ಶೇರು ಮಾರುಕಟ್ಟೆಗಳಲ್ಲಿ ಭಾರೀ ಕುಸಿತ: ನಾಲ್ಕೇ ದಿನಗಳಲ್ಲಿ ಎಂಟು ಲ.ಕೋ.ರೂ. ಕರಗಿದ ಹೂಡಿಕೆದಾರರ ಸಂಪತ್ತು

Update: 2021-01-27 17:22 GMT

ಹೊಸದಿಲ್ಲಿ, ಜ.27: ಭಾರತೀಯ ಶೇರು ಮಾರುಕಟ್ಟೆಗಳು ತೀವ್ರವಾಗಿ ಕುಸಿದಿದ್ದು,ಸತತ ನಾಲ್ಕು ವಹಿವಾಟು ದಿನಗಳಲ್ಲಿ ಹೂಡಿಕೆದಾರರ ಸಂಪತ್ತು ಎಂಟು ಲ.ಕೋ.ರೂ.ಗಳಷ್ಟು ಕರಗಿದೆ.

ಬುಧವಾರ ಸತತ ನಾಲ್ಕನೇ ವಹಿವಾಟಿನ ದಿನವೂ ಕುಸಿತವನ್ನು ದಾಖಲಿಸಿದ ಬಾಂಬೆ ಶೇರು ವಿನಿಮಯ ಕೇಂದ್ರ (ಬಿಎಸ್‌ಇ)ದ ಸೂಚ್ಯಂಕ ಸೆನ್ಸೆಕ್ಸ್ 937.66 (ಶೇ.1.94) ಅಂಶಗಳ ಪತನದೊಂದಿಗೆ 47,409.93ರಲ್ಲಿ ಮುಕ್ತಾಯಗೊಂಡಿತು. ಸತತ ನಾಲ್ಕು ವಹಿವಾಟು ದಿನಗಳಲ್ಲಿ ಸೆನ್ಸೆಕ್ಸ್ ಒಟ್ಟು 2,382.19 (ಶೇ.4.78) ಅಂಶಗಳ ನಷ್ಟವನ್ನು ಅನುಭವಿಸಿದೆ. ಈ ಅವಧಿಯಲ್ಲಿ ಬಿಎಸ್‌ಇ ಲಿಸ್ಟೆಡ್ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳವು 8,07,025.09 ಕೋ.ರೂ.ಗಳಷ್ಟು ಕುಸಿದು 1,89,63,547.48 ಕೋ.ರೂ.ಗಳಿಗೆ ಇಳಿದಿದೆ.

ಅತ್ತ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ ಬುಧವಾರ 270.40 ಅಂಶಗಳಷ್ಟು ಕುಸಿದು 13,967.50ರಲ್ಲಿ ಮುಕ್ತಾಯಗೊಂಡಿದೆ.

ಫ್ಯೂಚರ್ಸ್ ಮತ್ತು ಆಪ್ಶನ್ಸ್ ವ್ಯವಹಾರದ ಮಾಸಿಕ ಮುಕ್ತಾಯಕ್ಕೆ ಎರಡು ದಿನಗಳ ಮುನ್ನ ಮಾರುಕಟ್ಟೆಗಳಲ್ಲಿ ಏರಿಳಿತಗಳು ಸಾಮಾನ್ಯ. ಆದರೆ ಈ ಸಲ ಇಷ್ಟೊಂದು ಏರಿಳಿತ ಕಂಡುಬಂದಿರುವುದು ಬಜೆಟ್ ಮಂಡನೆಗೆ ಮುನ್ನ ಹೂಡಿಕೆದಾರರು ತಮ್ಮ ಹೂಡಿಕೆಗಳನ್ನು ರಕ್ಷಿಸಿಕೊಳ್ಳುವ ಬಗ್ಗೆ ಎಚ್ಚರಿಕೆ ವಹಿಸಿದ್ದಾರೆ ಮತ್ತು ಶೇರುಗಳ ಮಾರಾಟಕ್ಕೆ ಮುಂದಾಗಿದ್ದಾರೆ ಎನ್ನುವುದನ್ನು ಸೂಚಿಸುತ್ತಿದೆ ಎಂದು ಕೋಟಕ್ ಸೆಕ್ಯೂರಿಟಿಸ್‌ನ ಋಷ್ಮಿಕ್ ಓಝಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News