ಕೊರೋನ ಲಸಿಕೆ ಪಡೆದ ಆರೋಗ್ಯ ಕಾರ್ಯಕರ್ತ ಸಾವು

Update: 2021-02-03 19:07 GMT

ರಾಂಚಿ, ಫೆ. 3: ಇಲ್ಲಿನ ಮೆದಾಂತ ಆಸ್ಪತ್ರೆಯಲ್ಲಿ ಫೆಬ್ರವರಿ 1ರಂದು ಕೊರೋನ ಲಸಿಕೆ ಕೋವಿಶೀಲ್ಡ್ ತೆಗೆದುಕೊಂಡ ಆರೋಗ್ಯ ಕಾರ್ಯಕರ್ತರೊಬ್ಬರು ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.

ಮೃತಪಟ್ಟ ಆರೋಗ್ಯ ಕಾರ್ಯಕರ್ತನನ್ನು ಮನ್ನು ಪಹಾನ್ (52) ಎಂದು ಗುರುತಿಸಲಾಗಿದೆ. ಇವರು ಮೆದಾಂತ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ‘‘ಪಹಾನ್ ಅವರ ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ’’ ಎಂದು ಮೆದಾಂತ ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಂಕಜ್ ಸಹಾನಿ ಹೇಳಿದ್ದಾರೆ. ಕೊರೋನ ಲಸಿಕೆ ಕೋವಿಶೀಲ್ಡ್ ಪಡೆದುಕೊಂಡ ಬಳಿಕ ಮನ್ನು ಪಹಾನ್ ರಾಂಚಿಯ ಸಮೀಪದ ಒರ್ಮಾಂಝಿಯ ಗ್ರಾಮದಲ್ಲಿರುವ ತನ್ನ ಮನೆಗೆ ಹಿಂದಿರುಗಿದ್ದರು. ಫೆಬ್ರವರಿ 2ರಂದು ಕೆಲಸಕ್ಕೆ ಕೂಡ ಹಾಜರಾಗಿದ್ದರು. ಮಂಗಳವಾರ ರಾತ್ರಿ ಅವರು ತನ್ನ ಗ್ರಾಮದಲ್ಲಿ ಕುಸಿದು ಬಿದ್ದು ಅಸ್ವಸ್ಥರಾಗಿದ್ದರು. ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ದಾರಿ ಮಧ್ಯೆ ಮೃತಪಟ್ಟಿದ್ದರು ಎಂದು ರಾಜ್ಯದ ಕೋವಿಡ್-19 ಲಸಿಕೆ ಅಭಿಯಾನದ ನೋಡಲ್ ಅಧಿಕಾರಿ ಡಾ. ಅಜಿತ್ ಪ್ರಸಾದ್ ಹೇಳಿದ್ದಾರೆ.

 ಮೆದಾಂತ ಆಸ್ಪತ್ರೆಯಲ್ಲಿ ಫೆಬ್ರವರಿ 1ರಂದು ಮನ್ನು ಪಹಾನ್ ಸೇರಿದಂತೆ ಒಟ್ಟು 151 ಆರೋಗ್ಯ ಕಾರ್ಯಕರ್ತರು ಕೊರೋನ ಲಸಿಕೆ ಪಡೆದುಕೊಂಡಿದ್ದರು. ಪಹಾನ್ ಅವರು ಕೊರೋನ ಲಸಿಕೆ ತೆಗೆದುಕೊಂಡ ಸಂದರ್ಭ ಇತರ 9 ಮಂದಿ ಅದೇ ಸೀಸೆಯಿಂದ ಕೊರೋನ ಲಸಿಕೆ ಪಡೆದುಕೊಂಡಿದ್ದರು. ಆದರೆ, ಅವರೆಲ್ಲರೂ ಆರೋಗ್ಯವಾಗಿದ್ದಾರೆ. ಆದುದರಿಂದ ಪಹಾನ್ ಕೊರೋನ ಲಸಿಕೆಯಿಂದಲೇ ಸಾವನ್ನಪ್ಪಿದರೇ ಎಂಬುದನ್ನು ದೃಢಪಡಬೇಕಿದೆ ಎಂದು ಪ್ರಸಾದ್ ತಿಳಿಸಿದ್ದಾರೆ.

ಒಂದು ವೇಳೆ ಅವರು ಕೊರೋನ ಲಸಿಕೆಯಿಂದಲೇ ಮೃತಪಟ್ಟಿದ್ದರೆ, ಜಾರ್ಖಂಡನಲ್ಲಿ ಇಂತಹ ಪ್ರಕರಣ ಮೊದಲನೆಯಾದಾಗಲಿದೆ ಎಂದು ಪ್ರಸಾದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News