ಹೋರಾಟಕ್ಕೆ ಹೊಸ ಭಾಷೆ ಕಲಿಸುತ್ತಿರುವ ರೈತ ಚಳವಳಿ

Update: 2021-01-30 07:32 GMT

ಇವತ್ತು ರೈತ ಹೋರಾಟದ ಬಗ್ಗೆ ಜಗತ್ತಿಗೆ ತಿಳಿದಿದೆ. ಆಸ್ಟ್ರೇಲಿಯ, ಕೆನಡ, ಇಟಲಿ, ನ್ಯೂಝಿಲ್ಯಾಂಡ್, ಪಾಕಿಸ್ತಾನ, ಇಂಗ್ಲೆಂಡ್, ಅಮೆರಿಕ ಮತ್ತಿತರ ದೇಶಗಳು ರೈತರ ಪರವಾಗಿ ತಮ್ಮ ಸಹಾನುಭೂತಿಯನ್ನು ಪ್ರಕಟಿಸಿವೆ. ಜನವರಿ 26ರಂದು ನಡೆಯುವ ಟ್ರಾಕ್ಟರ್ ಪರೇಡನ್ನು ವರದಿ ಮಾಡಲು ಈಗಾಗಲೇ 50ಕ್ಕೂ ಹೆಚ್ಚು ದೇಶಗಳ ವರದಿಗಾರರು ದಿಲ್ಲಿ ತಲುಪಿದ್ದಾರೆ. ಇದೊಂದು ಅತ್ಯಂತ ಮಹತ್ವದ ರೈತ ಚಳವಳಿ ಎಂಬುದನ್ನು ಇವತ್ತು ಜಗತ್ತು ಒಪ್ಪಿಕೊಂಡಿದೆ. ಚಳವಳಿಯು ಕೇಂದ್ರ-ರಾಜ್ಯಗಳ ಸಂಬಂಧದ (ಫೆಡರಲ್ ರಚನೆ) ಕುರಿತು, ಖಾಸಗೀಕರಣ ಮತ್ತು ನವವಸಾಹತುಶಾಹಿ ಶಕ್ತಿಗಳ ಆಕ್ರಮಣದ ಬಗ್ಗೆ ಪ್ರಶ್ನೆಗಳನ್ನೆತ್ತಿದೆ. ಹೋರಾಟದ ಹೊಸ ತಂತ್ರಗಳನ್ನು ಅನ್ವೇಷಣೆ ಮಾಡಿಕೊಂಡಿದೆ. ಹೀಗಾಗಿ ವಿಶ್ವದ ಗಮನ ರೈತರ ಕಡೆಗೆ ನೆಟ್ಟಿದೆ.


ಭಾರತೀಯ ಪ್ರಜಾಪ್ರಭುತ್ವದ ಕೇಂದ್ರವಾದ ದಿಲ್ಲಿಯ ಸಂಸತ್‌ಭವನದಿಂದ ಸುಮಾರು 40 ಕಿ.ಮೀ. ದೂರದಲ್ಲಿ ಐದು ಕಡೆಗಳಲ್ಲಿ ಲಕ್ಷಾಂತರ ರೈತರು ಭಾರತದ ಬಾವುಟ ಹಿಡಿದು ಬೀಡುಬಿಟ್ಟಿದ್ದಾರೆ. ಇದು ಹೇಗಿದೆಯೆಂದರೆ, ಇತಿಹಾಸ ಪುಸ್ತಕಗಳಲ್ಲಿ ವಿರೋಧಿಗಳು ಅರಸನ ಕೋಟೆಯ ಸುತ್ತ ಬೀಡು ಬಿಟ್ಟು ಒಳಗೆ ನುಗ್ಗಲು ಸರಿಯಾದ ಸಮಯಕ್ಕಾಗಿ ಕಾಯುತ್ತಿರುವ ಹಾಗೆ! ಒಂದೇ ವ್ಯತ್ಯಾಸವೆಂದರೆ ಈ ಸಲ ಹೊರಗಿನಿಂದ ಬಂದವರು ವಿರೋಧಿಗಳಲ್ಲ, ಬದಲು ನಮ್ಮವರೇ! ಕೇಂದ್ರ ಸರಕಾರ ಸುಗ್ರೀವಾಜ್ಞೆಯ ಮೂಲಕ ತಂದ ಮೂರು ಕಾಯ್ದೆಗಳ ವಿರುದ್ಧ ರೈತರು ಇದೀಗ ನಿರ್ಣಾಯಕ ಹೋರಾಟ ಸಾರಿದ್ದಾರೆ. ಹೋರಾಟವೆಂದರೆ ಘೋಷಣೆ ಕೂಗುವುದು ಎಂದು ನಂಬಿದ್ದ ನನ್ನಂಥವರಿಗೆ ಸಣ್ಣ ಅಚ್ಚರಿಯೂ ಅಲ್ಲಿ ಕಾದಿದೆ. ಅದೆಂದರೆ ಅಲ್ಲಿ ಘೋಷಣೆಯೇ ಇಲ್ಲ. ಅಲ್ಲಿರುವ ಯಾರ ಮುಖದಲ್ಲಿಯೂ ಆಕ್ರೋಶವಿಲ್ಲ. ಅದರ ಬದಲು ಅವರೆಲ್ಲ ದಿಲ್ಲಿಯ ಗಡಿ ಭಾಗಗಳಲ್ಲಿನ ಸುಮಾರು 25 ಎಕರೆ ಜಾಗದಲ್ಲಿ ಊರುಗಳನ್ನೇ ಕಟ್ಟಿಕೊಂಡು ತಣ್ಣಗೆ ಕುಳಿತು ಬಿಟ್ಟಿದ್ದಾರೆ. ಕೆಲವರಿಗೆ ಟ್ರಾಕ್ಟರ್‌ನ ಟ್ರಾಲಿಗಳೇ ಮನೆಯಾದರೆ, ಮತ್ತೆ ಕೆಲವರಿಗೆ ಟ್ರಾಲಿಯ ತಳಭಾಗವೇ ಆವಾಸ ಸ್ಥಾನ. ಸಣ್ಣ ಪುಟ್ಟ ಟೆಂಟುಗಳೂ ಇವೆ. ಊಟ, ಚಹಾ, ತಿಂಡಿ, ಯಾವಾಗ ಬೇಕಾದರೂ ಯಾರಿಗೆ ಬೇಕಾದರೂ ಸಿಗುತ್ತದೆ. ಅಲ್ಲಲ್ಲಿ ಉಪನ್ಯಾಸಗಳಿವೆ, ಚರ್ಚೆ, ಪಟ್ಟಾಂಗಕ್ಕೂ ತೊಂದರೆಯಿಲ್ಲ. ಮಾರುಕಟ್ಟೆಗಳೂ ತಲೆ ಎತ್ತಿವೆ.

