ರೈತ ನಾಯಕ ಟಿಕಾಯತ್‌ ಕಣ್ಣೀರಿನ ವೀಡಿಯೋ ಬಳಿಕ ʼಮಹಾಪಂಚಾಯತ್‌ʼ ಗೆ ಸೇರಿದ ಜನಸಾಗರ

Update: 2021-01-29 12:08 GMT

ಮುಝಫ್ಫರನಗರ್,ಜ.29: ಭಾರತೀಯ ಕಿಸಾನ್ ಯೂನಿಯನ್ ನಾಯಕ ನರೇಶ್ ಟಿಕಾಯತ್ ಅವರು ನಡೆಸುತ್ತಿರುವ ʼಮಹಾಪಂಚಾಯತ್'ಗೆ  ಉತ್ತರ ಪ್ರದೇಶದ ಮುಝಫ್ಫರನಗರ್‍ನಲ್ಲಿ ಸಾವಿರಾರು ಜನರು ಜಮಾಯಿಸಿದ್ದಾರೆ. ನರೇಶ್ ಟಿಕಾಯತ್ ಅವರ ಸೋದರ ರಾಕೇಶ್ ಟಿಕಾಯತ್ ಅವರ ನೇತೃತ್ವದಲ್ಲಿ ಕೃಷಿ ಕಾಯಿದೆಗಳ ವಿರುದ್ಧ ರೈತರ ಪ್ರತಿಭಟನೆ ನಡೆಯುತ್ತಿರುವ ಗಾಝಿಪುರ್ ಗಡಿ ಪ್ರದೇಶದಿಂದ ಮುಝಫ್ಫರನಗರ್ 150 ಕಿಮೀಗಿಂತಲೂ ಕಡಿಮೆ ದೂರವಿದೆ.

ಮಹಾಪಂಚಾಯತ್ ನಡೆಯಲಿರುವ ಕಾಲೇಜು ಮೈದಾನವೊಂದಕ್ಕೆ ಜನರ ಮಹಾಪೂರವೇ ಹರಿದು ಬರುತ್ತಿರುವುದು ಡ್ರೋನ್ ಕ್ಯಾಮರಾಗಳಿಂದ ಚಿತ್ರೀಕರಿಸಲಾದ ದೃಶ್ಯಗಳು ತೋರಿಸುತ್ತಿವೆ. ಗಾಝಿಪುರ್‍ನಲ್ಲಿ ಪ್ರತಿಭಟಿಸುತ್ತಿರುವ ರೈತರನ್ನು ತೆರವುಗೊಳಿಸಲು ಕಳೆದ ರಾತ್ರಿ ಉತ್ತರ ಪ್ರದೇಶ ಪೊಲೀಸರು ಯತ್ನಿಸಿದ ಹಿನ್ನೆಲೆಯಲ್ಲಿ ಉಂಟಾದ ಉದ್ವಿಗ್ನತೆಯ ನಂತರ ಈ ಮಹಾಪಂಚಾಯತ್‍ಗೆ ಕರೆ ನೀಡಲಾಗಿತ್ತು.

ರೈತರನ್ನು ತೆರವುಗೊಳಿಸುವ ಯತ್ನ ನಡೆಯುತ್ತಿದ್ದಂತೆಯೇ  ಪ್ರಭಾವಿ ರೈತ ನಾಯಕರಾಗಿರುವ ರಾಕೇಶ್ ಟಿಕಾಯತ್ ಅವರು ಭಾವೋದ್ವೇಗಕ್ಕೊಳಗಾಗಿ ಅತ್ತು ಬಿಟ್ಟರಲ್ಲದೆ ತಾವು ಜಗ್ಗುವುದಿಲ್ಲ ಎಂದಿದ್ದರು.

"ಅವರು ರೈತರನ್ನು ನಾಶಗೈಯ್ಯಲು ಹೊರಟಿದ್ದಾರೆ, ನಾವು ಇದಕ್ಕೆ ಆಸ್ಪದ ನೀಡುವುದಿಲ್ಲ, ಈ ಕಾಯಿದೆಗಳನ್ನು ಒಂದೋ ವಾಪಸ್ ಪಡೆಯಬೇಕು, ಇಲ್ಲದೇ ಇದ್ದರೆ ಟಿಕಾಯತ್ ಪ್ರಾಣ ಕಳೆದುಕೊಳ್ಳುತ್ತಾನೆ, ಇದು ರೈತರ ವಿರುದ್ಧದ ಸಂಚು" ಎಂದು ಅವರು ಹೇಳಿದ್ದರು.

ಅವರ ಈ ಭಾಷಣದ ತುಣುಕು ವೈರಲ್ ಆಗುತ್ತಿದ್ದಂತೆಯೇ ವಾಪಸ್ ತೆರಳುತ್ತಿದ್ದ  ರೈತರು ಗಾಝಿಪುರ್‌ ಗೆ  ಮರಳಿ ಪ್ರತಿಭಟನೆ ಸೇರಿದ್ದರು. ಸದ್ಯ ಮಹಾಪಂಚಾಯತ್‌ ನಲ್ಲಿ ಸೇರಿರುವ ಜನಸಾಗರ ಒಟ್ಟಾಗಿ ಗಾಝಿಪುರದ ಕಡೆ ಪ್ರಯಾಣ ಬೆಳೆಸುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ. ಆದರೆ ಯಾವುದೇ ವಾಹನಗಳನ್ನೂ ನಾವು ಬರಲು ಅನುಮತಿಸುವುದಿಲ್ಲ ಎಂದು ಉತ್ತರಪ್ರದೇಶ ಪೊಲೀಸರು ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News