿಕರು ವಿವರಣೆ ನೀಡಬೇಕೆಂದು ಒತ್ತಾಯಿಸಿದೆ.

‘‘ಮಾಸ್ಕೋದಲ್ಲಿರುವ ಅಮೆರಿಕ ರಾಯಭಾರ ಕಚೇರಿಯು ನಿನ್ನೆ ರಶ್ಯದ ನಗರಗಳಲ್ಲಿ ‘ಮೆರವಣಿಗೆ ಮಾರ್ಗ’ಗಳನ್ನು ಪ್ರಕಟಿಸಿದೆ ಹಾಗೂ ಧರಣಿ ಬಗ್ಗೆ ಮಾಹಿತಿಗಳನ್ನು ಹೊರಡಿಸಿದೆ’’ ಎಂದು ರಶ್ಯ ವಿದೇಶ ಸಚಿವಾಲಯದ ವಕ್ತಾರೆ ಮರಿಯಾ ಝಖರೊವ ಫೇಸ್‌ಬುಕ್‌ನಲ್ಲಿ ಹೇಳಿದ್ದಾರೆ.

ಅಮೆರಿಕ ರಾಯಭಾರ ಕಚೇರಿಯು ರಶ್ಯದಲ್ಲಿರುವ ಅಮೆರಿಕನ್ನರಿಗಾಗಿ ಧರಣಿಯ ಬಗ್ಗೆ ಎಚ್ಚರಿಕೆ ಹೊರಡಿಸಿತ್ತು. ಮಾಸ್ಕೋ, ಸೇಂಟ್ ಪೀಟರ್ಸ್‌ಬರ್ಗ್ ಮತ್ತು ಇತರ ಕೆಲವು ನಗರಗಳಿಗೆ ಹೋಗದಿರುವಂತೆ ಸಲಹೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News