‘‘ಈ ಪ್ರತಿಭಟನಾ ಊರಿನಲ್ಲಿ ಏನಾಗುತ್ತಿದೆ ಎಂದು ತಿಳಿಯಲು ಗೋಧಿ ಮೀಡಿಯಾಗಳನ್ನು ನೋಡಬೇಡಿ, ಬದಲು ಇದನ್ನು ಓದಿ’’ ಎಂದು ರೈತರು ‘ಟ್ರಾಲಿ ಟೈಮ್ಸ್’ ಎಂಬ ನಾಲ್ಕು ಪುಟದ ಪತ್ರಿಕೆಯನ್ನು ನಿಮ್ಮ ಕೈಗೆ ನೀಡುತ್ತಾರೆ. ಇದನ್ನು ಶುರು ಮಾಡಿದವಳು 29 ವರ್ಷದ ರವಿಕಿರಣ್‌ನತ್ ಎಂಬ ಯುವತಿ. ಪತ್ರಿಕೆಯ ಮೊದಲ ಪುಟದಲ್ಲಿ ಚಳವಳಿಯ ಸುದ್ದಿ ಮತ್ತು ನಾಳೆ ಏನೇನು ನಡೆಯಲಿದೆ ಎಂಬುದರ ಕುರಿತು ಪ್ರಕಟನೆ, ಎರಡು ಮತ್ತು ಮೂರನೇ ಪುಟದಲ್ಲಿ ಮೈ ನವಿರೇಳಿಸುವ ಹೋರಾಟದ ಕತೆಗಳು, ನಾಲ್ಕನೇ ಪುಟದಲ್ಲಿ ಕವಿತೆ, ಕಾರ್ಟೂನ್, ಫೋಟೊ ಇತ್ಯಾದಿಗಳಿರುತ್ತವೆ. ‘‘ಸದ್ಯ 5,000 ಪ್ರತಿಗಳನ್ನು ಮುದ್ರಿಸುತ್ತಿದ್ದೇನೆ, ಹಾಕಿದ ದುಡ್ಡಿಗೆ ತೊಂದರೆಯಿಲ್ಲ, ಮೇಲಾಗಿ ಇದೇನೂ ಹಣ ಮಾಡುವ ಕೆಲಸ ಅಲ್ವಲ್ಲಾ’’ ಅಂತಾಳೆ ಆಕೆ ಮುಗುಳ್ನಗುತ್ತಾ. ಹಾಗೆಂದು ‘‘ಸ್ವಲ್ಪಆರ್ಥಿಕ ಸಹಾಯ ನೀಡಲೇ?’’ ಅಂತ ಕೇಳಿದರೆ, ‘‘ಈಗ ಬೇಡ, ಬೇಕಾದಾಗ ಕೇಳುತ್ತೇನೆ’ ಎಂದು ನಿಮ್ಮ ನಂಬರನ್ನು ಆಕೆ ಬರೆದಿಟ್ಟುಕೊಳ್ಳುತ್ತಾಳೆ.

