ಆಮು ಆವರಣದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ: ವಿದ್ಯಾರ್ಥಿ ಆರಿಫ್ ಅಲಿಗಢದಿಂದ ಗಡೀಪಾರಿಗೆ ಸೂಚನೆ

Update: 2021-01-30 18:01 GMT

ಲಕ್ನೊ, ಜ.30: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಅಲಿಗಢ ಮುಸ್ಲಿಂ ವಿವಿ(ಆಮು)ಯ ಆವರಣದಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ವಿವಿಧ ಕಲಂಗಳಡಿ 6ಕ್ಕೂ ಅಧಿಕ ಪ್ರಕರಣ ದಾಖಲಾಗಿರುವ ವಿದ್ಯಾರ್ಥಿ ಆರಿಫ್ ಖಾನ್ ತ್ಯಾಗಿಯನ್ನು 6 ತಿಂಗಳು ಅಲಿಗಢ ಜಿಲ್ಲೆಯಿಂದ ಗಡೀಪಾರು ಮಾಡಿ ಅಲಿಗಢ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಉತ್ತರಪ್ರದೇಶ ಗೂಂಡಾ ನಿಯಂತ್ರಣ ಕಾಯ್ದೆಯಡಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಳೆದ ವಾರ ಗಡೀಪಾರು ಆಜ್ಞೆ ಜಾರಿಗೊಳಿಸಿದ್ದು ಅದನ್ನು ಆರಿಫ್ ಗುರುವಾರ (ಜ.28ರಂದು) ಪಡೆದಿದ್ಧಾರೆ ಎಂದು ಆಮು ವಕ್ತಾರ ಪ್ರೊಫೆಸರ್ ಕಿದ್ವಾಯಿ ಹೇಳಿದ್ದಾರೆ.

ಆಮು ಆವರಣದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಪೊಲೀಸರು ದಾಖಲಿಸಿದ ಪ್ರಕರಣ ಇದಾಗಿದೆ. ವಿವಿ ಆಡಳಿತ ವರ್ಗ ಯಾವುದೇ ವಿದ್ಯಾರ್ಥಿಯ ವಿರುದ್ಧ ದೂರು ನೀಡಿಲ್ಲ ಎಂದವರು ಹೇಳಿದ್ದಾರೆ. ಅಲಿಗಢ ಮುಸ್ಲಿಂ ವಿವಿಯ ಅಂತಿಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿ ಆರಿಫ್ ಅಲಿಗಢ ನಗರದ ಶಾಂತಿಗೆ ಒಂದು ಬೆದರಿಕೆಯಾಗಿದ್ದು ಅವರ ಉಪಸ್ಥಿತಿ ನಗರದ ಶಾಂತಿಪ್ರಿಯ ನಿವಾಸಿಗಳಿಗೆ ಅಪಾಯವಾಗಿದೆ. ಆದ್ದರಿಂದ ಅವರನ್ನು 6 ತಿಂಗಳು ನಗರದಿಂದ ಹೊರಗೆ ಹಾಕಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ರೈತರು, ಕಾರ್ಮಿಕ ಒಕ್ಕೂಟದ ಸದಸ್ಯರು ಅಥವಾ ವಿದ್ಯಾರ್ಥಿಗಳಿಗೆ ಪ್ರತಿಭಟನೆ ನಡೆಸುವ ಹಕ್ಕಿದೆ. ತನ್ನ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳೂ ಆಮು ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಕ್ಕೆ ಸಂಬಂಧಿಸಿದ್ದಾಗಿದೆ. ಗಡೀಪಾರು ಆಜ್ಞೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮತ್ತೊಂದು ಪ್ರಯತ್ನವಾಗಿದೆ ಎಂದು ಆರಿಫ್ ಪ್ರತಿಕ್ರಿಯಿಸಿದ್ದಾರೆ. 2019ರ ಡಿಸೆಂಬರ್ 15ರಂದು ಆಮು ಆವರಣದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಸಂದರ್ಭ ಭುಗಿಲೆದ್ದ ಹಿಂಸಾಚಾರದಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿಗಳು ಹಾಗೂ ಪೊಲೀಸರ ಸಹಿತ 70ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News