ರೈತರು-ಸರಕಾರದ ನಡುವಿನ ಗೋಡೆಗಳು ಕುಸಿಯಲಿ

Update: 2021-02-03 04:21 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಂದರಗಳನ್ನು, ಕೋಟೆಗಳನ್ನು ನಿರ್ಮಿಸುವ ಮೂಲಕ ರೈತರ ಪ್ರತಿಭಟನೆಯನ್ನು ತಡೆಯಲು ಸಾಧ್ಯವಿಲ್ಲ ಎನ್ನುವ ವಾಸ್ತವವನ್ನು ಸರಕಾರ ಇನ್ನೂ ಒಪ್ಪಿಕೊಳ್ಳಲು ಸಿದ್ಧವಿದ್ದಂತಿಲ್ಲ. ಇಲ್ಲವಾದರೆ, ರೈತರ ಟ್ರಾಕ್ಟರ್, ವಾಹನಗಳನ್ನು ತಡೆಯಲು ರಸ್ತೆಗಳ ಮಧ್ಯೆ ಮುಳ್ಳುಗಳನ್ನು ನೆಡುತ್ತಿರಲಿಲ್ಲ, ಗೋಡೆಗಳನ್ನು ಎಬ್ಬಿಸುತ್ತಿರಲಿಲ್ಲ. ಚೀನಾ-ಭಾರತ ಗಡಿಗಳ ನಡುವೆ ಬೇಲಿ ನಿರ್ಮಿಸಿದಂತೆ, ರೈತರು ಮತ್ತು ಸರಕಾರದ ನಡುವೆ ಗೋಡೆಗಳು ಏಳುತ್ತಿವೆ. ಬಹುಶಃ ಇಷ್ಟೊಂದು ಭದ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದರೆ, ಭಾರತದ ಗಡಿಯೊಳಗೆ ಚೀನಾ ಕಾಲೇ ಇಡುತ್ತಿರಲಿಲ್ಲವೇನೋ? ಸರಕಾರ ಪ್ರತ್ಯಕ್ಷ ಮತ್ತು ಪರೋಕ್ಷ ಗೋಡೆಗಳ ನಿರ್ಮಾಣಗಳ ಮೂಲಕ ರೈತರ ಪ್ರತಿಭಟನೆಗಳನ್ನು ದಮನಿಸಲು ಹೊರಟಿದೆ. ರಸ್ತೆಗಳನ್ನು ಅಗೆಯುವುದು, ಕಾಂಕ್ರಿಟ್ ಗೋಡೆಗಳನ್ನು ನಿರ್ಮಿಸುವುದು, ಮುಳ್ಳುಗಳನ್ನು ನೆಡುವುದು ಇವೆಲ್ಲವೂ ರೈತರ ವಿರುದ್ಧ ಸರಕಾರ ನಿರ್ಮಿಸುತ್ತಿರುವ ಪ್ರತ್ಯಕ್ಷ ಗೋಡೆಗಳು. ಇದೇ ಸಂದರ್ಭದಲ್ಲಿ, ಪ್ರತಿಭಟನಾ ನಿರತರನ್ನು ಖಾಲಿಸ್ತಾನಿಗಳೆಂದು ಬಿಂಬಿಸುವುದು, ದುಷ್ಕರ್ಮಿಗಳು, ಪುಂಡರೆಂದು ಕರೆಯುವುದು ಸರಕಾರ ನಿರ್ಮಿಸುತ್ತಿರುವ ಪರೋಕ್ಷ ಗೋಡೆಗಳು. ಹಾಗೆಯೇ, ರೈತರ ನಡುವೆಯೇ ಭಿನ್ನಮತ ಸೃಷ್ಟಿಸಲು ಯತ್ನಿಸುವುದು, ರೈತರ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವುದು ಇತ್ಯಾದಿಗಳೂ ಸರಕಾರ ಮತ್ತು ರೈತರ ನಡುವೆ ಕಟ್ಟಲಾಗುತ್ತಿರುವ ಇನ್ನಿತರ ಗೋಡೆಗಳೇ ಆಗಿವೆ.

