ಪತ್ರಕರ್ತರ ವಿರುದ್ಧ ಎಫ್‌ಐಆರ್: ಎಡಿಟರ್ಸ್ ಗಿಲ್ಡ್ ಖಂಡನೆ
ಹೊಸದಿಲ್ಲಿ, ಜ.29: ಜನವರಿ 26ರಂದು ದಿಲ್ಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿಯ ಸಂದರ್ಭ ನಡೆದ ಹಿಂಸಾಚಾರದ ವರದಿ ಮಾಡಿರುವ ಪತ್ರಕರ್ತರು ಹಾಗೂ ಸಂಪಾದಕರ ವಿರುದ್ಧ ಪ್ರಕರಣ ದಾಖಲಿಸಿ ಬೆದರಿಸುವ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶ ಪೊಲೀಸರ ಕ್ರಮ ಖಂಡನೀಯ ಎಂದು ‘ದಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’ ಶುಕ್ರವಾರ ಹೇಳಿದೆ.
ಮಾಧ್ಯಮದ ಸೊಲ್ಲಡಗಿಸುವ, ಕಿರುಕುಳ ನೀಡುವ ಮತ್ತು ದಬಾಯಿಸುವ ಪ್ರಯತ್ನ ಇದಾಗಿದೆ. ಕೋಮು ಸೌಹಾರ್ದತೆ ಕೆಡಿಸುವ ಪ್ರಯತ್ನ, ದೇಶದ್ರೋಹದ ಪ್ರಕರಣ, ಧಾರ್ಮಿಕ ನಂಬಿಕೆಗಳಿಗೆ ಅವಮಾನ ಎಸಗಿರುವುದು ಮುಂತಾದ 10 ವಿಭಿನ್ನ ಕಾಲಂಗಳಡಿ ಪ್ರಕರಣ ದಾಖಲಿಸಿರುವುದು ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ ಎಂದು ಎಡಿಟರ್ಸ್ ಗಿಲ್ಡ್ ಹೇಳಿದೆ.
ಜನವರಿ 26ರಂದು ದಿಲ್ಲಿಯಲ್ಲಿ ಪ್ರತಿಭಟನಾ ನಿರತ ರೈತರು ಹಾಗೂ ಪೊಲೀಸರ ಮಧ್ಯೆ ನಡೆದ ಘರ್ಷಣೆಯ ಬಗ್ಗೆ ತಪ್ಪಾಗಿ ವರದಿ ಮಾಡಿರುವ ಆರೋಪದಡಿ ಉತ್ತರಪ್ರದೇಶ ಪೊಲೀಸರು ಗುರುವಾರ ರಾಜ್‌ದೀಪ್ ಸರ್ದೇಸಾಯಿ, ಮೃಣಾಲ್ ಪಾಂಡೆ, ಝಫರ್ ಆಘಾ, ಪರೇಶ್‌ನಾಥ್, ಅನಂತ್‌ನಾಥ್, ವಿನೋದ್ ಕೆ ಜೋಸ್ ಸಹಿತ ಹಲವು ಪತ್ರಕರ್ತರ ವಿರುದ್ಧ ದೇಶದ್ರೋಹ ಪ್ರಕರಣದಡಿ ಎಫ್‌ಐಆರ್ ದಾಖಲಿಸಿದ್ದರು.