ತಲೆ ಕೆಳಗಾಗಿ ರಾಷ್ಟ್ರಧ್ವಜ ಹಾರಿಸಿದ ಬಂಗಾಳ ಬಿಜೆಪಿ ಅಧ್ಯಕ್ಷ : ಟಿಎಂಸಿ ವಾಗ್ದಾಳಿ

Update: 2021-01-27 03:59 GMT
ದಿಲೀಪ್ ಘೋಷ್

ಕೊಲ್ಕತ್ತಾ : ಪಶ್ಚಿಮ ಬಂಗಾಳದ ಬೀರಭೂಮ್ ಜಿಲ್ಲೆಯ ಬಿಜೆಪಿ ಕಚೇರಿಯಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಅವರು ರಾಷ್ಟ್ರಧ್ವಜವನ್ನು ತಲೆ ಕೆಳಗಾಗಿ ಹಾರಿಸಿರುವ ಘಟನೆ ವರದಿಯಾಗಿದೆ. ಆಡಳಿತಾರೂಢ ಟಿಎಂಸಿ ಈ ಘಟನೆ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಲೇವಡಿ ಮಾಡಿದೆ.

ಪಕ್ಷದ ರಾಂಪುರಹಾತ್ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ ತಕ್ಷಣ ರಾಷ್ಟ್ರಧ್ವಜ ತಲೆ ಕೆಳಗಾಗಿರುವುದು ಘೋಷ್ ಗಮನಕ್ಕೆ ಬಂತು. ಹಸಿರು ಬಣ್ಣ ಮೇಲ್ಭಾಗದಲ್ಲಿದ್ದರೆ ಕೇಸರಿ ಕೆಳಗೆ ಇತ್ತು. ನಂತರ ಅದನ್ನು ಕೆಳಕ್ಕೆ ಇಳಿಸಿ ಬಳಿಕ ಸರಿಯಾಗಿ ಧ್ವಜಾರೋಹಣ ಮಾಡಿದರು.

ಘಟನೆ ಹಿನ್ನೆಲೆಯಲ್ಲಿ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ ಟಿಎಂಸಿ, "ರಾಷ್ಟ್ರಧ್ವಜವನ್ನು ಸರಿಯಾಗಿ ಹಾರಿಸಲು ಬಾರದವರು ದೇಶ ಅಥವಾ ರಾಜ್ಯವನ್ನು ಮುನ್ನಡೆಸಲು ಅನರ್ಹರು" ಎಂದು ಟೀಕಿಸಿದೆ.

"ಇದು ಮುಜುಗರದ ಕ್ಷಣ. ಅಜಾಗರೂಕತೆಯಿಂದ ಆದ ಪ್ರಮಾದ. ಯಾರಿಗೂ ರಾಷ್ಟ್ರಧ್ವಜವನ್ನು ಅವಮಾನಿಸುವ ಉದ್ದೇಶ ಇದ್ದಿರಲಿಲ್ಲ. ಭವಿಷ್ಯದಲ್ಲಿ ಇಂಥ ವಿಚಾರದಲ್ಲಿ ಎಚ್ಚರ ವಹಿಸುವಂತೆ ಪಕ್ಷದ ಸದಸ್ಯರಿಗೆ ಸೂಚಿಸಿದ್ದೇನೆ" ಎಂದು ಘೋಷ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಟಿಎಂಸಿ ಜಿಲ್ಲಾ ಘಟಕದ ಅಧ್ಯಕ್ಷ ಅನುಬರ್ತ ಮಂಡಲ್, ರಾಷ್ಟ್ರಧ್ವಜವನ್ನು ಸರಿಯಾಗಿ ಹಾರಿಸಲು ಬಾರದವರು ದೇಶ ಅಥವಾ ರಾಜ್ಯವನ್ನು ಮುನ್ನಡೆಸಲು ಅನರ್ಹರು" ಎಂದು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News