ಚಳವಳಿಯಲ್ಲಿ ಭಾಗಿಯಾದವರೆಲ್ಲ ಗುಂಪು ಗುಂಪಾಗಿ ‘ಟ್ರಾಲಿ ಟೈಮ್ಸ್’ ಓದುತ್ತಾರೆ. ರೈತ ನಾಯಕರು ಫೇಸ್‌ಬುಕ್, ಯೂಟ್ಯೂಬ್‌ಗಳಲ್ಲಿ ಲೈವ್‌ಬಂದರೆ, ಟ್ರಾಲಿಯಡಿಯಲ್ಲಿ ಮಲಗಿಕೊಂಡೇ ಅದಕ್ಕೆ ಕಿವಿಗೊಡುತ್ತಾರೆ. ಬೇಸರವಾದರೆ ಅಲ್ಲೊಂದೆರೆಡು ಗ್ರಂಥಾಲಯಗಳಿವೆ. ಈಚೆಗೆ ಜಿಮ್ ಕೂಡಾ ಮಾಡಿಕೊಂಡಿದ್ದಾರೆ. ಉಚಿತ ವೈದ್ಯಕೀಯ ವ್ಯವಸ್ಥೆ ಲಭ್ಯವಿದೆ. ಚಿತ್ರಕಲಾ ಶಿಬಿರಗಳು, ಪೋಸ್ಟರ್‌ಗಳ ನಿರ್ಮಾಣ ನಿರಂತರವಾಗಿ ನಡೆಯುತ್ತಿದೆ. ಈ ಎಲ್ಲಾ ವ್ಯವಸ್ಥೆಗಳೊಂದಿಗೆ ಆರು ತಿಂಗಳು ಉಳಿಯಲು ತಯಾರಾಗಿ ಬಂದಿರುವ ರೈತರು, ಈಗ ಒಂದು ವರ್ಷ ಇಲ್ಲಿರಲು ತೊಂದರೆಯಿಲ್ಲ ಅಂತಿದ್ದಾರೆ. ಹೀಗೆ ಇಡೀ ಊರಿಗೆ ಊರೇ ಚಳವಳಿಯ ಕೇಂದ್ರವಾಗಿದೆ, ಅದೂ ಕೇಂದ್ರ ಸರಕಾರದ ಮೂಗಿನಡಿಯಲ್ಲಿ. ಈ ಪರಿ ಹೊಸತು. ಒಮ್ಮೆ ಆ ಪ್ರದೇಶದ ಒಳ ಹೊಕ್ಕರೆ, ನೀವು ಅವರ ಬಂಧುತ್ವದ ಭಾಗವಾಗಿಬಿಡುತ್ತೀರಿ. ಜಾತಿ, ಮತ, ಪ್ರದೇಶ ಮತ್ತು ವಯಸ್ಸಿನ ಹಂಗಿಲ್ಲದೆ ಚಳವಳಿನಿರತ ಪಂಜಾಬಿ ರೈತರು ನಿಮ್ಮ ಹೃದಯದೊಳಕ್ಕೆ ಪ್ರವೇಶ ಮಾಡುವ ರೀತಿ ಅನನ್ಯವಾದುದು. ಕೋಮುವಾದವಂತೂ ಒಂದಿನಿತೂ ನುಸುಳದಂತೆ ನೋಡಿಕೊಂಡಿದ್ದಾರೆ.

ನವೆಂಬರ್ 26ರಿಂದ ದಿಲ್ಲಿಯ ಈ ಹೊಸ ಊರಿನಲ್ಲಿ ಚಳಿಗೆ ಬೆದರದೆ ಚಳವಳಿ ನಡೆಸುತ್ತಿರುವ ರೈತರಲ್ಲಿ ಮುದುಕರಿದ್ದಾರೆ, ಯುವಕರಿದ್ದಾರೆ ಮತ್ತು ಮಕ್ಕಳೂ ಇದ್ದಾರೆ. ಆದರೆ ಮಹಿಳೆಯರ ಸಂಖ್ಯೆ ಕಡಿಮೆ. ಈ ಕುರಿತು ಗುರುದಾಸಪುರ್ ಕಡೆಯಿಂದ ಅಗಮಿಸಿದ 75 ವರ್ಷದ ಜಸ್ವಿಂದರ್ ಅವರನ್ನು ಕೇಳಿದರೆ ಅವರು ಹೇಳಿದ್ದು ಹೀಗೆ -‘‘ನನ್ನ ಹೆಂಡತಿ ಸದ್ಯ ಮನೆಯಲ್ಲಿದ್ದು ಅಲ್ಲಿನ ಜವಾಬ್ದಾರಿ ಹೊತ್ತುಕೊಂಡಿದ್ದಾಳೆ. ಸ್ವಲ್ಪ ದಿವಸದಲ್ಲಿ ಆಕೆ ಇಲ್ಲಿಗೆ ಬರುತ್ತಾಳೆ, ನಾನು ಅಲ್ಲಿಗೆ ಹೋಗುತ್ತೇನೆ’’. ಅವರು ಹೇಳಿದ್ದು ನಿಜ. ಡಿಸೆಂಬರ್ 24ರಂದು ನಾನು ಸಿಂಘು ಗಡಿಗೆ ಹೋದಾಗ ಅಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅಂದರೆ ಇದರ ಅರ್ಥ ಇಷ್ಟೆ. ಯಾವುದೋ ಒಂದು ದಿನ ನೀವು ರೈತರನ್ನು ನೋಡಲು ಹೋದರೆ ನಿಮಗೆ ಪೂರ್ಣ ಚಿತ್ರ ದೊರೆಯುವುದಿಲ್ಲ. ಕನಿಷ್ಠ ಒಂದು ವಾರ ನಿರಂತರವಾಗಿ ಅಲ್ಲಿದ್ದರೆ ಚಳವಳಿಯ ಒಳ ಹೊರಗುಗಳು ಅರ್ಥವಾದೀತು. ವಿದೇಶಗಳಲ್ಲಿ ಕೃಷಿಯು ಸಾಧಿಸಿದ ಪ್ರಗತಿಯನ್ನು ಚಳವಳಿ ನಿರತ ರೈತರು ಚೆನ್ನಾಗಿ ಅಭ್ಯಾಸ ಮಾಡಿದ್ದಾರೆ. ಎಷ್ಟೋ ರೈತರ ಮಕ್ಕಳು ಅಮೆರಿಕ, ಕೆನಡ, ಆಸ್ಟ್ರೇಲಿಯ ಮತ್ತು ನ್ಯೂಝಿಲ್ಯಾಂಡ್‌ಗಳಲ್ಲಿ ಕೆಲಸ ಮಾಡುತ್ತಿರುವುದರಿಂದ ಕೃಷಿ ಕುರಿತ ಅವರ ತಿಳುವಳಿಕೆ ಅತ್ಯಾಧುನಿಕವಾಗಿದೆ.