ಒಂದೆಡೆ ಗೋಡೆಗಳನ್ನು ಕಟ್ಟುತ್ತಾ ಮಗದೊಂದೆಡೆ ಸರಕಾರ ರೈತರನ್ನು ಮಾತುಕತೆಗಳಿಗೆ ಆಹ್ವಾನಿಸುತ್ತಿದೆ. ಮಾತುಕತೆಗಳು ಪರಿಹಾರವನ್ನು ಸೂಚಿಸಬಹುದು ಎನ್ನುವ ಭರವಸೆ ಸರಕಾರಕ್ಕಿದೆ ಎಂದಾದಲ್ಲಿ, ಸರಕಾರದ ಗೋಡೆಗಳೇಕೆ ದಿನದಿಂದ ದಿನಕ್ಕೆ ಎತ್ತರವಾಗುತ್ತಿವೆ? ಯಾವುದೇ ಮಾತುಕತೆಗಳು ಗೋಡೆಗಳ ನಿರ್ಮಾಣದಿಂದ ಯಶಸ್ವಿಯಾಗುವುದಿಲ್ಲ, ಬದಲಿಗೆ ಸೇತುವೆಗಳ ನಿರ್ಮಾಣದಿಂದಷ್ಟೇ ಯಶಸ್ವಿಯಾಗುತ್ತವೆ. ಆದುದರಿಂದ ಸರಕಾರ ತಾನು ಕಟ್ಟಿದ ಎಲ್ಲ ಗೋಡೆಗಳನ್ನು ಕೆಡವಿ, ಎಲ್ಲ ಕಂದರಗಳನ್ನು ಮುಚ್ಚಿ, ಆ ಜಾಗದಲ್ಲಿ ಸೇತುವೆಗಳನ್ನು ನಿರ್ಮಾಣ ಮಾಡಬೇಕು. ಆಗ ಮಾತ್ರ ರೈತರ ಮಾತುಗಳು ಸರಕಾರದ ಹೃದಯವನ್ನು ಮುಟ್ಟಲು ಸಾಧ್ಯ. ‘ನಾನೊಂದು ನಿರ್ಧಾರವನ್ನು ಈಗಾಗಲೇ ತಳೆದಿದ್ದೇನೆ ಮತ್ತು ನೀವದನ್ನು ಒಪ್ಪಿಕೊಳ್ಳಬೇಕು ’ ಎನ್ನುವುದನ್ನು ಮಾತುಕತೆ ಎಂದು ಕರೆಯಲಾಗುವುದಿಲ್ಲ. ‘ನಾನೊಂದು ನಿರ್ಧಾರವನ್ನು ತಳೆದಿದ್ದೇನೆ, ನಿಮಗೆ ಅದರ ಕುರಿತಂತೆ ಯಾಕೆ ಆಕ್ಷೇಪಗಳಿವೆ?’ ಎಂದು ಪ್ರಶ್ನಿಸುವುದರಿಂದ ಮಾತುಕತೆಗಳು ಆರಂಭವಾಗುತ್ತವೆ. ಆದರೆ ಸರಕಾರ ಈವರೆಗೆ ರೈತರ ಬಳಿ ಅಂತಹದೊಂದು ಪ್ರಶ್ನೆಯನ್ನೇ ಕೇಳಿಲ್ಲ. ‘ನಾನೇಕೆ ಅಂತಹ ಪ್ರಶ್ನೆಯನ್ನು ಕೇಳಬೇಕು’ ಎಂದು ಸರಕಾರ ಮರು ಪ್ರಶ್ನಿಸಬಹುದು. ಯಾಕೆಂದರೆ, ಸರಕಾರ ತಳೆದಿರುವ ನಿರ್ಧಾರ ಈ ದೇಶದ ರೈತ ಸಮೂಹಕ್ಕೆ ಸಂಬಂಧಿಸಿರುವುದು. ಈ ದೇಶದ ರೈತರಿಗೆ ಒಳಿತನ್ನು ಮಾಡಲು ಈ ಕಾನೂನನ್ನು ಜಾರಿಗೆ ತಂದಿದ್ದೇನೆ ಎನ್ನುತ್ತಿದೆ ಸರಕಾರ.

