ಸಂವಿಧಾನ ಉಳಿದರೆ ಭಾರತ ಉಳಿಯುತ್ತದೆ

Update: 2021-01-25 08:46 GMT

ಧರ್ಮನಿರಪೇಕ್ಷತೆ ನಮ್ಮ ಸಂವಿಧಾನದ ಮೂಲತತ್ವವಾಗಿದ್ದರೂ ಅದರ ಮೇಲೆಯೇ ದಾಳಿ ನಡೆದಿದೆ. ಯಾರು ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು, ಯಾವ ಬಟ್ಟೆ ಧರಿಸಬೇಕು, ಯಾರನ್ನು ಪ್ರೀತಿಸಬೇಕು, ಯಾರನ್ನು ಮದುವೆಯಾಗಬೇಕು, ಯಾರೊಂದಿಗೆ ಯಾರು ಮಾತಾಡಬೇಕು, ಎಷ್ಟು ಮದುವೆಯಾಗಬೇಕು, ಎಷ್ಟು ಮಕ್ಕಳನ್ನು ಹಡೆಯಬೇಕು ಎಂಬ ಅತ್ಯಂತ ವೈಯಕ್ತಿಕ ವಿಷಯಗಳನ್ನು ತೀರ್ಮಾನಿಸುವ ದೊಣ್ಣೆ ನಾಯಕರು ಈ ದೇಶದಲ್ಲಿ ಹುಟ್ಟಿಕೊಂಡಿದ್ದಾರೆ. ಗೋ ರಕ್ಷಣೆ, ಮತಾಂತರದ ಹೆಸರಿನಲ್ಲಿ ಅಲ್ಪಸಂಖ್ಯಾತರ ಮೇಲೆ ಪ್ರತಿ ದಿನ ಹಲ್ಲೆ ಮಾಡುತ್ತ ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ.



ದೇಶದ ರಾಜಧಾನಿಯಲ್ಲಿ ಮಣ್ಣಿನ ಮಕ್ಕಳು ಐತಿಹಾಸಿಕ ಹೋರಾಟ ನಡೆಸಿರುವ ಈ ಸನ್ನಿವೇಶದಲ್ಲಿ ಮತ್ತೆ ಗಣರಾಜ್ಯೋತ್ಸವ ಬಂದಿದೆ. ಈ ನೆಲದ ಹೆಸರಾಂತ ಚಿಂತಕರ ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರಳು ಹಿಸುಕಿ ಅವರನ್ನೆಲ್ಲ ಜೈಲಿನ ಕತ್ತಲ ಕೋಣೆಗೆ ದಬ್ಬಿರುವ ಈ ಕೆಟ್ಟ ದಿನಗಳಲ್ಲಿ ಭಾರತದ ಆಳುವ ವರ್ಗ ಪ್ರಜಾರಾಜ್ಯೋತ್ಸವವನ್ನು ಆಚರಿಸುತ್ತಿದೆ. ಇಂತಹ ಕಡು ಕಷ್ಟದ ಕಾಲ ಘಟ್ಟದಲ್ಲಿ ಜನತಂತ್ರದ ಅಗ್ನಿಪರೀಕ್ಷೆ ನಡೆದಿದೆ.

ಜನವರಿ 26 ಸಾಮಾನ್ಯ ದಿನವಲ್ಲ. ಆಗಸ್ಟ್ 15 ರಂತೆ ಭಾರತದ ಪಾಲಿಗೆ ಇದು ಅತ್ಯಂತ ಮಹತ್ವದ ದಿನ. 1947ರ ಆಗಸ್ಟ್ 15 ನಾವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ದಿನ. ಅದೇ ರೀತಿ 1950ರ ಜನವರಿ 26 ನಾವು ಒಪ್ಪಿಕೊಂಡಿರುವ ಸಂವಿಧಾನ ಜಾರಿಗೆ ಬಂದ ದಿನ.

