ʼರೈತನ ಸಾವುʼ ಕುರಿತು ಟ್ವಿಟರ್‌ ನಲ್ಲಿ ಪ್ರಕಟಿಸಿದ ರಾಜ್‌ ದೀಪ್‌ ಸರ್ದೇಸಾಯಿಗೆ 2 ವಾರಗಳ ನಿಷೇಧ ಹೇರಿದ ಇಂಡಿಯಾ ಟುಡೇ

Update: 2021-01-28 14:00 GMT

ಹೊಸದಿಲ್ಲಿ,ಜ.28: ಖ್ಯಾತ ಹಿರಿಯ ಪತ್ರಕರ್ತ ಹಾಗೂ ಇಂಡಿಯಾ ಟುಡೇ ವಾಹಿನಿಯ ಸಲಹಾ ಸಂಪಾದಕರಾಗಿರುವ ರಾಜ್‌ ದೀಪ್‌ ಸರ್ದೇಸಾಯಿಯವರನ್ನು 2 ವಾರಗಳ ಕಾಲ ಲೈವ್‌ ಆನ್‌ ಏರ್‌ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ನಿಷೇಧ ಹೇರಿದೆ ಹಾಗೂ ಸಂಬಳವನ್ನೂ ಕಡಿತಗೊಳಿಸಿದೆ ಎಂದು ತಿಳಿದು ಬಂದಿದೆ. ಈ ಕುರಿತು ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು thewire.in ವರದಿ ತಿಳಿಸಿದೆ. 

ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಗಣರಾಜ್ಯೋತ್ಸವದಂದು ರೈತರು ನಡೆಸಿದ್ದ ಟ್ರ್ಯಾಕ್ಟರ್‌ ರ್ಯಾಲಿಯ ಸಂದರ್ಭ ಟ್ರಾಕ್ಟರ್‌ ಮಗುಚಿದ ಪರಿಣಾಮ ಓರ್ವ ಮೃತಪಟ್ಟಿದ್ದರು ಎಂಧು ಪೊಲೀಸರು ಹೇಳಿಕೆ ನೀಡಿದ್ದರು. ಸ್ಥಳದಲ್ಲಿದ್ದ ಹಲವರು, ಯುವಕನು ಟ್ರಾಕ್ಟರ್‌ ಚಲಾಯಿಸುತ್ತಿದ್ದ ವೇಳೆ ಪೊಲೀಸರ ಗುಂಡೇಟಿನಿಂದ ನಿಯಂತ್ರಣ ಕಳೆದುಕೊಂಡು ಟ್ರಾಕ್ಟರ್‌ ಉರುಳಿಬಿದ್ದು ಮೃತಪಟ್ಟಿದ್ದಾನೆ ಎಂದು ಹೇಳಿಕೆ ನೀಡಿದ್ದರು. ಈ ವೇಳೆ ಹಿರಿಯ ಪತ್ರಕರ್ತ ರಾಜ್‌ ದೀಪ್‌ ಸರ್ದೇಸಾಯಿ, ಪೊಲೀಸರ ಗುಂಡೇಟಿನಿಂದ ಯುವಕ ಮೃತಪಟ್ಟಿದ್ದಾನೆ ಎಂದು ತಮ್ಮ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದ್ದರು.

ತಮ್ಮ ಟ್ವಿಟರ್‌ ಖಾತೆಯಲ್ಲಿ, "ರೈತರ ಹೋರಾಟದಲ್ಲಿ ಓರ್ವ ಯುವಕ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ರೈತರೇ, ಈ ಬಲಿದಾನ ವ್ಯರ್ಥವಾಗುವುದಿಲ್ಲ ಎಂದು ಸ್ಪಷ್ಟಪಡಿಸಿ" ಎಂದು ಬರೆದಿದ್ದರು. ಬಳಿಕ ತಮ್ಮ ಲೈವ್‌ ಕಾರ್ಯಕ್ರಮದಲ್ಲೂ ಈ ಕುರಿತು ಮಾತನಾಡಿದ್ದರು ಎಂದು thewire.in ತನ್ನ ವರದಿಯಲ್ಲಿ ತಿಳಿಸಿದೆ.

ಬಳಿಕ ದಿಲ್ಲಿ ಪೊಲೀಸರು ಈ ಕುರಿತಾದಂತೆ ವೀಡಿಯೋ ಬಿಡುಗಡೆ ಮಾಡಿದ್ದು, ವೀಡಿಯೋದಲ್ಲಿ ಬ್ಯಾರಿಕೇಡ್‌ ಧ್ವಂಸ ಮಾಡಲು ಹೊರಟಿದ್ದ ಯುವಕ ಟ್ರ್ಯಾಕ್ಟರ್‌ ಮಗುಚಿ ಬಿದ್ದು ಮೃತಪಟ್ಟ ದೃಶ್ಯವು ಸೆರೆಯಾಗಿತ್ತು. ಕೂಡಲೇ ರಾಜ್‌ ದೀಪ್‌ ಸರ್ದೇಸಾಯಿ ಈ ವೀಡಿಯೋವನ್ನೂ ತಮ್ಮ ಟ್ವಿಟರ್‌ ನಲ್ಲಿ ಪ್ರಕಟಿಸಿ ಸ್ಪಷ್ಟನೆ ನೀಡಿದ್ದರು.

ಆದರೆ ಕೇಂದ್ರ ಸರಕಾರ ಮತ್ತು ಬಿಜೆಪಿ ಬೆಂಬಲಿಗರು ರಾಜ್‌ ದೀಪ್‌ ಸರ್ದೇಸಾಯಿ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು. ಅವರು ಸುಳ್ಳು ಸುದ್ದಿಗಳನ್ನು ಹರಡಿ ಸಮಾಜದ ಸ್ವಾಸ್ಥ್ಯ ಕೆಡಿಸಲು ಯತ್ನಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News