ನಮ್ಮ ರೈತರೊಂದಿಗೆ ಯುದ್ಧ ಸಾರಿದ್ದೀರಾ?: ಪ್ರಧಾನಿ ಮೋದಿಗೆ ವಿಪಕ್ಷಗಳ ಪ್ರಶ್ನೆ

Update: 2021-02-03 18:39 GMT

ಹೊಸದಿಲ್ಲಿ, ಫೆ.3: ದಿಲ್ಲಿ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಅಲ್ಲಿಂದ ಮುಂದುವರಿಯಲು ತಡೆಯೊಡ್ಡುವ ನಿಟ್ಟಿನಲ್ಲಿ ರಸ್ತೆ ಪಕ್ಕ ಕಂದಕ, ಮುಳ್ಳು ತಂತಿಯ ಬೇಲಿ, ರಸ್ತೆಯಲ್ಲಿ ಕಬ್ಬಿಣದ ಮೊಳೆಗಳನ್ನು ಸಿಕ್ಕಿಸಿರುವುದು ಹಾಗೂ ಸಿಮೆಂಟ್ ಬ್ಯಾರಿಕೇಡ್ ಅಳವಡಿಸಿರುವ ಸರಕಾರದ ಕ್ರಮವನ್ನು ವಿಪಕ್ಷಗಳು ಟೀಕಿಸಿವೆ. ಪ್ರತಿಭಟನೆ ನಡೆಯುತ್ತಿರುವ ಸಿಂಘು, ಘಾಝಿಪುರ ಮತ್ತು ಟಿಕ್ರಿ ಭಾಗದಲ್ಲಿ ಬಂಬೋಬಸ್ತ್ ಬಿಗಿಗೊಳಿಸಲಾಗಿದೆ. ‘ಸರಕಾರ ಸೇತುವೆ ನಿರ್ಮಿಸಬೇಕು, ಗೋಡೆಯನ್ನಲ್ಲ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ದಿಲ್ಲಿ ಗಡಿಭಾಗದಲ್ಲಿ ಬೃಹತ್ ಪ್ರಮಾಣದಲ್ಲಿ ಪೊಲೀಸ್ ಮತ್ತು ಅರೆಸೇನಾ ಪಡೆಯನ್ನು ನಿಯೋಜಿಸಿರುವ ವೀಡಿಯೊ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ‘ಪ್ರಧಾನಿ ದೇಶದ ರೈತರ ವಿರುದ್ಧ ಯುದ್ಧ ಸಾರಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.

ರೈತರನ್ನು ದಿಲ್ಲಿಗೆ ಪ್ರವೇಶಿಸಲು ಬಿಡದೇ ಇರುವುದು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾರ ನಾಯಕತ್ವದಡಿಯ ನವಭಾರತವೇ? ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಪ್ರಶ್ನಿಸಿದ್ದಾರೆ. ‘ರೈತರು ನಮ್ಮದೇ ದೇಶದ ಪ್ರಜೆಗಳು ಮತ್ತು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ ಎಂಬುದನ್ನು ಪ್ರಧಾನಿ ಮೋದಿಗೆ ನೆನಪಿಸಬೇಕಾಗಿದೆ. ಮೋದಿಯವರಿಗೆ ತಮ್ಮ ತಾಕತ್ತನ್ನು ತೋರಿಸುವ ಆತುರವಿದ್ದರೆ ಅವರು ದೇಶದ ವಿರುದ್ಧ ದುರ್ವರ್ತನೆ ತೋರುತ್ತಿರುವ ಚೀನಾವನ್ನು ಪ್ರಶ್ನಿಸಲಿ’ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ವಕ್ತಾರ ನವಾಬ್ ಮಲಿಕ್ ಟ್ವೀಟ್ ಮಾಡಿದ್ದಾರೆ.

ಕೃಷಿ ಕಾಯ್ದೆಯ ಬಗ್ಗೆ ಚರ್ಚಿಸಲು ಬನ್ನಿ ಎಂದು ರೈತರನ್ನು ಆಹ್ವಾನಿಸುವ ಜೊತೆಗೆ, ರೈತರ ಚಲನವಲನ ನಿಯಂತ್ರಿಸಲು ರಸ್ತೆಯಲ್ಲಿ ಮೊಳೆ ಊರುವ ಮೂಲಕ ಸರಕಾರದ ದ್ವಿಮುಖ ಧೋರಣೆ ಬಹಿರಂಗವಾಗಿದೆ ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಟೀಕಿಸಿದ್ದಾರೆ.

  ದಿಲ್ಲಿ ಗಡಿಭಾಗದಲ್ಲಿ ಬ್ಯಾರಿಕೇಡ್ ನಿರ್ಮಾಣ, ಮುಳ್ಳುತಂತಿ ಬೇಲಿ ಹಾಕಿರುವುದನ್ನು ಚೀನಾವು ಅರುಣಾಚಲ ಪ್ರದೇಶದಲ್ಲಿ ನಡೆಸುತ್ತಿರುವ ನಿರ್ಮಾಣ ಕಾರ್ಯಕ್ಕೆ ಹೋಲಿಸಿ ಆಮ್ ಆದ್ಮಿ ಪಕ್ಷ ಫೋಟೋಗಳನ್ನು ಟ್ವೀಟ್ ಮಾಡಿದೆ. ನವಭಾರತದಲ್ಲಿ ಬಹುಷಃ ರೈತರಿಗೆ ಸ್ಥಳವಿರುವುದಿಲ್ಲ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹೇಳಿದ್ದಾರೆ. ಜೊತೆಗೆ ರಸ್ತೆಯಲ್ಲಿ ಮೊಳೆಗಳನ್ನು ನೆಟ್ಟಿರುವ ಫೋಟೋ ಶೇರ್ ಮಾಡಿರುವ ಅವರು, ಇದಕ್ಕಿಂತ ವಿಷಾದಕರ ಚಿತ್ರವಿರಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News