×
Ad

"ನಾವು ಇತಿಹಾಸವನ್ನು ತಿದ್ದುಪಡಿಗೊಳಿಸಿದ್ದೇವೆ": ಬಾಬರಿ ಮಸೀದಿ ಧ್ವಂಸ ಕುರಿತು ಪ್ರಕಾಶ್‌ ಜಾವಡೇಕರ್‌ ಹೇಳಿಕೆ

Update: 2021-01-25 22:35 IST

ಹೊಸದಿಲ್ಲಿ,ಜ.25: ಭಾರತದ ಆತ್ಮ ಅಲ್ಲಿಯೇ ನೆಲೆಸಿದೆ ಎಂದು ತಿಳಿದಿದ್ದರಿಂದ ವಿದೇಶಿ ಆಕ್ರಮಣಕಾರರು ರಾಮ ಮಂದಿರವನ್ನು ಧ್ವಂಸ ಮಾಡಲು ಆಯ್ದುಕೊಂಡಿದ್ದರು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ರವಿವಾರ ತಿಳಿಸಿದ್ದಾರೆ.

ದಿಲ್ಲಿಯಲ್ಲಿ ಶ್ರೀರಾಮ ಜನ್ಮ ಭೂಮಿ ಮಂದಿರ ನಿಧಿ ಸಮರ್ಪಣಾ ಅಭಿಯಾನದ ದಾನಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಚಿವರು, 1992ರ ಡಿಸೆಂಬರ್ 6ರಂದು ಅಯೋಧ್ಯೆಯ ಬಾಬರಿ ಮಸೀದಿಯನ್ನು ನೆಲಸಮಗೊಳಿಸುವ ಮೂಲಕ ಐತಿಹಾಸಿಕ ತಪ್ಪನ್ನು ಸರಿಪಡಿಸಲಾಗಿದೆ ಎಂದು ಹೇಳಿದರು.

"ಡಿಸೆಂಬರ್‌ 6, 1992 ರಂದು ನಡೆದ ಐತಿಹಾಸಿಕ ಕಾರ್ಯದಲ್ಲಿ ನಾನು ಕೂಡಾ ಸಾಕ್ಷಿಯಾಗಿದ್ದೆ. ಆ ವೇಳೆ ನಾನು ಬಿಜೆಪಿ ಯುವ ಮೋರ್ಚಾದ ಸದಸ್ಯನಾಗಿದ್ದೆ. ಅಯೋಧ್ಯೆಯಲ್ಲಿ ಲಕ್ಷಾಂತರ ಕರಸೇವಕರು ನೆರೆದಿದ್ದರು. ನಾನು ಕೂಡಾ ಕರಸೇವಕನಾಗಿ ಭಾಗವಹಿಸಿದ್ದೆ. ಮಸೀದಿ ಧ್ವಂಸದ ಮುನ್ನಾದಿನ ರಾತ್ರಿ ನಾವು ಮಲಗುವ ವೇಳೆ ಮೂರು ಗುಂಬಝ್‌ ಗಳನ್ನು ನೋಡಿದ್ದೆವು. ಆದರೆ ಮರುದಿನ ಇತಿಹಾಸ ರಚನೆಯಾಯಿತು. ಐತಿಹಾಸಿಕ ತಪ್ಪನ್ನು ನಾವು ಸರಿಪಡಿಸಿದೆವು" ಎಂದು ಜಾವಡೇಕರ್‌ ಹೇಳಿಕೆ ನೀಡಿದ್ದಾರೆ.

ಬಾಬರ್ ನಂತಹ ವಿದೇಶಿ ಆಕ್ರಮಣಕಾರ ಭಾರತಕ್ಕೆ ಬಂದಾಗ ರಾಮ ದೇವಾಲಯವನ್ನು ಉರುಳಿಸಲು ಏಕೆ ಆಯ್ಕೆ ಮಾಡಿದ್ದ? ಏಕೆಂದರೆ ದೇಶದ ಆತ್ಮವು ದೇವಸ್ಥಾನದಲ್ಲಿ ನೆಲೆಸಿದೆ ಎಂದು ಆತನಿಗೆ ತಿಳಿದಿತ್ತು. ಅಲ್ಲಿ ಆತ ವಿವಾದಾತ್ಮಕ ರಚನೆಯನ್ನು ನಿರ್ಮಿಸಿದ್ದ. ಅದು ಮಸೀದಿಯಲ್ಲ. ಪ್ರಾರ್ಥನೆ ನಡೆಸದ ಸ್ಥಳ ಮಸೀದಿ ಅಲ್ಲ. ಡಿಸೆಂಬರ್ 6,1992ರಂದು ಒಂದು ಐತಿಹಾಸಿಕ ತಪ್ಪು ಕೊನೆಗೊಂಡಿತು ಎಂದು ಜಾವಡೇಕರ್ ಹೇಳಿದ್ದಾರೆ ಎಂದು ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News