ಪೊಲೀಸ್ ಇಲಾಖೆಗೆ ಸೇರಿದ್ದ ಮಾಜಿ ಸಹಚರನ ಹತ್ಯೆಗೈದ ನಕ್ಸಲರು
ರಾಯ್‌ಪುರ, ಜ.29: ನಕ್ಸಲ್ ತಂಡ ತೊರೆದು ಪೊಲೀಸ್ ಇಲಾಖೆಗೆ ಸೇರಿದ್ದ ತಮ್ಮ ಮಾಜಿ ಸಹಚರನನ್ನು ಗುರುವಾರ ಹತ್ಯೆಗೈದ ನಕ್ಸಲರು ಬಳಿಕ ಮೃತದೇಹವನ್ನು ಸುಟ್ಟುಹಾಕಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ನಿಷೇಧಿತ ಸಿಪಿಐ(ಮಾವೋವಾದಿ) ಸಂಘಟನೆಯ ಸದಸ್ಯನಾಗಿದ್ದ ಸೋಮ್ದು ರಾಮ್ ಪೋಯಂ ಅಲಿಯಾಸ್ ಮಲ್ಲೇಶ್ 2014ರಲ್ಲಿ ಸಂಘಟನೆಯನ್ನು ತೊರೆದು ಮುಖ್ಯ ವಾಹಿನಿಗೆ ಮರಳಿದ್ದ. ಬಳಿಕ ಆತ ಜಿಲ್ಲಾ ಮೀಸಲು ಪಡೆಯಲ್ಲಿ ಕಾನ್‌ಸ್ಟೆಬಲ್ ಉದ್ಯೋಗ ಪಡೆದಿದ್ದು ಗುರುವಾರ ಜಂಗ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ರಪಾಲ್ ಗ್ರಾಮದಲ್ಲಿರುವ ಬಂಧುಗಳನ್ನು ಭೇಟಿಯಾಗಲು ತೆರಳಿದ್ದಾಗ ನಕ್ಸಲರು ದಾಳಿ ನಡೆಸಿದ್ದು ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾರೆ.
ನಕ್ಸಲರ ತಂಡದಲ್ಲಿ ಮಲ್ಲೇಶನ ಸಹೋದರನೂ ಇದ್ದ ಎಂದು ಮೂಲಗಳು ಹೇಳಿವೆ. ತೀವ್ರವಾಗಿ ಗಾಯಗೊಂಡಿದ್ದ ಮಲ್ಲೇಶ್ ಸ್ಥಳದಲ್ಲೇ ಮೃತಪಟ್ಟ ಬಳಿಕ ನಕ್ಸಲರು ಆತನ ಬಂಧುಗಳ ಎದುರೇ ಮೃತದೇಹವನ್ನು ಸುಟ್ಟುಹಾಕಿ ಪರಾರಿಯಾಗಿದ್ದಾರೆ. ಘಟನೆಯ ಮಾಹಿತಿ ಪಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ನಕ್ಸಲರ ಪತ್ತೆ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.