ಈ ಸಂವಿಧಾನದಲ್ಲಿ ನಂಬಿಕೆ ಇಲ್ಲದವರು ಇದೇ ಸಂವಿಧಾನವನ್ನು ಬಳಸಿಕೊಂಡು ಚುನಾವಣೆಯಲ್ಲಿ ಗೆದ್ದು ಕೈಗೆ ಅಧಿಕಾರ ತೆಗೆದುಕೊಂಡಿದ್ದಾರೆ. ಅವರಿಂದಲೇ ಸಂವಿಧಾನಕ್ಕೆ ಗಂಡಾಂತರ ಎದುರಾಗಿದೆ. ಸ್ವಾತಂತ್ರ್ಯ ಬಂದ ನಂತರ ನಮ್ಮನ್ನು ಆಳಿದ ಸರಕಾರಗಳು ಹಾಗೂ ಪ್ರಜಾಪ್ರಭುತ್ವವಾದಿ ಶಕ್ತಿಗಳು ಹೊಸ ಪೀಳಿಗೆಯಲ್ಲಿ ಸಂವಿಧಾನದ ಅರಿವು ಮೂಡಿಸಿದ್ದರೆ ದೇಶ ಇಂತಹ ಸಂಕಟದ ಸಂದರ್ಭ ಎದುರಿಸುವ ಪರಿಸ್ಥಿತಿ ಬರುತ್ತಿರಲಿಲ್ಲ.

ಈ ಸಂವಿಧಾನ ಬರುವ ಮುಂಚೆ ಈ ಭಾರತ ಹೇಗಿತ್ತು ಎಂದು ವಿವರಿಸಿ ಹೇಳಬೇಕಾಗಿಲ್ಲ. ಹಿಂದೆ ಇಲ್ಲಿ ಶ್ರೇಣೀಕೃತ ಜಾತಿ ಪದ್ಧತಿ ಇತ್ತು. ಅಸ್ಪಶ್ಯತೆಯ ನಗ್ನ ತಾಂಡವ ನೃತ್ಯವಿತ್ತು. ತುಳಿಯುವ ವರ್ಗದ ಹಿತಾಸಕ್ತಿಗಳನ್ನು ರಕ್ಷಿಸುವ ನ್ಯಾಯ ವ್ಯವಸ್ಥೆ ಇತ್ತು. ಹೆಣ್ಣು ಮಕ್ಕಳಿಗೆ ಸಮಾನತೆ ಇರಲಿಲ್ಲ. ಹೀಗೆ ಮನುಷ್ಯರ ನಡುವೆ ತಾರತಮ್ಯಗಳಿಂದ ಕೂಡಿದ ಸಮಾಜ ಇಲ್ಲಿತ್ತು. ಇದನ್ನು ಪ್ರತಿರೋಧಿಸುವ ಸ್ವಾತಂತ್ರ್ಯವೂ ಇರಲಿಲ್ಲ. ಈಗ ಇದೆಲ್ಲ ಸಂಪೂರ್ಣ ಮಾಯವಾಗಿದೆಯೆಂದಲ್ಲ. ಆದರೆ ಧ್ವನಿ ಕಳೆದುಕೊಂಡ ಸಮುದಾಯಗಳಿಗೆ ಸಂವಿಧಾನ ರಕ್ಷಾ ಕವಚವಾಗಿದೆ ಎಂಬುದು ನಿಜ.

ಸಂವಿಧಾನ ಬಂದ ನಂತರ ಅಸ್ಪಶ್ಯತೆಯ ಆಚರಣೆ ಅಪರಾಧವಾಗಿದೆ. ವರದಕ್ಷಿಣೆ ನಿರ್ಬಂಧಿಸಲ್ಪಟ್ಟಿದೆ. ಶತಮಾನಗಳಿಂದ ದುಡಿದು ದೇಶ ಕಟ್ಟಿದವರ ರಕ್ಷಣೆಗೆ ಮೀಸಲು ವ್ಯವಸ್ಥೆ ಜಾರಿಗೆ ಬಂದಿದೆ. ಅನ್ಯಾಯವನ್ನು ಪ್ರತಿಭಟಿಸುವ ಅವಕಾಶ ದೊರಕಿದೆ. ಆದರೆ ಈಗ ನಮ್ಮೆದುರು ಹೊಸ ಸವಾಲು ಎದುರಾಗಿದೆ.