ನಿಜಕ್ಕೂ ಈ ದೇಶದ ರೈತರಿಗೆ ಈ ಕಾನೂನಿಂದ ಒಳಿತೇ ಆಗುವುದಿದ್ದರೆ, ಅವುಗಳನ್ನು ರೈತರಿಗೆ ಸ್ಪಷ್ಟವಾಗಿ ಮನವರಿಕೆ ಮಾಡಿಕೊಡುವುದೂ ಸರಕಾರದ ಹೊಣೆಗಾರಿಕೆಯಾಗಿದೆ. ‘ಅದನ್ನು ಮನವರಿಕೆ ಮಾಡಲು ತಾನು ವಿಫಲವಾಗಿದ್ದೇನೆ’ ಎನ್ನುವುದನ್ನಾದರೂ ಸರಕಾರ ಒಪ್ಪಿಕೊಳ್ಳಬೇಕು ಮತ್ತು ಈ ಪ್ರತಿಭಟನಾ ನಿರತರ ನಡುವಿನ ಮಾತುಕತೆ, ಆ ಮನವರಿಕೆಯ ಪ್ರಯತ್ನದ ಮುಂದುವರಿಕೆಯಾಗಲಿ. ಮುಕ್ತವಾದ ಮಾತುಕತೆಯಿಂದಷ್ಟೇ ಇದು ಸಾಧ್ಯ. ಆದರೆ ರೈತರ ನಡುವೆ ಗೋಡೆಗಳನ್ನು ಕಟ್ಟಿ ಮುಕ್ತ ಮಾತುಕತೆಗಳನ್ನು ನಡೆಸುವುದು ಸಾಧ್ಯವಿಲ್ಲ.

ಸರಕಾರ ಸದ್ಯಕ್ಕೆ ರೈತರಿಗೆ ತೋರಿರುವ ಅತಿ ದೊಡ್ಡ ಔದಾರ್ಯವೆಂದರೆ, ಒಂದೂವರೆ ವರ್ಷಗಳ ಕಾಲ ಕಾಯ್ದೆಗಳನ್ನು ಮುಂದೂಡಲು ಸಿದ್ಧರಿದ್ದೇವೆ ಎನ್ನುವ ಪ್ರಸ್ತಾವವನ್ನು ಮುಂದಿಟ್ಟಿರುವುದು. ಈ ಒಂದೂವರೆ ವರ್ಷಗಳ ಕಾಲ ಮುಂದೂಡುವುದರಿಂದ ಕಾಯ್ದೆಯಲ್ಲಾಗುವ ವ್ಯತ್ಯಾಸವೇನು? ಎನ್ನುವುದನ್ನು ಸರಕಾರ ಸ್ಪಷ್ಟ ಪಡಿಸಿಲ್ಲ. ಜಾರಿಗೊಳಿಸಿರುವ ಕಾಯ್ದೆಗಳಿಂದ ರೈತರ ಹಿತಾಸಕ್ತಿಗೆ ತೊಂದರೆಯಿದೆ ಎಂದು ಪ್ರತಿಭಟನಾಕಾರರು ವಾದಿಸುತ್ತಿರುವಾಗ, ಒಂದೂವರೆ ವರ್ಷ ಕಾಲ ಕಾಯ್ದೆಗಳನ್ನು ಮುಂದೂಡುವುದರಿಂದ ಕಾಯ್ದೆಯಲ್ಲಾಗುವ ವ್ಯತ್ಯಾಸವೇನು ಎನ್ನುವುದನ್ನು ಸರಕಾರ ರೈತರಿಗೆ ತಿಳಿ ಹೇಳಬೇಕು. ಈ ಹಿಂದೆ ಎನ್‌ಆರ್‌ಸಿ ವಿಷಯದಲ್ಲೂ ಸರಕಾರ ಇಂತಹದೇ ತಂತ್ರವನ್ನು ಮಾಡಿತ್ತು. ‘ಸದ್ಯಕ್ಕೆ ಎನ್‌ಆರ್‌ಸಿ ಜಾರಿಯಿಲ್ಲ’ ಎಂಬ ಹೇಳಿಕೆಯನ್ನು ನೀಡುತ್ತಾ ಬಂತೇ ಹೊರತು, ಎನ್‌ಆರ್‌ಸಿಯನ್ನು ಯಾವ ಕಾರಣಕ್ಕೂ ಜಾರಿಗೊಳಿಸುವುದಿಲ್ಲ ಎಂದು ಸರಕಾರ ಸ್ಪಷ್ಟೀಕರಣ ನೀಡಲಿಲ್ಲ. ಆದುದರಿಂದಲೇ ಪ್ರತಿಭಟನೆ ದೇಶವ್ಯಾಪಿ ವಿಸ್ತರಿಸಿಕೊಂಡಿತು. ಇದೀಗ, ರೈತ ವಿರೋಧಿ ಕಾನೂನುಗಳ ಕುರಿತಂತೆ ಸರಕಾರ ಮುಂದಿಟ್ಟಿರುವ ಪ್ರಸ್ತಾವ, ರೈತರನ್ನು ತಕ್ಷಣಕ್ಕೆ ದಿಲ್ಲಿಯಿಂದ ಹೊರ ಹಾಕುವ ಉದ್ದೇಶವನ್ನು ಹೊಂದಿದೆ.