ಅಮೃತಸರದಿಂದ ಆಗಮಿಸಿದ ಜೋಗಿಂದರ್ ಎಂಬ ಹೆಸರಿನ ಸುಮಾರು 65 ವರ್ಷದ ರೈತರೊಡನೆ ನಾನೊಮ್ಮೆ ಕೇಳಿದೆ-‘‘ನಮ್ಮ ದೇಶದ ಸಾಂಪ್ರದಾಯಿಕ, ಮಳೆ ಆಧಾರಿತ ಕೃಷಿಯನ್ನು ನೋಡಿದಾಗ, ನಮ್ಮ ಕೃಷಿ ಪದ್ಧತಿಯಲ್ಲಿ ಸುಧಾರಣೆ ಅಗತ್ಯ ಎಂದು ನಿಮಗೆ ಅನ್ನಿಸುವುದಿಲ್ಲವೇ? 1995ರಿಂದ 2019ರ ನಡುವೆ ಒಟ್ಟು 2,96,438 ರೈತರು ನಮ್ಮ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡದ್ದು ನಿಮ್ಮ ಗಮನಕ್ಕೆ ಬಂದಿಲ್ಲವೇ?’’ ಜೋಗಿಂದರ್ ಸಣ್ಣ ಭಾಷಣವನ್ನೇ ಬಿಗಿದರು-‘‘ಹೌದು, ನಮ್ಮ ಕೃಷಿ ಪದ್ಧತಿಯಲ್ಲಿ ಬದಲಾವಣೆ ಬೇಕು, ಅದರ ಕುರಿತು ರೈತರೊಡನೆ ಸರಕಾರ ಚರ್ಚಿಸಬೇಕು, ಆದರೆ ಈ ಸರಕಾರ ಯಾರೊಡನೆ ಮಾತಾಡಿದೆ? ಅದಾನಿ-ಅಂಬಾನಿಗಳೊಡನೆ ವ್ಯಾಪಾರ ಕುದುರಿಸಲು ಮಾಡಿದ ಕಾಯ್ದೆಗಳನ್ನು ನಾವ್ಯಾಕೆ ಒಪ್ಪಬೇಕು? ವ್ಯಾಪಾರಿಗಳೊಡನೆ ನಾವು ಮಾತಾಡುತ್ತೇವೆ, ಸರಕಾರ ನಮ್ಮಾಡನೆ ಮಾತಾಡಲಿ, ಸರಕಾರದ ತಪ್ಪುನೀತಿಗಳಿಂದ ದೇಶದಾದ್ಯಂತ ರೈತರು ಸಿಡಿದೇಳುತ್ತಿದ್ದಾರೆ, 2014ರಿಂದ ರೈತ ಹೋರಾಟಗಳು ಶೇಕಡಾ 700 ರಷ್ಟು ಹೆಚ್ಚಿವೆ’’. ಅಚ್ಚರಿಯೆಂದರೆ ಹೀಗೆ ಖಚಿತವಾಗಿ ಅಲ್ಲಿರುವ ಎಲ್ಲರೂ ಮಾತಾಡಬಲ್ಲರು.