ನಮ್ಮ ಭಾರತ ಸ್ವಾತಂತ್ರ್ಯ ಪಡೆಯುವ ಮುನ್ನ ಒಂದು ದೇಶವಾಗಿರಲಿಲ್ಲ. ಇಲ್ಲಿ ಊರಿಗೊಬ್ಬ ರಾಜರು, ಪ್ರದೇಶಕ್ಕೊಬ್ಬ ಸಾಮ್ರಾಟರು, ಚಕ್ರವರ್ತಿಗಳು ಇದ್ದರು. ಸ್ವಾತಂತ್ರ್ಯ ಬಂದಾಗ ಇವರನ್ನು ದೂರವಿಟ್ಟು ಸಮಸ್ತ ಭಾರತೀಯರ ಕೈಗೆ ಅಧಿಕಾರ ಸಿಗಬೇಕು ಎಂಬುದು ನಮ್ಮ ರಾಷ್ಟ್ರೀಯ ಆಂದೋಲನದ ಮುಖ್ಯ ಉದ್ದೇಶವಾಗಿತ್ತು.

ಸಮಸ್ತ ಭಾರತೀಯರೆಂದರೆ ಯಾವುದೇ ಒಂದು ಧರ್ಮ, ಇಲ್ಲವೇ ಜಾತಿಗೆ ಸೇರಿದವರಲ್ಲ. ಶತಮಾನಗಳಿಂದ ಈ ನೆಲದಲ್ಲಿ ಒಟ್ಟಿಗೆ ಬಾಳಿದ, ಒಂದಾಗಿ ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ಹೋರಾಡಿದ ಎಲ್ಲ ಸಮುದಾಯಗಳ ಜನರೂ ಭಾರತೀಯರು. ಇದರಲ್ಲಿ ಹಿಂದೂ, ಮುಸ್ಲಿಂ, ಜೈನ್, ಸಿಖ್, ಕ್ರೈಸ್ತ, ಎಲ್ಲರೂ ಇದ್ದಾರೆ. ಅಂತಲೇ ಇದು ಹಿಂದೂ ರಾಷ್ಟ್ರವಲ್ಲ, ಮುಸ್ಲಿಂ ರಾಷ್ಟ್ರವಲ್ಲ, ಕ್ರೈಸ್ತ ರಾಷ್ಟ್ರವಲ್ಲ. ಇದು ಇವರೆಲ್ಲರನ್ನು ಒಳಗೊಂಡ ಧರ್ಮ ನಿರಪೇಕ್ಷ ರಾಷ್ಟ್ರ, ಜಾತ್ಯತೀತ ರಾಷ್ಟ್ರ ಎಂದು ಒಪ್ಪಿಕೊಂಡೆವು. ಇದಕ್ಕೆ ಪೂರಕವಾದ ಸಂವಿಧಾನವನ್ನು ಬಾಬಾ ಸಾಹೇಬರು ನಮಗೆ ನೀಡಿದರು.

