ಅಮೆರಿಕಾದ ಉದ್ಯಾನವನದಲ್ಲಿದ್ದ ಮಹಾತ್ಮ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು

Update: 2021-01-30 10:57 GMT

ಕ್ಯಾಲಿಫೋರ್ನಿಯಾ,ಜ.30: ಅಮೆರಿಕದ ಕ್ಯಾಲಿಫೋರ್ನಿಯಾದ ಉದ್ಯಾನವನವೊಂದರಲ್ಲಿ ಅಪರಿಚಿತ ದುಷ್ಕರ್ಮಿಗಳು ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಧ್ವಂಸಗೊಳಿಸಿದ ಘಟನೆಯು ನಡೆದಿದೆ. ಈ ಕುರಿತಾದಂತೆ ತನಿಖೆ ನಡೆಸಿ ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಇಂಡೋ-ಅಮೆರಿಕನ್‌ ಸಂಘಟನೆಗಳು ಆಗ್ರಹಿಸಿದೆ ಎಂದು ತಿಳಿದು ಬಂದಿದೆ.

ಉತ್ತರ ಕ್ಯಾಲಿಫೋರ್ನಿಯಾದ ಡೇವಿಸ್ ನಗರದ ಸೆಂಟ್ರಲ್ ಪಾರ್ಕ್‌ನಲ್ಲಿರುವ 6 ಅಡಿ ಎತ್ತರದ, 650-ಪೌಂಡ್ (294 ಕೆಜಿ) ಕಂಚಿನ ಪ್ರತಿಮೆಯ ಅರ್ಧ ಮುಖವನ್ನು ಮತ್ತು ಕಾಲುಗಳನ್ನು ಕತ್ತರಿಸಿ ಹಾಕಲಾಗಿದೆ ಎಂದು ಸ್ಥಳೀಯ ಡೇವಿಸ್ ಎಂಟರ್ಪ್ರೈಸ್ ದೈನಂದಿನ ವರದಿ ತಿಳಿಸಿದೆ.

ಧ್ವಂಸಗೊಳಿಸಿದ ಪ್ರತಿಮೆಯನ್ನು ಜನವರಿ 27 ರ ಮುಂಜಾನೆ ಪಾರ್ಕ್ ಉದ್ಯೋಗಿಯೊಬ್ಬರು ಪತ್ತೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. "ಪ್ರತಿಮೆಯನ್ನು ಸ್ಥಳಾಂತರಿಸಲಾಗುವುದು ಮತ್ತು ಅದನ್ನು ಮೌಲ್ಯಮಾಪನ ಮಾಡುವವರೆಗೆ ಸುರಕ್ಷಿತ ಸ್ಥಳದಲ್ಲಿ ಸಂಗ್ರಹಿಸಿಡಲಾಗುವುದು" ಎಂದು ಡೇವಿಸ್ ಸಿಟಿ ಕೌನ್ಸಿಲ್ಮನ್ ಲ್ಯೂಕಾಸ್ ಫ್ರೀರಿಚ್ಸ್ ಹೇಳಿದರು.

ಭಾರತ ಸರ್ಕಾರ ಡೇವಿಸ್ ನಗರಕ್ಕೆ ದೇಣಿಗೆ ನೀಡಿದ ಗಾಂಧೀಜಿಯ ಪ್ರತಿಮೆಯನ್ನು ನಾಲ್ಕು ವರ್ಷಗಳ ಹಿಂದೆ ನಗರ ಸಭೆಯು ಗಾಂಧಿ ವಿರೋಧಿ ಮತ್ತು ಭಾರತ ವಿರೋಧಿ ಸಂಘಟನೆಗಳ ಪ್ರತಿಭಟನೆಯ ನಡುವೆ ಸ್ಥಾಪಿಸಿತ್ತು. ಗಾಂಧಿ ಪ್ರತಿಮೆಯನ್ನು ಧ್ವಂಸ ಮಾಡಿರುವ ಕುರಿತು ಭಾರತವು ಶನಿವಾರ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದೆ ಮತ್ತು ಈ ವಿಷಯವನ್ನು ಅಮೆರಿಕದೊಂದಿಗೆ ಪ್ರಸ್ತಾಪಿಸಿದೆ.

"ಶಾಂತಿ ಮತ್ತು ನ್ಯಾಯದ ಸಾರ್ವತ್ರಿಕವಾಗಿ ಗೌರವಿಸಲ್ಪಟ್ಟ ವ್ಯಕ್ತಿಯ ವಿರುದ್ಧದ ಈ ದುರುದ್ದೇಶಪೂರಿತ ಮತ್ತು ಅಪಮಾನಕರ ಕೃತ್ಯವನ್ನು ಭಾರತ ಸರ್ಕಾರ ಬಲವಾಗಿ ಖಂಡಿಸುತ್ತದೆ" ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News