94 ವರ್ಷದ ವೃದ್ಧರೊಬ್ಬರು ಇಂಗ್ಲಿಷ್ ಭಾಷೆಯಲ್ಲಿಯೇ - ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಸುಗ್ರೀವಾಜ್ಞೆ 2020, ಅಗತ್ಯ ಸರಕುಗಳ (ತಿದ್ದುಪಡಿ) ಸುಗ್ರೀವಾಜ್ಞೆ 2020 ಮತ್ತು ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆಗಳ ಖಾತರಿ ಒಪ್ಪಂದದ ಭರವಸೆ ಮತ್ತು ಕೃಷಿ ಸೇವೆಗಳ ಸುಗ್ರೀವಾಜ್ಞೆ 2020- ಈ ಮೂರೂ ವಿವಾದಿತ ಕಾಯ್ದೆಗಳ ಬಗ್ಗೆ ವಿದೇಶೀ ಚಾನೆಲೊಂದಕ್ಕೆ ಮಾತಾಡಿದಾಗ ನಾನಲ್ಲಿದ್ದೆ. ಈ ಕಾಯ್ದೆಗಳಿಂದ ರೈತರ ಮೇಲಾಗುವ ದೂರಗಾಮೀ ಪರಿಣಾಮಗಳ ಬಗ್ಗೆ ಅವರು ಈ ದೇಶದ ಯಾವುದೇ ಕೃಷಿ ವಿಜ್ಞಾನಿಗೆ ಕಡಿಮೆಯಿಲ್ಲದಂತೆ ಮಾತಾಡಿದಾಗ ನಾನು ನಿಜಕ್ಕೂ ದಂಗಾಗಿದ್ದೆ. ಭಾರತದ ಕೃಷಿ ಪದ್ಧತಿಯು ಕಾರ್ಪೊರೇಟ್ ಹಿಡಿತಕ್ಕೆ ಬಂದರೆ, ಆಗ ಬೆಂಬಲ ಬೆಲೆ, ಗೊಬ್ಬರ ಸಬ್ಸಿಡಿ, ಬೆಳೆ ಪರಿಹಾರ, ಇತ್ಯಾದಿಗಳೆಲ್ಲ ಹಂತ ಹಂತವಾಗಿ ರದ್ದಾಗುತ್ತದೆ ಎಂದು ಅಲ್ಲಿರುವ ಪ್ರತಿಯೊಬ್ಬರೂ ಭಾವಿಸಿದ್ದಾರೆ. ಜೊತೆಗೆ ಅಗತ್ಯ ವಸ್ತು ಬೆಲೆ ನಿಯಂತ್ರಣ ಇಲ್ಲವಾಗುವುದರಿಂದ ರೈತರೂ ಸೇರಿದಂತೆ ಎಲ್ಲರೂ ವಿಪರೀತ ಬೆಲೆ ಏರಿಕೆಗೆ ಬಲಿಯಾಗಬೇಕಾಗುತ್ತದೆ. ಇದರಿಂದ ಸಾವಿರಾರು ಸಮಸ್ಯೆಗಳು ಹೊಸದಾಗಿ ಉದ್ಭವಿಸಲಿವೆ ಎಂದು ಹೇಳುತ್ತಿದ್ದಾರೆ. ಶಿಕ್ಷಣ ಮತ್ತು ವೈದ್ಯಕೀಯ ಪದ್ಧತಿಯ ಖಾಸಗೀಕರಣದಿಂದ ಉಂಟಾದ ಅಪಾಯಗಳ ಬಗ್ಗೆಯೂ ಅಲ್ಲಿ ರೈತರು ಮಾತಾಡುತ್ತಾರೆ, ನಮ್ಮನ್ನು ಎಚ್ಚರಿಸುತ್ತಾರೆ.

ಚಳವಳಿಯಲ್ಲಿ ಪಂಜಾಬಿನ ವಿವಿಧ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಅವರು ‘‘ಜನರು ಕೊರೋನ ಭಯದಲ್ಲಿದ್ದಾಗ ಸರಕಾರ ಸುದೀರ್ಘ ಪರಿಣಾಮ ಬೀರುವ ಈ ಕಾಯ್ದೆಗಳನ್ನು ವ್ಯಾಪಕವಾಗಿ ಚರ್ಚಿಸದೆ, ಸುಗ್ರೀವಾಜ್ಞೆಯ ಮೂಲಕ ತರುವ ಅಗತ್ಯವೇನಿತ್ತು?, ಈ ಕಾಯ್ದೆ ಅಧಿಕೃತವಾಗಿ ಜಾರಿಯಾಗುವ ಮುನ್ನವೇ ಸರಕಾರವು ಬಹುರಾಷ್ಟ್ರೀಯ ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆಯೇ?, ಮಸೂದೆಯನ್ನು ರಾಜ್ಯ ಸಭೆಯಲ್ಲಿ ಧ್ವನಿಮತದಿಂದ ಅಂಗೀಕರಿಸಿದ್ದು ಯಾಕೆ? ಯಾಕೆ ಮತಕ್ಕೆ ಹಾಕಲಿಲ್ಲ?, ಸಂವಿಧಾನದ ಪ್ರಕಾರ ಕೃಷಿಯು ರಾಜ್ಯ ಸರಕಾರದ ಅಧೀನದಲ್ಲಿ ಬರುತ್ತದೆ. ಅದರ ಬಗ್ಗೆ ಕೇಂದ್ರ ಸರಕಾರವು ಈ ಬಗೆಯ ತೀರ್ಮಾನ ತೆಗೆದುಕೊಂಡದ್ದು ಸಂವಿಧಾನ ಬಾಹಿರವಲ್ಲವೇ?’’ ಎಂಬಿತ್ಯಾದಿ ಪ್ರಶ್ನೆಗಳನ್ನು ಎತ್ತುತ್ತಲೇ ಇದ್ದಾರೆ. ಅಲ್ಲಿ ಉಪನ್ಯಾಸ ನೀಡಲು ಆಗಮಿಸುವ ವಿದ್ವಾಂಸರಿಗೆ ಈ ಕುರಿತು ಮಾತಾಡಲು ಕೋರುತ್ತಾರೆ. ಪಟಿಯಾಲದ ಡಾ. ರಿಂಕೂ ರಾಣಿಯವರಿಗೆ ಚಳವಳಿಯು ಅವರ ವಿಶ್ವವಿದ್ಯಾನಿಲಯದ ವಿಸ್ತರಣ ಕೇಂದ್ರ ಅಷ್ಟೆ. ‘‘ಇಲ್ಲಿ ಬಂದ ಮೇಲೆ ತುಂಬ ಕಲಿತೆ’’ ಎಂದು ಅವರು ಹರ್ಷ ವ್ಯಕ್ತ ಪಡಿಸುತ್ತಾರೆ.