1946 ರ ಜುಲೈ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಸಂವಿಧಾನ ರಚನಾ ಸಭೆಗೆ 296 ಜನರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಭಿನ್ನಾಭಿಪ್ರಾಯದ ಕಾರಣ ಕೆಲ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದರು. 1946, ಡಿಸೆಂಬರ್ 6 ರಂದು ಮೊದಲ ಸಭೆ ನಡೆದು ಸಂವಿಧಾನ ರಚನೆಯ ಪ್ರಕ್ರಿಯೆ ಆರಂಭವಾಯಿತು. ಒಂದು ವರ್ಷ ಎರಡು ತಿಂಗಳ ಕಾಲಾವಧಿಯಲ್ಲಿ ಹಲವಾರು ಬಾರಿ ಸಭೆ ಸೇರಿ ಸಂವಿಧಾನದ ಮೊದಲ ಕರಡನ್ನು 1948ರ ಫೆಬ್ರವರಿ 21ರಂದು ಭಾರತದ ಜನತೆಯ ಮುಂದೆ ಚರ್ಚೆಗೆ ಇಡಲಾಯಿತು. ಜನತೆ ಇದಕ್ಕೆ 7,635 ತಿದ್ದುಪಡಿಗಳನ್ನು ಸೂಚಿಸಿದರು. ಈ ತಿದ್ದುಪಡಿಗಳನ್ನು ಪರಿಶೀಲನೆ ಮಾಡಿ ಸೂಕ್ತವಾದವುಗಳನ್ನು ಒಪ್ಪಿ1949, ನವೆಂಬರ್ 26ರಂದು ಅಂತಿಮ ಕರಡನ್ನು ಭಾರತ ಸರಕಾರಕ್ಕೆ ಸಲ್ಲಿಸಲಾಯಿತು. ಮುಂದೆ 1950, ಜನವರಿ 26ರಂದು ಈ ಸಂವಿಧಾನ ಜಾರಿಗೆ ಬಂತು.

ಸಂವಿಧಾನ ರಚನಾ ಸಮಿತಿಯಲ್ಲಿ 272 ಸದಸ್ಯರಿದ್ದರೂ ಸಂವಿಧಾನ ರಚನೆಯಲ್ಲಿ ಕೆಲವೇ ಕೆಲವು ಸದಸ್ಯರ ಕೊಡುಗೆ ಅಮೂಲ್ಯವಾಗಿದೆ. ಅದರಲ್ಲೂ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾದ ಬಾಬಾಸಾಹೇಬ ಅಂಬೇಡ್ಕರ್ ಅವರು ದಿನಕ್ಕೆ ಹದಿನೆಂಟು ತಾಸು ಕೆಲಸ ಮಾಡಿ ನಮಗೊಂದು ಸಂವಿಧಾನವನ್ನು ನೀಡಿದರು. ಸಂವಿಧಾನ ರಚನೆಯಲ್ಲಿ ಬಾಬಾಸಾಹೇಬರ ಕೊಡುಗೆಯನ್ನು ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಮುಕ್ತ ಮನಸ್ಸಿನಿಂದ ಶ್ಲಾಘಿಸಿದ್ದಾರೆ.

ಭಾರತದ ಸಂವಿಧಾನ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನ ಎಂದು ಹೆಸರಾಗಿದೆ. ಅತ್ಯಂತ ವೈವಿಧ್ಯಪೂರ್ಣವಾದ ಬಹಧರ್ಮೀಯ, ಬಹುಜನಾಂಗೀಯ, ಬಹುಭಾಷಿಕ, ಬಹು ಸಾಂಸ್ಕೃತಿಕ ಹಾಗೂ ಬಹು ರಾಷ್ಟ್ರೀಯತೆಗಳನ್ನು ಒಳಗೊಂಡ ಭೂ ಪ್ರದೇಶಕ್ಕೆ ಅತ್ಯಂತ ಸೂಕ್ತವಾದ, ಎಲ್ಲ ಜನ ಸಮುದಾಯಗಳ ಭಾವನೆಗಳನ್ನು ಪ್ರತಿನಿಧಿಸುವ ಸಂವಿಧಾನವಿದು. ಶತಮಾನಗಳಿಂದ ಗೂಟಕ್ಕೆ ಕಟ್ಟಿದ ದನಗಳಂತೆ ನರಳಿ, ನರಳಿ ಬದುಕಿದ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯದ ಬೆಳಕನ್ನು ನೀಡಿರುವ ಸಂವಿಧಾನವಿದು.