ಒಂದೋ ಕಾಯ್ದೆಯಲ್ಲಿ ಹಲವು ಮಹತ್ತರ ಬದಲಾವಣೆಗಳನ್ನು ಮಾಡಬೇಕು ಅಥವಾ ಕಾಯ್ದೆಯನ್ನೇ ಕೈ ಬಿಡಬೇಕು. ಸದ್ಯಕ್ಕೆ ಇವೆರಡೇ ಆಯ್ಕೆ ಸರಕಾರದ ಮುಂದಿದೆ. ರೈತರ ಹಿತಾಸಕ್ತಿ ದೇಶದ ಹಿತಾಸಕ್ತಿಯೂ ಆಗಿರುವುದರಿಂದ ಸರಕಾರ, ದೇಶದ ಜೊತೆಗೆ ನಿಲ್ಲುತ್ತದೆಯೋ ಅಥವಾ ದೇಶದ ವಿರುದ್ಧ ನಿಲ್ಲುತ್ತದೆಯೋ ಎನ್ನುವುದನ್ನು ನಿರ್ಧರಿಸುವ ಸಂದರ್ಭ ಬಂದಿದೆ. ದೇಶ ಮುಖ್ಯವೇ ಆಗಿದ್ದರೆ, ರೈತರ ಬೇಡಿಕೆಗಳಿಗೆ ಸರಕಾರ ಕಿವಿ ಕೊಡಬೇಕಾಗಿದೆ. ‘ಅಲ್ಲಿ ನೆರೆದವರು ರೈತರೇ ಅಲ್ಲ’ ಎಂದು ಸರಕಾರ ಹೇಳುತ್ತದೆಯಾದರೆ, ಈವರೆಗೆ ನಡೆದ ಮತ್ತು ಮುಂದೆ ನಡೆಯಲಿರುವ ಮಾತುಕತೆಗಳಿಗೆ ಅರ್ಥವಿಲ್ಲ. ದೇಶವಿರೋಧಿ ಶಕ್ತಿಗಳು ಅಷ್ಟು ಮಂದಿಯನ್ನು ಅಲ್ಲಿ ನೆರೆಯಲು ಪ್ರೇರೇಪಿಸಿದ್ದಾರೆ ಎಂದಾದರೆ, ಆ ಶಕ್ತಿಗಳು ಯಾವುವು ಎನ್ನುವುದನ್ನು ಸರಕಾರ ದೇಶದ ಮುಂದೆ ಬಹಿರಂಗ ಪಡಿಸಬೇಕು. ಭಾರತದ ಮೇಲೆ ಪಾಕಿಸ್ತಾನದಂತಹ ದೇಶಕ್ಕೆ ಇಷ್ಟೊಂದು ನಿಯಂತ್ರಣವಿದೆಯೇ? ಎಂಬ ಪ್ರಶ್ನೆಯೂ ಈ ಸಂದರ್ಭದಲ್ಲಿ ಏಳುತ್ತದೆ. ಆದರೆ ಪ್ರತಿಭಟನೆಯನ್ನು ದಮನಿಸುವುದಕ್ಕಾಗಿಯೇ ಪಾಕಿಸ್ತಾನವನ್ನು ಎಳೆದುತಂದರೆ, ಅದು ರೈತರಿಗೆ ಸರಕಾರ ಎಸಗುವ ದ್ರೋಹವಾಗುತ್ತದೆ. ಆ ದ್ರೋಹವನ್ನು ದೇಶ ಎಂದಿಗೂ ಕ್ಷಮಿಸದು.

