ಅರ್ನಬ್ ಗೋಸ್ವಾಮಿ, ಅವರ ಪತ್ನಿ, ಕಂಪೆನಿಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಮುಂಬೈ ಪೊಲೀಸ್ ಅಧಿಕಾರಿ
ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ತನ್ನ ವಿರುದ್ಧ ಅವಮಾನಕರ ಹೇಳಿಕೆಗಳನ್ನು ನೀಡಿದ ಆರೋಪದಲ್ಲಿ ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ, ಅವರ ಪತ್ನಿ, ಕಂಪೆನಿಯ ನಿರ್ದೇಶಕಿ ಸಮ್ಯಬ್ರತಾ ರೇ ಗೋಸ್ವಾಮಿ ಹಾಗೂ ರಿಪಬ್ಲಿಕ್ ಮೀಡಿಯಾ ನೆಟ್ ವರ್ಕ್ ಮಾಲಕತ್ವ ಹೊಂದಿರುವ ಎಆರ್ ಜಿ ಔಟ್ ಲಿಯರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ವಿರುದ್ಧ ಮುಂಬೈನ ಪೊಲೀಸ್ ಉಪಾಯುಕ್ತರಾದ(ಡಿಸಿಪಿ) ಅಭಿಷೇಕ್ ತ್ರಿಮುಖೆ ಅವರು ಬುಧವಾರ ಸೆಶನ್ಸ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ದೂರು ಸಲ್ಲಿಸಿದ್ದಾರೆ.
ಅಭಿಷೇಕ್ ತ್ರಿಮುಖೆಯನ್ನು ತಪ್ಪಾಗಿ ಬಿಂಬಿಸುವ ಕೆಲವು ಟ್ವೀಟ್ ಗಳು ಇದ್ದವು. ಅವರು ಈ ಕುರಿತು ಮಹಾರಾಷ್ಟ್ರ ಸರಕಾರಕ್ಕೆ ಪತ್ರ ಬರೆದಿದ್ದರು. ರಾಜ್ಯ ಗೃಹ ಇಲಾಖೆ ತನ್ನ ಅನುಮತಿಯನ್ನು ನೀಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆ(ಐಪಿಸಿ)ಯ 499, 500(ಮಾನಹಾನಿ)ಹಾಗೂ 501(ಮಾನಹಾನಿಕರ ಎಂದು ತಿಳಿದಿರುವ ಮುದ್ರಣ ಅಥವಾ ವಿಷಯ) ಸೆಕ್ಷನ್ ಗಳಡಿಯಲ್ಲಿ ದೂರು ದಾಖಲಿಸಲಾಗಿದೆ.
ಕಳೆದ ವರ್ಷ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯಿಂದ ಸಾವನ್ನಪ್ಪಿದ ಸಂದರ್ಭದಲ್ಲಿ ಗೋಸ್ವಾಮಿ “ಸಂಪೂರ್ಣ ಸುಳ್ಳು’, ‘ದುರುದ್ದೇಶಪೂರಿತ’ ಹಾಗೂ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ. ರಜಪೂತ್ ಅವರ ಗೆಳತಿ, ನಟಿ ರಿಯಾ ಚಕ್ರವರ್ತಿಯವರ ಫೋನ್ ದಾಖಲೆಗಳ ಬಗ್ಗೆ ಚರ್ಚೆಯ ಸಂದರ್ಭದಲ್ಲಿ ಈ ಮಾನಹಾನಿಕರ ಹೇಳಿಕೆಗಳನ್ನು ರಿಪಬ್ಲಿಕ್ ಭಾರತ್ ಚಾನೆಲ್ ನಲ್ಲಿ ಪ್ರಸಾರ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.