ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಹಾಲಿ ಚಾಂಪಿಯನ್ ಕರ್ನಾಟಕ ಹೊರಕ್ಕೆ

Update: 2021-01-26 18:35 GMT

 ಅಹಮದಾಬಾದ್: ಮೊಟೆರಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಕರ್ನಾಟಕವನ್ನು ಪಂಜಾಬ್ ತಂಡ ಒಂಭತ್ತು ವಿಕೆಟ್‌ಗಳಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿದೆ.

  ಪ್ರಭ್‌ಸಿಮ್ರಾನ್ ಸಿಂಗ್ ಅಜೇಯ 49 ರನ್ ಗಳಿಸಿ ಪಂಜಾಬ್‌ನ್ನು ಗೆಲುವಿನ ದಡ ಸೇರಿಸಿದರು.

  ಇದಕ್ಕೂ ಮುನ್ನ ವೇಗಿ ಸಿದ್ಧಾರ್ಥ್ ಕೌಲ್ (15 ಕ್ಕೆ 3) ದಾಳಿಗೆ ಸಿಲುಕಿ ಕರ್ನಾಟಕ ತಂಡ 17.2 ಓವರ್‌ಗಳಲ್ಲಿ 87 ರನ್‌ಗಳಿಗೆ ಆಲೌಟಾಗಿತ್ತು.

  88 ರನ್‌ಗಳ ಗೆಲುವಿನ ಸವಾಲು ಪಡೆದ ಪಂಜಾಬ್ ಮೊದಲ ಓವರ್‌ನಲ್ಲಿ ಅಭಿಷೇಕ್ ಶರ್ಮಾ (4) ಅವರನ್ನು ಕಳೆದುಕೊಂಡಿತ್ತು. ಆದರೆ ನಂತರ ಮಂದೀಪ್ ಸಿಂಗ್ (ಔಟಾಗದೆ 35) ಪ್ರಭ್‌ಸಿಮ್ರಾನ್ ಸಿಂಗ್ ಅವರೊಂದಿಗೆ ಸೇರಿಕೊಂಡರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಆಕ್ರಮಣಕಾರಿಯಾಗಿ ಮತ್ತು ಎಚ್ಚರಿಕೆಯಿಂದ ಆಟವಾಡಿ ಇನ್ನೂ 44 ಎಸೆತಗಳು ಬಾಕಿ ಇರುವಾಗಲೇ 1 ವಿಕೆಟ್ ನಷ್ಟದಲ್ಲಿ 89 ರನ್ ಗಳಿಸಿ ಸೆಮಿಫೈನಲ್‌ನಲ್ಲಿ ತಂಡದ ಅವಕಾಶವನ್ನು ದೃಢಪಡಿಸಿದರು.

ಇದಕ್ಕೂ ಮೊದಲು ಸಿದ್ಧಾರ್ಥ್ ದಾಳಿಗೆ ಸಿಲುಕಿದ ಕರ್ನಾಟಕ ಮೊದಲ ನಾಲ್ಕು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ದೇವದತ್ತ ಪಡಿಕ್ಕಲ್ (11), ಕರುಣ್ ನಾಯರ್ (12), ಶರತ್ ಬಿ.ಆರ್ (2) ಮತ್ತು ಪವನ್ ದೇಶಪಾಂಡೆ (0) ಬೇಗನೆ ಔಟಾದರು. 4 ವಿಕೆಟ್ ಕಳೆದುಕೊಂಡು 37 ರನ್ ಗಳಿಸಿದ್ದ ಕರ್ನಾಟಕ ತಂಡಕ್ಕೆ ಶ್ರೇಯಸ್ ಗೋಪಾಲ್ ಮತ್ತು ಅನಿರುದ್ಧ ಜೋಶಿ ಜೊತೆಯಾಗಿ 25 ರನ್‌ಗಳ ಕೊಡುಗೆ ನೀಡಿದರು. ಈ ಜೋಡಿಯು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲುವ ಸೂಚನೆ ನೀಡಿದ ಕೂಡಲೇ ರಮಣದೀಪ್ ಸಿಂಗ್ ಅವರು ಗೋಪಾಲ್ (13) ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಇದರೊಂದಿಗೆ 8ನೇ ಓವರ್‌ನಲ್ಲಿ ಕರ್ನಾಟಕ 51ಕ್ಕೆ 5ನೇ ವಿಕೆಟ್ ಕಳೆದುಕೊಂಡಿತು.

  ಅನಿರುದ್ಧ 33 ಎಸೆತಗಳಲ್ಲಿ 27 ರನ್ ಗಳಿಸಿದರು. ಆದರೆ 15ನೇ ಓವರ್‌ನಲ್ಲಿ ಅವರಿಗೆ ಮಾಯಾಂಕ್ ಮಾರ್ಕಂಡೆ ಪೆವಿಲಿಯನ್ ಹಾದಿ ತೋರಿಸಿದರು. ಕೆಳ ಕ್ರಮಾಂಕದ ಆಟಗಾರರಿಗೆ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಕರ್ನಾಟಕವು 87 ರನ್ ಗಳಿಗೆ ಆಲೌಟಾಯಿತು.

 ಶುಕ್ರವಾರ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಎರಡನೇ ಸೆಮಿಫೈನಲ್‌ನಲ್ಲಿ ಪಂಜಾಬ್ ತಂಡವು ಎದುರಿಸಲಿರುವ ತಂಡ ಯಾವುದೆಂದು ಇನ್ನಷ್ಟೇ ನಿರ್ಧಾರ ವಾಗಬೇಕಿದೆ. ಬರೋಡಾ-ಹರ್ಯಾಣ ತಂಡಗಳ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಜೇತರನ್ನು ಪಂಜಾಬ್ ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News