ದಿಲ್ಲಿ ಗಡಿಯಲ್ಲಿ ರೈತರು ನವೆಂಬರ್ 26ರಿಂದ ಇರುವುದು ನಿಜ. ಆದರೆ ಅವರು ಕಾಯ್ದೆ ಜಾರಿಗೆ ಬಂದ ನಾಲ್ಕನೇ ದಿನದಿಂದಲೇ ಅಂದರೆ, ಸೆಪ್ಟಂಬರ್ 24ರಂದು ರೈಲ್‌ರೋಖೋ ಚಳವಳಿ ನಡೆಸುವುದರ ಮೂಲಕ ಕಾಯ್ದೆ ಪ್ರತಿಭಟನೆಗೆ ಶುರು ಮಾಡಿದ್ದಾರೆ. ಆನಂತರ ದೇಶದ ಸುಮಾರು 550 ರೈತ ಸಂಘಟನೆಗಳನ್ನು ಸೇರಿಸಿ ಅಕ್ಟೋಬರ್ 27ರಂದು ದಿಲ್ಲಿಯಲ್ಲಿ ಸಭೆ ಸೇರಿದ್ದಾರೆ. ಆಗ ಎಚ್ಚೆತ್ತ ಸರಕಾರ ನವೆಂಬರ್ 13ರಂದು ರೈತರ ಸಭೆ ಕರೆದರೂ ಅದು ವಿಫಲವಾಯಿತು. ಮುಂದೆ ರೈತರು ನವೆಂಬರ್ 26ರಂದು ದಿಲ್ಲಿ ಚಲೋ ಚಳವಳಿಗೆ ಕರೆಕೊಟ್ಟರು. ಅದರ ಪರಿಣಾಮವಾಗಿ ಇವತ್ತು ಸುಮಾರು ಎರಡೂವರೆ ಲಕ್ಷ ಜನರು ಮತ್ತು ಸಾವಿರಾರು ಟ್ರಾಕ್ಟರುಗಳು ದಿಲ್ಲಿ ಗಡಿ ಭಾಗದಲ್ಲಿ ಸೇರಿವೆ. ಜನವರಿ 26ರಂದು ರೈತರೇ ಜನ ಗಣರಾಜ್ಯೋತ್ಸವವನ್ನೂ ಆಚರಿಸಲಿದ್ದಾರೆ. ಸರಕಾರವು ಮೊದಲ ಹಂತದಲ್ಲಿ ರೈತರನ್ನು ಲಘುವಾಗಿ ಪರಿಗಣಿಸಿತ್ತು. ದಿಲ್ಲಿಗೆ ಆಗಮಿಸುತ್ತಿದ್ದ ರೈತರು ಬುರಾರಿ ಎಂಬಲ್ಲಿ ಜಮಾಯಿಸಬಹುದೆಂದು ಹೇಳಿತು. ಯಾವುದೇ ವ್ಯವಸ್ಥೆ ಇಲ್ಲದ ಬುರಾರಿಯನ್ನು ರೈತರು ತಿರಸ್ಕರಿಸಿದರು. ಬಹುಶಃ ಇದು ರೈತರಿಗೆ ತಮ್ಮ ಹೋರಾಟದಲ್ಲಿ ಸಿಕ್ಕ ಮೊದಲ ಜಯವೂ ಹೌದು. ಆಮೇಲೆ ಪೊಲೀಸರು ರೈತರನ್ನು ತಡೆದರು. ರಸ್ತೆಗಳನ್ನು ಅಗೆದು ಅವರು ಒಳ ಪ್ರವೇಶ ಮಾಡದಂತೆ ಮಾಡಿದರು. ಯಾವುದಕ್ಕೂ ಸಹನೆ ಕಳಕೊಳ್ಳದ ಚಳವಳಿಗಾರರು ದಿಲ್ಲಿಯ ಗಡಿ ಭಾಗಗಳಾದ ಸಿಂಘು, ಟಿಕ್ರಿ, ಅವುಚಂದಿ, ಲಾಂಪುರ್, ಮಣಿಯಾರಿ, ಮಂಗೇಶ್ ಮತ್ತು ಝರೋಡಾದಲ್ಲಿ ಠಿಕಾಣಿ ಹೂಡಿದರು. ಇಲ್ಲಿಂದ ಮುಂದೆ ಪೊಲೀಸರು ರೈತರೊಡನೆ ಅನುಚಿತವಾಗಿ ನಡೆದುಕೊಂಡದ್ದು ಇದುವರೆಗೆ ವರದಿಯಾಗಿಲ್ಲ.

