ಗೋಡೆ ಕಟ್ಟಬೇಡಿ, ಸೇತುವೆಗಳನ್ನು ಕಟ್ಟಿ: ಪೊಲೀಸರ ತಡೆಗೋಡೆಯ ಕುರಿತು ರಾಹುಲ್ ಗಾಂಧಿ ಟ್ವೀಟ್

Update: 2021-02-02 07:54 GMT

ಹೊಸದಿಲ್ಲಿ: ಈಗ ನಡೆಯುತ್ತಿರುವ ರೈತರ ಪ್ರತಿಭಟನೆಯ ನಡುವೆ ರಾಷ್ಟ್ರ ರಾಜಧಾನಿಯ ಗಡಿಭಾಗಗಳಲ್ಲಿ ಭಾರೀ ಬಂದೋಬಸ್ತ್  ಮಾಡಲಾಗಿದೆ, ಈ ಕುರಿತು ಟ್ವೀಟಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಗೋಡೆಗಳನ್ನು ಕಟ್ಟಬೇಡಿ, ಸೇತುವೆಗಳನ್ನು ನಿರ್ಮಿಸಿ' ಎಂದು ಕೇಂದ್ರ ಸರಕಾರಕ್ಕೆ ಸಲಹೆ ನೀಡಿದ್ದಾರೆ.

ಕೃಷಿ ಕಾಯ್ದೆಗಳ ವಿರುದ್ಧ ಎರಡು ತಿಂಗಳುಗಳಿಂದ ರೈತರು ಪ್ರತಿಭಟಿಸುತ್ತಿರುವ ದಿಲ್ಲಿಯ ಗಾಝಿಪುರ, ಸಿಂಘು ಹಾಗೂ ಟಿಕ್ರಿ ಗಡಿಗಳಲ್ಲಿ ಹಾಕಲಾಗಿರುವ ಬ್ಯಾರಿಕೇಡ್ ಗಳು ,ಮುಳ್ಳುತಂತಿಗಳು ಹಾಗೂ ಮೊಳೆಗಳ ಚಿತ್ರಗಳನ್ನು ರಾಹುಲ್ ಟ್ವಿಟರ್ ನಲ್ಲಿ ಟ್ಯಾಗ್ ಮಾಡಿದ್ದಾರೆ.

ನೂತನ ಕೃಷಿ ಕಾನೂನುಗಳನ್ನು ಕೂಡಲೇ ರದ್ದುಪಡಿಸಬೇಕೆಂದು ಆಗ್ರಹಿಸಿರುವ ರಾಹುಲ್ ಗಾಂಧಿ ಅವರು ಸರಕಾರವು ರೈತರನ್ನು ಥಳಿಸುತ್ತಿದೆ, ಬೆದರಿಸುತ್ತಿದೆ ಎಂದು ಆರೋಪಿಸಿದರು. ಪ್ರತಿಭಟನೆಯನ್ನು ಅಂತ್ಯಗೊಳಿಸಬಹುದು ಎಂದು ಆಡಳಿತಾರೂಢ ಸರಕಾರ ಭಾವಿಸಿದ್ದರೆ ಅದು ತಪ್ಪಾಗುತ್ತದೆ. ಮೋದಿ ಸರಕಾರವು ರೈತರ ಹಾಗೂ ಕಾರ್ಮಿಕರ ಜೀವನೋಪಾಯವನ್ನು ನಾಶಪಡಿಸುತ್ತಿದೆ ಎಂದು ದೂರಿದರು.

ಪಂಜಾಬ್, ಹರಿಯಾಣ ಹಾಗೂ ಉತ್ತರಪ್ರದೇಶದ ಹೆಚ್ಚಿನ ರೈತರು ಪ್ರತಿಭಟನಾಸ್ಥಳದಲ್ಲಿ ಸೇರುತ್ತಾರೆ ಎಂಬ ಆತಂಕದಲ್ಲಿ ದಿಲ್ಲಿ ಪೊಲೀಸರು ಮೂರು ಪ್ರತಿಭಟನಾಸ್ಥಳಗಳಲ್ಲಿ ಬ್ಯಾರಿಕೇಡ್ ಗಳು, ಬಂಡೆಗಲ್ಲುಗಳು ಹಾಗೂ ಮುಳ್ಳುತಂತಿಗಳನ್ನು ಹಾಕಿ ಭದ್ರತಾ ವ್ಯವಸ್ಥೆಯನ್ನು ಮಾಡಿದೆ. 

ಜ.26ರ ಹಿಂಸಾತ್ಮಕ ಘಟನೆಗಳ ಬಳಿಕ ದಿಲ್ಲಿ ಪೊಲೀಸರು ಕಠಿಣ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ನಿರ್ಬಂಧಿತ ರಸ್ತೆಗಳಲ್ಲಿ ಕಣ್ಗಾವಲು ಇರಿಸಿಕೊಳ್ಳಲು ಡ್ರೋನ್ ಗಳನ್ನು ಸಹ ಬಳಸಲಾಗುತ್ತಿದೆ. ಗಡಿ ಪ್ರದೇಶಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News