ಟಿಎಂಸಿಯ ಇನ್ನೋರ್ವ ಶಾಸಕ ರಾಜೀನಾಮೆ
ಕೋಲ್ಕತಾ: ರಾಜೀವ್ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್ (ಟಿಎಂಸಿ)ತ್ಯಜಿಸಿದ ಕೆಲವೇ ದಿನಗಳ ಬಳಿಕ ಡೈಮಂಡ್ ಹಾರ್ಬರ್ ಕ್ಷೇತ್ರದಿಂದ ಎರಡು ಬಾರಿ ಚುನಾಯಿತರಾಗಿರುವ ದೀಪಕ್ ಹಲ್ದರ್ ಸೋಮವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ಬಿಜೆಪಿಗೆ ಸೇರುವ ಕುರಿತಂತೆ ಎಲ್ಲೂ ತುಟಿ ಬಿಚ್ಚಿಲ್ಲ.
ವಿಧಾನಸಭೆ ಚುನಾವಣೆಗೆ ಮೊದಲು ಟಿಎಂಸಿ ತ್ಯಜಿಸುವ ನಾಯಕರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು,ಇದೀಗ ಪಕ್ಷ ತ್ಯಜಿಸಿರುವ ಹಲ್ದರ್, ಪಕ್ಷದ ನಾಯಕತ್ವವನ್ನು ಟೀಕಿಸಿದ್ದಾರೆ. ತನಗೆ ಜನರಿಗಾಗಿ ಕೆಲಸ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ನಾನು 2 ಬಾರಿ ಶಾಸಕನಾಗಿದ್ದೇನೆ. ಆದರೆ 2017ರಿಂದ ಜನರಿಗಾಗಿ ಸರಿಯಾಗಿ ಕೆಲಸ ಮಾಡಲು ನನಗೆ ಅವಕಾಶ ನೀಡುತ್ತಿಲ್ಲ. ನಾಯಕತ್ವದ ಕುರಿತು ಮಾಹಿತಿ ನೀಡಿದ ಹೊರತಾಗಿಯೂ ಪರಿಸ್ಥಿತಿ ಸುಧಾರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ನನಗೆ ಪಕ್ಷದ ಯಾವುದೇ ಕಾರ್ಯಕ್ರಮದ ಕುರಿತು ಮಾಹಿತಿ ನೀಡುತ್ತಿಲ್ಲ. ನನ್ನ ಕ್ಷೇತ್ರದಲ್ಲಿ ಬೆಂಬಲಿಗರಿಗೆ ನಾನು ಉತ್ತರ ನೀಡಬೇಕಾಗುತ್ತದೆ. ಹೀಗಾಗಿ ನಾನು ಪಕ್ಷವನ್ನು ತ್ಯಜಿಸುತ್ತಿರುವೆ. ನಾನು ನನ್ನ ರಾಜೀನಾಮೆಯನ್ನು ಜಿಲ್ಲಾ ಹಾಗೂ ರಾಜ್ಯ ಅಧ್ಯಕ್ಷರಿಗೆ ಶೀಘ್ರವೇ ಕಳುಹಿಸಿಕೊಡುವೆ ಎಂದು ಹೇಳಿದ್ದಾರೆ.