×
Ad

ಕಾಲ್ಪನಿಕ ಪಾತ್ರಕ್ಕೆ ನಟರನ್ನು ಹೊಣೆಯಾಗಿಸುವುದು ಆತಂಕಕಾರಿ: ಹಿಂದಿ ಚಿತ್ರರಂಗದ ಕಳವಳ

Update: 2021-01-29 22:57 IST

ಮುಂಬೈ, ಜ.29: ಧಾರ್ಮಿಕ ಭಾವನೆಗಳಿಗೆ ಘಾಸಿ ಎಸಗಿದ ಆರೋಪ ಎದುರಿಸುತ್ತಿರುವ ‘ತಾಂಡವ್’ ವೆಬ್‌ಸರಣಿಯ ತಂಡಕ್ಕೆ ಸುಪ್ರೀಂಕೋರ್ಟ್ ಜಾಮೀನು ನಿರಾಕರಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಹಿಂದಿ ಚಿತ್ರರಂಗದ ಪ್ರಮುಖರು, ಕಾಲ್ಪನಿಕ ಪಾತ್ರಕ್ಕೆ ನಟರನ್ನು ಹೊಣೆಯಾಗಿಸುವುದು ಆತಂಕಕಾರಿ ಎಂದು ಹೇಳಿದೆ.

ಅಮಝಾನ್ ಪ್ರೈಮ್ ವೀಡಿಯೊದಲ್ಲಿ ಪ್ರಸಾರವಾಗುವ ತಾಂಡವ್ ವೆಬ್‌ಸರಣಿಯ ಬಗ್ಗೆ ದೂರು ದಾಖಲಾದ ಬಳಿಕ ವೆಬ್‌ಸರಣಿಯ ತಂಡ ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿತ್ತು. ಬುಧವಾರ ಸುಪ್ರೀಂಕೋರ್ಟ್ ಅರ್ಜಿಯನ್ನು ತಳ್ಳಿಹಾಕಿದೆ. ವೆಬ್‌ಸರಣಿಯ ನಿರ್ದೇಶಕ ಆಲಿ ಅಬ್ಬಾಸ್ ಝಫರ್, ನಟ ಮುಹಮ್ಮದ್ ಝೀಶನ್ ಅಯೂಬ್ ಮತ್ತಿತರರ ವಿರುದ್ಧ ಹಲವು ಎಫ್‌ಐಆರ್ ದಾಖಲಾಗಿದೆ. ತನಗೆ ಒಪ್ಪಿಸಿದ ಪಾತ್ರವನ್ನು ನಿರ್ವಹಿಸುವುದಷ್ಟೇ ನಟರ ಕೆಲಸ. ಆದ್ದರಿಂದ ಓರ್ವ ಪಾತ್ರಧಾರಿಯಾಗಿ ನಟ ಹೇಳುವ ಸಂಭಾಷಣೆ ಅಥವಾ ಮಾಡುವ ಪಾತ್ರಕ್ಕೆ ಆತ ಜವಾಬ್ದಾರನಾಗಿರುವುದಿಲ್ಲ ಎಂದು ಅಯೂಬ್ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು.

ಆದರೆ ಸುಪ್ರೀಂಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ. ಇದೀಗ ಸುಪ್ರೀಂಕೋರ್ಟ್ ತೀರ್ಪಿನ ಪರ-ವಿರೋಧ ಚರ್ಚೆಗೆ ಚಾಲನೆ ದೊರಕಿದೆ. ಇದು ನಟರನ್ನು ಕಾನೂನು ತೊಂದರೆಗೆ ಸಿಲುಕಿಸುತ್ತದೆ ಎಂದು ಹನ್ಸಲ್ ಮೆಹ್ತ, ಪ್ರೀತೀಶ್ ನಂದಿ, ಕೊಂಕಣ ಸೇನ್ ಶರ್ಮ ಮತ್ತಿತರರು ಅಭಿಪ್ರಾಯಪಟ್ಟಿದ್ದಾರೆ. ಒಂದು ಧಾರಾವಾಹಿಗೆ ಸಂಬಂಧಿಸಿದ್ದವರೆಲ್ಲಾ ಹಸ್ತಪ್ರತಿಯನ್ನು ಓದಿ ಒಪ್ಪಂದ ಪತ್ರಕ್ಕೆ ಸಹಿ ಹಾಕಿರುತ್ತಾರೆ. ಹಾಗಿದ್ದರೆ ಎಲ್ಲಾ ಪಾತ್ರಧಾರಿಗಳನ್ನು ಮತ್ತು ಸಿಬ್ಬಂದಿ ವರ್ಗದವರನ್ನು ಬಂಧಿಸಲಾಗುತ್ತದೆಯೇ ? ಎಂದು ನಟಿ ಕೊಂಕಣ ಸೇನ್ ಶರ್ಮ ಪ್ರಶ್ನಿಸಿದ್ದಾರೆ. ಕಾಲ್ಪನಿಕ ಪಾತ್ರದ ಕ್ರಿಯೆಗಳಿಗೆ ಒಬ್ಬ ನಟನನ್ನು ಹೊಣೆಯಾಗಿಸುವುದು ಹಾಸ್ಯಾಸ್ಪದವಾಗಿದೆ. ಹಾಗಿದ್ದರೆ, ಹೆಚ್ಚಾಗಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹಿರಿಯ ನಟ ಅಮರೀಶ್‌ಪುರಿ ದುಷ್ಟ ವ್ಯಕ್ತಿ ಎಂದು ಹೇಳಲಾಗುತ್ತದೆಯೇ ? ಎಂದು ಚಿತ್ರಕಥೆಗಾರ, ಗೀತ ರಚನೆಗಾರ ಮಯೂರ್ ಪುರಿ ಪ್ರಶ್ನಿಸಿದ್ದಾರೆ. ಇದಕ್ಕೆ ಅಂತ್ಯವೇ ಇಲ್ಲದಂತಾಗಿದೆ. ನಾವು ನಮ್ಮ ದೇಶವನ್ನು ಕಲೆಯ ಉಸಿರುಗಟ್ಟಿಸುವ ತಾಣವಾಗಿ ಪರಿವರ್ತಿಸುವುದು ತುಂಬಾ ವಿಷಾದಕರವಾಗಿದೆ. ವಿಭಿನ್ನ ಅಭಿಪ್ರಾಯ ಹೊರಹೊಮ್ಮಬಹುದು. ಈ ಬಗ್ಗೆ ಟೀಕಿಸಬಹುದು ಅಥವಾ ಚರ್ಚೆ ನಡೆಸಬಹುದು. ಆದರೆ ಸದ್ದಡಗಿಸುವ ಪ್ರಯತ್ನ ಸಲ್ಲದು ಎಂದು ಸಿನೆಮ ನಿರ್ಮಾಕರ ಒನಿರ್ ಹೇಳಿದ್ದಾರೆ.

ಅರ್ನಬ್ ಅಥವಾ ತಾಂಡವ್, ದೀಪ್ ಸಿಧು ಅಥವಾ ಮುಹಮ್ಮದ್ ಅಯೂಬ್ - ಯಾರು ಅಪಾಯಕಾರಿ ? ಎಂದು ಸಿನೆಮ ನಿರ್ಮಾಪಕ ಹನ್ಸಲ್ ಮೆಹ್ತ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News