‘‘ಅವರೂ ನಮ್ಮ ಮಕ್ಕಳೇ, ಹೊಟ್ಟೆಪಾಡಿಗೆ ಸರಕಾರದ ಕೆಲಸ ಮಾಡುತ್ತಾರೆ, ನಮ್ಮನ್ನು ಅವರು ವಿರೋಧಿಸಲು ಸಾಧ್ಯವಿಲ್ಲ’’ ಅಂತಾರೆ ಸುಮಾರು 50 ವರ್ಷದ ರತನ್‌ಸಿಂಗ್. ಈ ಹೊತ್ತಿಗೆ ರೈತರ ಬಗ್ಗೆ ಅಪಪ್ರಚಾರಗಳನ್ನು ವ್ಯಾಪಕವಾಗಿ ಹರಿದು ಬಿಡಲಾಯಿತು. ಜೆಎನ್‌ಯು ಮತ್ತು ಜಾಮಿಯಾ ಮಿಲ್ಲಿಯಾದ ವಿರುದ್ಧ ಬಳಸಲಾದ, ದೇಶದ್ರೋಹಿಗಳು, ಭಯೋತ್ಪಾದಕರು, ಅರ್ಬನ್ ನಕ್ಸಲರು, ವಿರೋಧ ಪಕ್ಷಗಳ ಏಜಂಟರು, ಪಾಕಿಸ್ತಾನಿ ಬೆಂಬಲಿಗರು, ಕಮ್ಯುನಿಸ್ಟರು ಮೊದಲಾದ ಪದಗಳನ್ನು ಹರಡಲಾಯಿತು. ಕೋಮುವಾದಿ ಬಣ್ಣ ಬಳಿಯಲೂ ಪ್ರಯತ್ನಿಸಲಾಯಿತು. ಚಳವಳಿ ನಿರತರು ಪಂಜಾಬಿಗಳಾದ್ದರಿಂದ ಖಾಲಿಸ್ತಾನಿಗಳೆಂದೂ ಕರೆಯಲಾಯಿತು. ಆದರೆ ಇವ್ಯಾವುವೂ ರೈತರ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ. ‘‘ಈ ಸರಕಾರ ಇಂತಹ ಕೆಲಸ ಮಾಡಿಯೇ ತನ್ನ ಹೆಸರು ಹಾಳು ಮಾಡಿಕೊಂಡಿದೆ. ಖಾಲಿಸ್ತಾನಿಗಳಿದ್ದರೆ ಬಂದು ಹಿಡಿದುಕೊಂಡು ಹೋಗಲಿ, ದೇಶದ್ರೋಹಿಗಳಿದ್ದರೆ ಯಾರೆಂದು ಹೇಳಲಿ’’ ಎಂದೆಲ್ಲ ರೈತರು ಗಟ್ಟಿಯಾಗಿ ಹೇಳತೊಡಗಿದರು. ದಿನಕಳೆದಂತೆ ಈ ಆರೋಪಗಳೆಲ್ಲಾ ತಾವೇ ತಣ್ಣಗಾಗಿ ಮೂಲೆ ಸೇರಿದವು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ರೇ ‘‘ರೈತರನ್ನು ಹಾಗೆಲ್ಲ ಕರೆಯುವುದನ್ನು ನಾನು ಒಪ್ಪುವುದಿಲ್ಲ’’ ಎಂದು ಗಟ್ಟಿಯಾಗಿ ಹೇಳಿದರು. ರೈತ ವಿರೋಧಿಗಳ ಅಪಪ್ರಚಾರವನ್ನು ಮೆಟ್ಟಿ ನಿಂತದ್ದು ರೈತರಿಗೆ ಸಿಕ್ಕ ಎರಡನೇ ಜಯ. 11 ಸಭೆಗಳ ಆನಂತರವೂ ಸಮಸ್ಯೆ ಪರಿಹಾರವಾಗಿಲ್ಲ. ಸರಕಾರ ತನ್ನ ಸಮಸ್ಯೆಯನ್ನು ಸುಪ್ರೀಂ ಕೋರ್ಟಿಗೆ ದಾಟಿಸಿತು.

‘‘ಸುಪ್ರೀಂ ಕೋರ್ಟಿಗೂ ನಮಗೂ ಏನೂ ಸಂಬಂಧವಿಲ್ಲ, ಅವರ ಸಮಿತಿಗೆ ನಾವು ಹಾಜರಾಗುವುದಿಲ್ಲ’’ ಎಂದು ರೈತರು ಹೇಳಿದ್ದಾರೆ. ಸರಕಾರ ಹತಾಶವಾಗಿ ಕುಳಿತಿದೆ. ರೈತರನ್ನು ಆರಂಭದಲ್ಲಿ ವಿರೋಧಿಸಿದ್ದ ದಿಲ್ಲಿ ಪೊಲೀಸರು ಜನವರಿ 26ರ ಟ್ರಾಕ್ಟರ್ ಪರೇಡಿಗೆ ಒಪ್ಪಿಗೆ ನೀಡಿದ್ದಾರೆ. ಇದು ರೈತರಿಗೆ ಸಿಕ್ಕ ಮೂರನೇ ಜಯ. ಹೆಚ್ಚಿನ ಮಾಧ್ಯಮಗಳೆಲ್ಲ ಆಳುವ ವರ್ಗದ ಪರವಾಗಿರುವುದರಿಂದ ಈ ಚಳವಳಿಯ ಗಾಂಭೀರ್ಯ ಮತ್ತು ಗಹನತೆ ಭಾರತೀಯರಿಗೆ ತಿಳಿದಂತಿಲ್ಲ. ಇದನ್ನು ರೈತರು ತಿಳಿಯದವರೇನಲ್ಲ. ಅದಕ್ಕಾಗಿ ಪರ್ಯಾಯ ಮಾಧ್ಯಮಗಳನ್ನು ಸೃಷ್ಟಿಸಿಕೊಂಡು, ತಮ್ಮ ನಿಲುವುಗಳನ್ನು ವಿಶ್ವಕ್ಕೆ ತಿಳಿಯಪಡಿಸುತ್ತಿದ್ದಾರೆ. ಫೇಸ್‌ಬುಕ್, ಟ್ವಿಟರ್, ವಾಟ್ಸ್‌ಆ್ಯಪ್ ಮತ್ತು 10ಕ್ಕೂ ಹೆಚ್ಚು ಹ್ಯಾಶ್‌ಟ್ಯಾಗ್‌ಗಳ ಮೂಲಕ ಜನರನ್ನು ತಲುಪುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಇದರ ಪರಿಣಾಮವಾಗಿ ಇವತ್ತು ರೈತ ಹೋರಾಟದ ಬಗ್ಗೆ ಜಗತ್ತಿಗೆ ತಿಳಿದಿದೆ.