 ಇಂತಹ ಸಂವಿಧಾನಕ್ಕೆ ಈಗ ಅಪಾಯ ಎದುರಾಗಿದೆ. ಇದನ್ನು ಬುಡಮೇಲು ಮಾಡಿ ಮನುವಾದಿ, ‘ಮನಿ’ವಾದಿ ರಾಷ್ಟ್ರ ನಿರ್ಮಿಸುವ ಮಸಲತ್ತು ನಡೆಯುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಕತ್ತು ಹಿಸುಕುವ ದಮನ ಸತ್ರ ನಡೆದಿದೆ. ಸಂವಿಧಾನದ 19(1) (ಎ) ಎಲ್ಲಾ ಪ್ರಜೆಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡುತ್ತದೆ. ಸಂವಿಧಾನದತ್ತವಾದ ಈ ವಾಕ್ ಸ್ವಾತಂತ್ರ್ಯ ಇರುವಾಗಲೂ ನಾಡೋಜ ಹಂಪನಾ ಅವರಂತಹ ಹಿರಿಯ ಸಾಹಿತಿಗಳನ್ನು ಪೊಲೀಸರು ಠಾಣೆಗೆ ಕರೆಸಿ ಪ್ರಧಾನಿ ಮೋದಿಯವರನ್ನು ಏಕೆ ಟೀಕಿಸಿದಿರಿ? ಎಂದು ವಿಚಾರಿಸುವುದು, ಅವರಿಂದ ಮುಚ್ಚಳಿಕೆ ಬರೆಸಿಕೊಳ್ಳುವಂತಹ ಘಟನೆ ಮಂಡ್ಯದಲ್ಲಿ ನಡೆದಿದೆ. ಲೇಖಕರು, ಕಲಾವಿದರು, ಚಿಂತಕರ ಬಾಯಿ ಮುಚ್ಚಿಸುವ ಸರ್ವಾಧಿಕಾರಿ ನೀತಿ ಸಂವಿಧಾನದ ಮೇಲೆ ಸವಾರಿ ಮಾಡುತ್ತಿದೆ.

ಸ್ವತಂತ್ರ ಭಾರತ ನಡೆಯಬೇಕಾಗಿರುವುದು ಸಂವಿಧಾನದ ಆಧಾರದಲ್ಲಿ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಸಾಂವಿಧಾನಿಕವಾಗಿ ಕಾರ್ಯ ನಿರ್ವಹಿಸಬೇಕು. ಆದರೆ ಅದಕ್ಕೆ ಈಗ ಚ್ಯುತಿ ಬರುತ್ತಿದೆ. ಕ್ರಿಮಿನಲ್ ಮಾಫಿಯಾಗಳು ಕಾನೂನಿನ ಆಡಳಿತಕ್ಕೆ ಸವಾಲಾಗಿ ಪರಿಣಮಿಸಿವೆ. ಸಂವಿಧಾನ ರಕ್ಷಣೆ ನೀಡಿದ್ದರೂ ಅಸ್ಪಶ್ಯರ ಮೇಲೆ ಪ್ರತಿ ದಿನ ಸರಾಸರಿ 27 ದೌರ್ಜನ್ಯಗಳು ನಡೆಯುತ್ತಿವೆ. ಪ್ರತಿದಿನ ಐವರು ಅಸ್ಪಶ್ಯರ ಮನೆಗೆ ಬೆಂಕಿ ಹಚ್ಚಿ ಸುಡಲಾಗುತ್ತಿದೆ. ಪ್ರತಿವಾರ ಹನ್ನೊಂದು ಅಸ್ಪಶ್ಯರ ಹತ್ಯೆಯಾಗುತ್ತಿದೆ. ಮಹಿಳೆಯರ ಮೇಲೆ ಅತ್ಯಾಚಾರದ ಘಟನೆಗಳು ಹೆಚ್ಚಾಗುತ್ತಲೇ ಇವೆ. ರಾಷ್ಟ್ರೀಯ ಅಪರಾಧ ದಾಖಲಾತಿ ಸಂಸ್ಥೆಯ ವರದಿಯ ಪ್ರಕಾರ ಪ್ರತಿ 77 ನಿಮಿಷಗಳಿಗೆ ಒಬ್ಬ ಮಹಿಳೆ ಹಿಂಸೆಯಿಂದ ಅಸು ನೀಗುತ್ತಿದ್ದಾಳೆ. ಪ್ರತಿ 6 ತಾಸಿಗೆ ಒಬ್ಬ ವಿವಾಹಿತ ಮಹಿಳೆಯನ್ನು ಜೀವಂತ ಸುಟ್ಟು ಹಾಕಲಾಗುತ್ತಿದೆ. ದೇಶದಲ್ಲಿ ಸುಮಾರು 45 ಸಾವಿರ ಮಕ್ಕಳು ಪ್ರತಿವರ್ಷ ಕಾಣೆಯಾಗುತ್ತಿದ್ದಾರೆ. ನಕಲಿ ಎನ್ ಕೌಂಟರ್‌ಗಳು, ಪೊಲೀಸ್ ಠಾಣೆಗಳಲ್ಲಿ ಸಂಶಯಾಸ್ಪದ ಸಾವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇವುಗಳನ್ನೆಲ್ಲ ಪ್ರಶ್ನಿಸಿ ಧ್ವನಿಯೆತ್ತಿದರೆ ಅಂತಹವರನ್ನು ಅರ್ಬನ್ ನಕ್ಸಲ್ ಎಂದು ಕರೆದು ಜೈಲಿಗೆ ದಬ್ಬಲಾಗುತ್ತಿದೆ.

