ಹಲವು ಉದ್ಯೋಗಗಳು ವಿದೇಶೀಯರಿಗೆ ನಿಷೇಧ: ಒಮಾನ್ ಘೋಷಣೆ

Update: 2021-01-24 15:50 GMT

ಮಸ್ಕತ್ (ಒಮಾನ್), ಜ. 24: ಹಲವು ಉದ್ಯೋಗಗಳನ್ನು ವಿದೇಶೀಯರಿಗೆ ನಿಷೇಧಿಸುವುದಾಗಿ ಒಮಾನ್ ರವಿವಾರ ಘೋಷಿಸಿದೆ. ತನ್ನ ನಾಗರಿಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅದು ಹೇಳಿದೆ.

ಒಮಾನ್‌ನಲ್ಲಿ ಒಟ್ಟು 45 ಲಕ್ಷ ನಿವಾಸಿಗಳಿದ್ದು, ಈ ಪೈಕಿ 40 ಶೇಕಡದಷ್ಟು ಮಂದಿ ವಿದೇಶೀಯರಾಗಿದ್ದಾರೆ.

‘‘ಖಾಸಗಿ ಕ್ಷೇತ್ರದಲ್ಲಿನ ಹಲವು ಉದ್ಯೋಗಗಳನ್ನು ರಾಷ್ಟ್ರೀಕರಿಸಲಾಗುವುದು’’ ಎಂದು ಒಮಾನ್ ಕಾರ್ಮಿಕ ಸಚಿವಾಲಯ ರವಿವಾರ ಟ್ವಿಟರ್‌ನಲ್ಲಿ ಘೋಷಿಸಿದೆ.

ಈ ಉದ್ಯೋಗಗಳಲ್ಲಿ ಈಗಾಗಲೇ ವಿದೇಶೀಯರಿಗೆ ನೀಡಲಾಗಿರುವ ಉದ್ಯೋಗ ಪರ್ಮಿಟ್‌ಗಳ ಅವಧಿ ಮುಕ್ತಾಯಗೊಂಡ ಬಳಿಕ ಅವುಗಳನ್ನು ನವೀಕರಿಸಲಾಗುವುದಿಲ್ಲ ಎಂದು ಅದು ಹೇಳಿದೆ.

ಒಮಾನ್ ನಾಗರಿಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುವುದಕ್ಕಾಗಿ, ಹಿರಿಯ ಹುದ್ದೆಗಳಲ್ಲಿರುವ ವಿದೇಶೀಯರ ಸ್ಥಾನದಲ್ಲಿ ಒಮಾನ್ ನಾಗರಿಕರನ್ನು ನೇಮಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ 2020 ಎಪ್ರಿಲ್‌ನಲ್ಲಿ ಒಮಾನ್ ಸರಕಾರಿ ಒಡೆತನದ ಕಂಪೆನಿಗಳಿಗೆ ಆದೇಶಿಸಿತ್ತು.

ಸರಕಾರಿ ಒಡೆತನದ ಕಂಪೆನಿಗಳ ಹಿರಿಯ ಹುದ್ದೆಗಳನ್ನು ವಿದೇಶೀಯರೇ ಹೆಚ್ಚಿನ ಸಂಖ್ಯೆಯಲ್ಲಿ ವಹಿಸಿಕೊಂಡಿದ್ದಾರೆ ಎಂದು ಒಮಾನ್ ಸರಕಾರದ ಹಣಕಾಸು ಸಚಿವಾಲಯ ಆಗ ಹೇಳಿತ್ತು.

ಯಾವುದೆಲ್ಲ ಹುದ್ದೆಗಳು?

ವಿಮಾ ಕಂಪೆನಿಗಳು, ಅಂಗಡಿಗಳು ಮತ್ತು ಕಾರು ಮಾರಾಟ ಮಳಿಗೆಗಳಲ್ಲಿರುವ ಹಲವಾರು ಹುದ್ದೆಗಳನ್ನು ಒಮಾನ್ ಪ್ರಜೆಗಳಿಗೆ ಮೀಸಲಿಡಲಾಗುವುದು ಎಂದು ಸಚಿವಾಲಯ ಹೇಳಿದೆ. ಹಣಕಾಸು ವ್ಯವಹಾರ, ವಾಣಿಜ್ಯ ಮತ್ತು ಆಡಳಿತಕ್ಕೆ ಸಂಬಂಧಿಸಿದ ಹುದ್ದೆಗಳು ಇದರಲ್ಲಿ ಸೇರಿದೆ.

ಯಾವುದೇ ವಾಹನಗಳ ಚಾಲಕ ಹುದ್ದೆಗಳನ್ನೂ ಒಮಾನ್ ನಾಗರಿಕರಿಗೆ ಮಾತ್ರ ನೀಡಲಾಗುವುದು ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News