ಆಸ್ಟ್ರೇಲಿಯ, ಕೆನಡ, ಇಟಲಿ, ನ್ಯೂಝಿಲ್ಯಾಂಡ್, ಪಾಕಿಸ್ತಾನ, ಇಂಗ್ಲೆಂಡ್, ಅಮೆರಿಕ ಮತ್ತಿತರ ದೇಶಗಳು ರೈತರ ಪರವಾಗಿ ತಮ್ಮ ಸಹಾನುಭೂತಿಯನ್ನು ಪ್ರಕಟಿಸಿವೆ. ಜನವರಿ 26ರಂದು ನಡೆಯುವ ಟ್ರಾಕ್ಟರ್ ಪರೇಡನ್ನು ವರದಿ ಮಾಡಲು ಈಗಾಗಲೇ 50ಕ್ಕೂ ಹೆಚ್ಚು ದೇಶಗಳ ವರದಿಗಾರರು ದಿಲ್ಲಿ ತಲುಪಿದ್ದಾರೆ. ಇದೊಂದು ಅತ್ಯಂತ ಮಹತ್ವದ ರೈತ ಚಳವಳಿ ಎಂಬುದನ್ನು ಇವತ್ತು ಜಗತ್ತು ಒಪ್ಪಿಕೊಂಡಿದೆ. ಚಳವಳಿಯು ಕೇಂದ್ರ ರಾಜ್ಯಗಳ ಸಂಬಂಧದ (ಫೆಡರಲ್ ರಚನೆ) ಕುರಿತು, ಖಾಸಗೀಕರಣ ಮತ್ತು ನವವಸಾಹತುಶಾಹಿ ಶಕ್ತಿಗಳ ಆಕ್ರಮಣದ ಬಗ್ಗೆ ಪ್ರಶ್ನೆಗಳನ್ನೆತ್ತಿದೆ. ಹೋರಾಟದ ಹೊಸ ತಂತ್ರಗಳನ್ನು ಅನ್ವೇಷಣೆ ಮಾಡಿಕೊಂಡಿದೆ. ಹೀಗಾಗಿ ವಿಶ್ವದ ಗಮನ ರೈತರ ಕಡೆಗೆ ನೆಟ್ಟಿದೆ. ಸರಕಾರಕ್ಕೂ ಈ ಚಳವಳಿಯನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ‘‘ಮುಸ್ಲಿಮರ ಒಂದು ವೋಟ್ ಕೂಡಾ ಬೇಡ’’ ಎಂದು ಸಾರ್ವಜನಿಕವಾಗಿ ಘೋಷಿಸುವ ಬಿಜೆಪಿಯ ಹಿಂದುತ್ವ ರಾಜಕೀಯಕ್ಕೆ ಸಿಎಎ/ಲವ್ ಜಿಹಾದ್‌ಗಳು ಪೂರಕವಾಗಿ ಕೆಲಸ ಮಾಡಿವೆ. ಈ ನಿಯಮಗಳು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದ್ದಾಗಲೂ ಉಚ್ಚ ನ್ಯಾಯಾಲಯ ಅವಕ್ಕೆ ತಡೆಯಾಜ್ಞೆ ನೀಡಿಲ್ಲ. ಸರಕಾರವೂ ಆಕ್ರಮಣಕಾರಿಯಾಗಿ ಕೆಲಸ ಮಾಡಿತು. ಆದರೆ ರೈತ ಚಳವಳಿಯು ಬಿಜೆಪಿಯ ಹಿಂದುತ್ವ ರಾಜಕೀಯದ ಚೌಕಟ್ಟಿನ ಒಳಗೆ ಬರುವುದಿಲ್ಲದ ಕಾರಣ ಇದನ್ನು ಎದುರಿಸುವುದು ಬಿಜೆಪಿಗೆ ಅಷ್ಟು ಸುಲಭವಲ್ಲ. ಈ ಲೇಖನವನ್ನು ಓದುವ ಹೊತ್ತಿಗೆ ಚಳವಳಿಯು 60ನೇ ದಿನ ತಲುಪುತ್ತಿದೆ. ಇದರೊಂದಿಗೆ ಬಿಜೆಪಿಗೆ ಉತ್ತರ ಭಾರತದ ಮೇಲಿರುವ ಹಿಡಿತ ಸಡಿಲವಾಗುತ್ತಿದೆ. ಏನೇ ಇರಲಿ, ಇದೊಂದು ಅಭೂತಪೂರ್ವ ಚಳವಳಿ. ಬಲಿಷ್ಠ ಸರಕಾರವನ್ನು ಎದುರು ಹಾಕಿಕೊಂಡು ಅದು 60 ದಿನಗಳ ಕಾಲ ದಿಲ್ಲಿ ಪರಿಸರದಲ್ಲಿಯೇ ಬದುಕುಳಿದಿದೆ ಎಂದರೆ ಅದೊಂದು ಅಸಾಮಾನ್ಯವಾದ ಹೋರಾಟವೇ ಆಗಿರಬೇಕು.

Writer - ಡಾ. ಪುರುಷೋತ್ತಮ ಬಿಳಿಮಲೆ

contributor

Editor - ಡಾ. ಪುರುಷೋತ್ತಮ ಬಿಳಿಮಲೆ

contributor

Similar News