ಧರ್ಮನಿರಪೇಕ್ಷತೆ ನಮ್ಮ ಸಂವಿಧಾನದ ಮೂಲತತ್ವವಾಗಿದ್ದರೂ ಅದರ ಮೇಲೆಯೇ ದಾಳಿ ನಡೆದಿದೆ. ಯಾರು ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು, ಯಾವ ಬಟ್ಟೆ ಧರಿಸಬೇಕು, ಯಾರನ್ನು ಪ್ರೀತಿಸಬೇಕು, ಯಾರನ್ನು ಮದುವೆಯಾಗಬೇಕು, ಯಾರೊಂದಿಗೆ ಯಾರು ಮಾತಾಡಬೇಕು, ಎಷ್ಟು ಮದುವೆಯಾಗಬೇಕು, ಎಷ್ಟು ಮಕ್ಕಳನ್ನು ಹಡೆಯಬೇಕು ಎಂಬ ಅತ್ಯಂತ ವೈಯಕ್ತಿಕ ವಿಷಯಗಳನ್ನು ತೀರ್ಮಾನಿಸುವ ದೊಣ್ಣೆ ನಾಯಕರು ಈ ದೇಶದಲ್ಲಿ ಹುಟ್ಟಿಕೊಂಡಿದ್ದಾರೆ. ಗೋ ರಕ್ಷಣೆ, ಮತಾಂತರದ ಹೆಸರಿನಲ್ಲಿ ಅಲ್ಪಸಂಖ್ಯಾತರ ಮೇಲೆ ಪ್ರತಿ ದಿನ ಹಲ್ಲೆ ಮಾಡುತ್ತ ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ.

