ಪರ್ತ್‌ನಲ್ಲಿ ಕಾಡ್ಗಿಚ್ಚು: ಮನೆ ಬಿಡಲು ಸಾವಿರಾರು ಮಂದಿಗೆ ಸೂಚನೆ
ಪರ್ತ್ (ಆಸ್ಟ್ರೇಲಿಯ), ಫೆ. 3: ಆಸ್ಟ್ರೇಲಿಯದ ವೆಸ್ಟರ್ನ್ ಆಸ್ಟ್ರೇಲಿಯ ರಾಜ್ಯದ ರಾಜಧಾನಿ ಪರ್ತ್‌ನಲ್ಲಿ ಕಾಡ್ಗಿಚ್ಚು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ, ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಸಾವಿರಾರು ಜನರಿಗೆ ಸರಕಾರ ಬುಧವಾರ ಮನವಿ ಮಾಡಿದೆ.
ವೆಸ್ಟರ್ನ್ ಆಸ್ಟ್ರೇಲಿಯದಲ್ಲಿ ಕಾಡ್ಗಿಚ್ಚು ಈಗಾಗಲೇ 22,240 ಎಕರೆಗೂ ಹೆಚ್ಚು ಜಮೀನನ್ನು ಆಪೋಶನ ತೆಗೆದುಕೊಂಡಿದೆ ಹಾಗೂ 71 ಮನೆಗಳನ್ನು ಸುಟ್ಟು ಹಾಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪೂರ್ವ ಆಸ್ಟ್ರೇಲಿಯದಲ್ಲಿ ವರ್ಷದ ಹಿಂದೆ ಕಾಣಿಸಿಕೊಂಡ ಕಾಡ್ಗಿಚ್ಚು ಕೋಟಿಗಟ್ಟಲೆ ಎಕರೆ ಜಮೀನನ್ನು ನಾಶಪಡಿಸಿತ್ತು.
ಆಸ್ಟ್ರೇಲಿಯದ ನಾಲ್ಕನೇ ಅತಿ ದೊಡ್ಡ ನಗರವಾಗಿರುವ ಪರ್ತ್‌ನ ಕಡಿದಾದ ಜನವಾಸವಿಲ್ಲದ ಪ್ರದೇಶಗಳಲ್ಲಿ ಕಾಡ್ಗಿಚ್ಚು ವಿಜೃಂಭಿಸುತ್ತಿದೆ. ಬೆಂಕಿಯನ್ನು ನಂದಿಸಲು ಅಗ್ನಿಶಾಮಕರು ನಿರಂತರ ಹೋರಾಟ ನಡೆಸುತ್ತಿದ್ದಾರೆ. ನಗರದ ಉಪನಗರವಾಗಿರುವ ಬುಲ್ಸ್‌ಬ್ರೂಕ್‌ನಲ್ಲಿ ವಾಸಿಸುತ್ತಿರುವ ಸುಮಾರು 6,600 ನಿವಾಸಿಗಳಿಗೆ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ಹೋಗಲು ಸೂಚಿಸಲಾಗಿದೆ ಎಂದು ರಾಜ್ಯದ ಪ್ರೀಮಿಯರ್ ಮಾರ್ಕ್ ಮೆಕ್‌ಗೊವಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.