ಕೊರೋನ ಲಸಿಕೆ ಬಗ್ಗೆ ವದಂತಿ ಹರಡುವವರ ವಿರುದ್ಧ ದಂಡನೀಯ ಕ್ರಮ ತೆಗೆದುಕೊಳ್ಳಿ ರಾಜ್ಯಗಳಿಗೆ ಕೇಂದ್ರ ಸರಕಾರ ನಿರ್ದೇಶನ

Update: 2021-01-25 17:22 GMT

ಹೊಸದಿಲ್ಲಿ, ಜ. 25: ಭಾರತದಲ್ಲಿ ಪ್ರಸ್ತುತ ನೀಡಲಾಗುತ್ತಿರುವ ಕೊರೋನ ಲಸಿಕೆಗಳಾದ ಸೆರಮ್ ಇನ್ಸ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿದ ಕೋವಿಶೀಲ್ಡ್, ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಹಾಗೂ ಉತ್ಪಾದಿಸಿದ ಕೊವ್ಯಾಕ್ಸಿನ್‌ನ ಪರಿಣಾಮದ ಬಗ್ಗೆ ವದಂತಿ ಹಬ್ಬಿಸುತ್ತಿರುವವರ ವಿರುದ್ಧ ದಂಡನಾ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಿದೆ.

ಕಳೆದ ವಾರ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಲಾದ ಪತ್ರದಲ್ಲಿ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಇಂತಹ ತಪ್ಪು ಮಾಹಿತಿ ಹಬ್ಬಿಸುವುದನ್ನು ನಿಭಾಯಿಸಲು ವ್ಯವಸ್ಥೆಯೊಂದನ್ನು ರೂಪಿಸಬೇಕು. ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗಳ ಪರಿಣಾಮಕಾರಿತ್ವದ ಬಗ್ಗೆ ವದಂತಿ ಹಬ್ಬಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ದಂಡನಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದಿದ್ದಾರೆ.

ಎರಡೂ ಲಸಿಕೆಗಳು ಸುರಕ್ಷಿತ ಹಾಗೂ ರೋಗ ನಿರೋಧಕ ಸಾಮರ್ಥ್ಯ ಹೊಂದಿದೆ ಎಂಬುದನ್ನು ದೇಶದ ರಾಷ್ಟ್ರೀಯ ನಿಯಂತ್ರಣ ಪ್ರಾಧಿಕಾರ ಕಂಡುಕೊಂಡಿದೆ ಎಂದು ನಾನು ದೃಢವಾಗಿ ಒತ್ತಿಹೇಳಲು ಬಯಸುತ್ತೇನೆ. ಆದರೆ, ಆಧಾರ ರಹಿತ ಹಾಗೂ ದಾರಿ ತಪ್ಪಿಸುವ ವದಂತಿಗಳು ಸಾಮಾಜಿಕ ಮಾಧ್ಯಮ ಹಾಗೂ ಇತರ ಮಾಧ್ಯಮಗಳಲ್ಲಿ ಹರಡುತ್ತಿವೆ. ಲಸಿಕೆಗಳ ಸುರಕ್ಷೆ ಹಾಗೂ ಪರಿಣಾಮಕಾರಿತ್ವದ ಬಗ್ಗೆ ಸಂದೇಹ ಮೂಡಿಸಿದೆ ಎಂದು ಅವರು ಹೇಳಿದ್ದಾರೆ. ಪಟ್ಟಭದ್ರ ಹಿತಾಸಕ್ತಿಗಳು ಹರಡುತ್ತಿರುವ ಇಂತಹ ವದಂತಿಗಳು ಜನರಲ್ಲಿ ಅನಗತ್ಯ ಸಂದೇಹ ಸೃಷ್ಟಿಸುತ್ತದೆ. ಆದುದರಿಂದ ಲಸಿಕೆಗಳ ಪರಿಣಾಮಕಾರಿತ್ವ ಹಾಗೂ ರೋಗ ನಿರೋಧ ಸಾಮರ್ಥ್ಯದ ಬಗ್ಗೆ ವಂದತಿ ಹರಡಿಸುವುದನ್ನು ನಿಯಂತ್ರಿಸುವ ಅಗತ್ಯತೆ ಇದೆ ಎಂದು ಭಲ್ಲಾ ಅವರು ಪತ್ರದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News