ಈ ಮಾತುಕತೆ ಯಶಸ್ವಿಯಾಗಬೇಕಾದರೆ, ಮೊತ್ತ ಮೊದಲು ಸರಕಾರ ‘ತಾನು ಮಾತನಾಡುತ್ತಿರುವುದು ರೈತರ ಜೊತೆಗೆ’ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಅವರು ನಿಜಕ್ಕೂ ರೈತರು ಎನ್ನುವುದು ಮನವರಿಕೆಯಾದ ಬಳಿಕವೇ ‘ಮಾತುಕತೆಗೆ ಸಿದ್ಧ’ ಎಂಬ ಹೇಳಿಕೆಯನ್ನು ನೀಡಬೇಕು. ರೈತರೆನ್ನುವುದು ಸರಕಾರಕ್ಕೆ ಸ್ಪಷ್ಟವಾದಾಕ್ಷಣ, ಪ್ರತಿಭಟನೆಗಿಳಿದ ನೂರಾರು ರೈತರ ಮೇಲೆ ಹಾಕಿರುವ ಪ್ರಕರಣಗಳನ್ನು ಹಿಂದೆಗೆಯಬೇಕು. ದಿಲ್ಲಿಗೆ ಪ್ರತಿಭಟನೆಗೆಂದು ಆಗಮಿಸಿರುವ ನೂರಾರು ಪ್ರತಿಭಟನಾಕಾರರು ನಾಪತ್ತೆಯಾಗಿದ್ದಾರೆ. ಅವರನ್ನು ಪೊಲೀಸರು ಬಂಧಿಸಿದ್ದಾರೆಂದು ರೈತ ಮುಖಂಡರು ಆರೋಪಿಸಿದ್ದಾರೆ. ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು. ಇದಾದ ಬಳಿಕ ರೈತರು ಸರಕಾರವನ್ನು ಭೇಟಿಯಾಗದಂತೆ ನಿರ್ಮಾಣ ಮಾಡಿರುವ ಗೋಡೆ ಮತ್ತು ಅಗೆದಿರುವ ಕಂದರಗಳನ್ನು ಇಲ್ಲವಾಗಿಸಬೇಕು. ರೈತರು ಮತ್ತು ಸರಕಾರದ ನಡುವೆ ನೆಟ್ಟಿರುವ ಮುಳ್ಳುಗಳನ್ನು ಕಿತ್ತು ಹಾಕಿ, ದಾರಿಯನ್ನು ಸುಗಮ ಗೊಳಿಸಬೇಕು. ಬಿರುಕು ಬಿದ್ದಿರುವ ಮನಸ್ಸುಗಳ ನಡುವೆ ಸೇತುವೆಯನ್ನು ನಿರ್ಮಾಣ ಮಾಡಬೇಕು. ತಾನು ಮಾತನಾಡುತ್ತಿರುವುದು ತನ್ನನ್ನು ಅಧಿಕಾರಕ್ಕೇರಿಸಿದ ತನ್ನದೇ ದೇಶದ ಜನತೆಯ ಜೊತೆಗೆ ಎನ್ನುವುದನ್ನು ಗಮನದಲ್ಲಿಟ್ಟು ಮುಂದಿನ ಮಾತುಕತೆ ಆರಂಭವಾಗಲಿ ಮತ್ತು ಈ ಮಾತುಕತೆಯಲ್ಲಿ ರೈತರ ಜೊತೆಗೆ ದೇಶವೂ ಗೆಲ್ಲಲಿ. ನಂಬಿದ ಜನರನ್ನು ಸರಕಾರ ಯಾವ ಕಾರಣಕ್ಕೂ ಕೈ ಬಿಡದಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News