ಅಮೆರಿಕ: ಯುಎಇ, ಸೌದಿಗೆ ಶಸ್ತ್ರಾಸ್ತ್ರ ಮಾರಾಟ ಒಪ್ಪಂದ ಮರುಪರಿಶೀಲನೆ

Update: 2021-01-28 16:14 GMT

ವಾಶಿಂಗ್ಟನ್, ಜ. 28: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ಎಫ್-35 ಯುದ್ಧ ವಿಮಾನಗಳ ಮಾರಾಟ ಮತ್ತು ಸೌದಿ ಅರೇಬಿಯಕ್ಕೆ ಶಸ್ತ್ರಾಸ್ತ್ರಗಳ ಮಾರಾಟಕ್ಕೆ ಸಂಬಂಧಿಸಿದ ಕರಾರುಗಳನ್ನು ಮರುಪರಿಶೀಲನೆಗಾಗಿ ಎತ್ತಿಕೊಳ್ಳಲಾಗಿದ್ದು, ಅವುಗಳನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಡಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

ಯುಎಇಯ ಬೆಂಬಲದೊಂದಿಗೆ ಸೌದಿ ಅರೇಬಿಯದ ನೇತೃತ್ವದಲ್ಲಿ ಯೆಮನ್‌ನಲ್ಲಿ ನಡೆಯುತ್ತಿರುವ ಬಂಡುಕೋರ ನಿಗ್ರಹ ಕಾರ್ಯಾಚರಣೆಗೆ ನೀಡುತ್ತಿರುವ ಬೆಂಬಲವನ್ನು ಕೊನೆಗೊಳಿಸುವ ಸೂಚನೆಯನ್ನು ಒಂದು ವಾರ ಹಳೆಯ ಬೈಡನ್ ಸರಕಾರ ಈಗಾಗಲೇ ನೀಡಿದೆ. ಬಂಡುಕೋರ ನಿಗ್ರಹ ಕಾರ್ಯಾಚರಣೆಯು ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಅವೆುರಿಕ ಅಭಿಪ್ರಾಯಪಟ್ಟಿದೆ.

ಹೊಸ ಸರಕಾರದ ನಾಯಕತ್ವಕ್ಕೆ ಮರುಪರಿಶೀಲನೆಗೆ ಅವಕಾಶ ನೀಡುವುದಕ್ಕಾಗಿ ಹಲವಾರು ಶಸ್ತ್ರಾಸ್ತ್ರ ಕರಾರುಗಳ ಜಾರಿಯನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಡಲಾಗಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರರೊಬ್ಬರು ತಿಳಿಸಿದರು.

ಇವುಗಳ ಪೈಕಿ ಅತ್ಯಂತ ಮಹತ್ವದ ರಕ್ಷಣಾ ಒಪ್ಪಂದವೆಂದರೆ, ಯುಎಇಗೆ ಎಫ್-35 ಯುದ್ಧ ವಿಮಾನಗಳನ್ನು ಮಾರಾಟ ಮಾಡುವುದಕ್ಕೆ ಸಂಬಂಧಿಸಿದ 23 ಬಿಲಿಯ ಡಾಲರ್ (ಸುಮಾರು 1.68 ಲಕ್ಷ ಕೋಟಿ ರೂಪಾಯಿ) ಕರಾರು.

ಇಸ್ರೇಲ್‌ಗೆ ಮಾನ್ಯತೆ ನೀಡಲು ಯುಎಇ ಒಪ್ಪಿಕೊಂಡ ಬಳಿಕ, ಡೊನಾಲ್ಡ್ ಟ್ರಂಪ್ ನೇತೃತ್ವದ ಹಿಂದಿನ ಸರಕಾರ ಈ ಯುದ್ಧವಿಮಾನಗಳ ಮಾರಾಟಕ್ಕೆ ಅನುಮೋದನೆ ನೀಡಿತ್ತು.

ಅಮೆರಿಕದ ನೂತನ ಸರಕಾರ ಈ ಒಪ್ಪಂದವನ್ನು ರದ್ದುಪಡಿಸಿದರೆ, ಇಸ್ರೇಲ್ ಜೊತೆಗಿನ ಶಾಂತಿ ಒಪ್ಪಂದವನ್ನು ಯುಎಇ ಮುಂದುವರಿಸುವುದೇ ಎನ್ನುವ ಪ್ರಶ್ನೆ ಎದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News