ಭಾರತವನ್ನು ಕಲ್ಯಾಣ ರಾಜ್ಯ ಮಾಡುವುದು ನಮ್ಮ ಸಂವಿಧಾನದ ಗುರಿಯಾಗಿದೆ. ಕಲ್ಯಾಣ ರಾಜ್ಯವೆಂದರೆ ಜನ ಸಾಮಾನ್ಯರಿಗೆ ಆಹಾರ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ಉದ್ಯೋಗ ಸುಲಭವಾಗಿ ಸಿಗುವಂತೆ ನೋಡಿಕೊಳ್ಳುವುದು ಈ ಸರಕಾರದ ಜವಾಬ್ದಾರಿ. ಆದರೆ ಶಿಕ್ಷಣ, ಆರೋಗ್ಯ, ಸಾರಿಗೆ ಸೇರಿದಂತೆ ಎಲ್ಲವನ್ನೂ ಅಂಬಾನಿ, ಅದಾನಿಯಂತಹ ಖಾಸಗಿ ರಂಗದ ತಿಮಿಂಗಿಲಗಳ ಮಡಿಲಿಗೆ ಹಾಕಲು ಹೊರಟ ಸರಕಾರ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರುತ್ತಿದೆ. ಸಾಮಾಜಿಕ ನ್ಯಾಯದ ಉದ್ದೇಶದಿಂದ ತರಲಾಗಿರುವ ದಲಿತ ದಮನಿತ ಸಮುದಾಯಗಳ ಮೀಸಲು ವ್ಯವಸ್ಥೆಯನ್ನು ನಾಶ ಮಾಡುವ ಮಸಲತ್ತು ನಡೆದಿದೆ.

ಒಂದೇ ದೇಶ, ಒಂದೇ ಭಾಷೆ, ಒಂದೇ ಧರ್ಮ, ಒಂದೇ ಸಂಸ್ಕೃತಿ ಹೆಸರಿನಲ್ಲಿ ವೈವಿಧ್ಯಮಯವಾದ ಭಾರತದ ಪ್ರಾದೇಶಿಕ ಅಸ್ಮಿತೆಗಳನ್ನು ನಾಶ ಮಾಡುವ ಹುನ್ನಾರ ನಡೆದಿದೆ. ದಕ್ಷಿಣ ಮತ್ತು ಈಶಾನ್ಯ ಭಾರತದ ರಾಜ್ಯಗಳ ಮೇಲೆ ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಹೇರುವ ದೌರ್ಜನ್ಯ ನಡೆದಿದೆ. ಬಾರಾ ಬಾನಗಡಿ ಮಾಡಿ ಶೇಕಡಾ 49ರಷ್ಟು ಮತಗಳನ್ನು ಮಾತ್ರ ಪಡೆದು ಕೇಂದ್ರದ ಚುಕ್ಕಾಣಿ ಹಿಡಿದ ನಾಗಪುರ ನಿರ್ದೇಶಿತ ಪಕ್ಷ ಸಂಸತ್ತಿನಲ್ಲಿ ಚರ್ಚೆ ಮಾಡದೆ ರೈತ ವಿರೋಧಿಯಾದ ಮೂರು ಕರಾಳ ಕೃಷಿ ಕಾಯ್ದೆಗಳನ್ನು ದೇಶದ ಮೇಲೆ ಹೇರಿದೆ. ಇನ್ನು ಮುಂದೆ ಕಾರ್ಮಿಕರು ಹನ್ನೆರಡು ತಾಸು ಕೆಲಸ ಮಾಡಬೇಕಾಗುತ್ತದೆ. ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಹೆಸರಿನಲ್ಲಿ ದೇಶದ ತುಂಬಾ ನಿಧಿ ಸಂಗ್ರಹದ ಅಭಿಯಾನ ನಡೆಸಿ ಕೋಮು ವೈಷಮ್ಯವನ್ನು ಜೀವಂತವಾಗಿಡುವ ಕಾರ್ಯ ಅತ್ಯಂತ ವ್ಯವಸ್ಥಿತವಾಗಿ ನಡೆದಿದೆ.

ಈಗ ದೇಶದ ಮುಂದೆ ಉಳಿದ ಏಕೈಕ ದಾರಿ ಬಾಬಾಸಾಹೇಬರ ಸಂವಿಧಾನದ ಸಂರಕ್ಷಣೆ. ಈ ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ ಎಂಬುದನ್ನು ಮರೆಯಬಾರದು.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News