​ಸಿಂಘು ಗಡಿಯಿಂದ ಹೊರಟ ಟ್ರ್ಯಾಕ್ಟರ್ ರ‍್ಯಾಲಿ

Update: 2021-01-26 03:41 GMT

ಹೊಸದಿಲ್ಲಿ : ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಅಂಗವಾಗಿ ಹಮ್ಮಿಕೊಂಡಿರುವ ಟ್ರ್ಯಾಕ್ಟರ್ ರ‍್ಯಾಲಿ ದೆಹಲಿಯ ಹೊರವಲಯದ ಸಿಂಘು ಗಡಿಯಿಂದ ಬೆಳಗ್ಗೆ 8ಕ್ಕೆ ಹೊರಟಿದ್ದು, ಕಂಜ್ವಾಲಾ ಚೌಕ್- ಅಚುಂಡಿ ಗಡಿ- ಕೆಎಂಪಿ- ಜಿಟಿ ರಸ್ತೆ ಜಂಕ್ಷನ್‌ನತ್ತ ಮುಖಮಾಡಿದೆ.

ಟ್ರ್ಯಾಕ್ಟರ್ ರ‍್ಯಾಲಿ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಐಟಿಓ, ಯಮುನಾ ಬ್ರಿಡ್ಜ್ ಮತ್ತಿತರ ಪ್ರಮುಖ ಕಡೆಗಳಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ.

ರಾಜಧಾನಿಯಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವುದಾಗಿ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಎಲ್ಲ ವಿದ್ಯುತ್ ಉಪಕೇಂದ್ರಗಳು ಮತ್ತು ಗ್ರಿಡ್‌ಗಳಲ್ಲಿ ಕೂಡಾ ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಗಿದೆ. ಸಿಕ್ಖ್ ಫಾರ್ ಜೆಸ್ಟಿಸ್ ನೀಡಿರುವ ಎಚ್ಚರಿಕೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲ ವಿದ್ಯುತ್ ವಿತರಣಾ ಕಂಪನಿಗಳಿಗೆ ಪೊಲೀಸ್ ಇಲಾಖೆ ಸೂಚಿಸಿದೆ.

ಏತನ್ಮಧ್ಯೆ ರೈತರ ಟ್ರ್ಯಾಕ್ಟರ್ ರ‍್ಯಾಲಿಗೆ ವಿಶ್ವದ ವಿವಿಧೆಡೆಗಳಿಂದ ಬೆಂಬಲ ವ್ಯಕ್ತವಾಗಿದ್ದು, ಬ್ರಿಟನ್‌ನ ರೈತ ಮತ್ತು ಭೂ ಕಾರ್ಮಿಕರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ತಮ್ಮ ಸಂಸದರಿಗೆ ಪತ್ರ ಬರೆಯುವ ಮೂಲಕ ಚಳವಳಿಯನ್ನು ಬೆಂಬಲಿಸಿರುವ ಅವರು, ರೈತ ಹೋರಾಟ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಆಗ್ರಹಿಸಿದ್ದಾರೆ. 1000ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರನ್ನು ಪ್ರತಿನಿಧಿಸುವ ಲ್ಯಾಂಡ್ ವರ್ಕರ್ಸ್‌ ಅಲಯನ್ಸ್, ಪ್ರತಿಭಟನೆಯನ್ನು ಬೆಂಬಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News