×
Ad

ಕೊರೋನ: ಸರಕಾರದ ಹೇಳಿಕೆಯಂತೆ ಮೃತ ವೈದ್ಯರ ಸಂಖ್ಯೆ 162,ಆದರೆ 700ಕ್ಕೂ ಅಧಿಕ ವೈದ್ಯರು ಸಾವನ್ನಪ್ಪಿದ್ದಾರೆ ಎಂದ ಐಎಂಎ

Update: 2021-02-04 22:21 IST

ಹೊಸದಿಲ್ಲಿ,ಫೆ.4: ಕೊರೋನ ವೈರಸ್‌ನಿಂದಾಗಿ ಮೃತಪಟ್ಟ ವೈದ್ಯರ ಕುರಿತು ಸರಕಾರದ ಅಂಕಿಅಂಶಗಳನ್ನು ಭಾರತೀಯ ವೈದ್ಯಕೀಯ ಸಂಘ (ಐಎಂಎ)ವು ತಿರಸ್ಕರಿಸಿದೆ. ಕೋವಿಡ್‌ನಿಂದಾಗಿ ದೇಶಾದ್ಯಂತ 162 ವೈದ್ಯರು ಮೃತಪಟ್ಟಿದ್ದಾರೆ ಎಂದು ಸರಕಾರವು ಹೇಳಿದ್ದರೆ,ಈವರೆಗೆ ಸೋಂಕಿನಿಂದಾಗಿ 734 ವೈದ್ಯರು ಮೃತಪಟ್ಟಿದ್ದಾರೆಂದು ಐಎಂಎ ತಿಳಿಸಿದೆ.

ಮಂಗಳವಾರ ರಾಜ್ಯಸಭೆಯಲ್ಲಿ ಅಂಕಿಅಂಶಗಳನ್ನು ಒದಗಿಸಿದ್ದ ಸಹಾಯಕ ಆರೋಗ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು, ಕೋವಿಡ್ ಸೋಂಕಿನಿಂದಾಗಿ 162 ವೈದ್ಯರಲ್ಲದೆ 107 ನರ್ಸ್‌ಗಳು ಮತ್ತು 44 ಆಶಾ ಕಾರ್ಯಕರ್ತೆಯರೂ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದರು.

ಸಾವುಗಳ ಸಂಖ್ಯೆಯನ್ನು ಕಡಿಮೆಯಾಗಿ ತೋರಿಸಿರುವುದು ತನಗೆ ಆಘಾತವನ್ನುಂಟು ಮಾಡಿದೆ ಎಂದು ದೇಶಾದ್ಯಂತದ 3.5 ಲಕ್ಷ ವೈದ್ಯರನ್ನು ಪ್ರತಿನಿಧಿಸುತ್ತಿರುವ ಐಎಂಎ ಹೇಳಿದೆ.

2021,ಫೆ.3ಕ್ಕೆ ಇದ್ದಂತೆ ನಮ್ಮ ದೇಶದಲ್ಲಿ 734 ವೈದ್ಯರು ಕೊರೋನವೈರಸ್ ಸೋಂಕಿನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಇವರಲ್ಲಿ ಜನರ ಸಂಪರ್ಕಕ್ಕೆ ಮೊದಲು ಬರುವ 431 ಸಾಮಾನ್ಯ ವೈದ್ಯರು ಸೇರಿದ್ದಾರೆ. ಮೃತರ ಪೈಕಿ 25 ವೈದ್ಯರು 35 ವರ್ಷಕ್ಕೂ ಕಡಿಮೆ ಪ್ರಾಯದವರಾಗಿದ್ದರು ಎಂದು ಐಎಂಎ ಬುಧವಾರ ಚೌಬೆಯವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.

ಸಾವುಗಳನ್ನು ನಿಖರವಾಗಿ ದಾಖಲಿಸಿಕೊಳ್ಳದ್ದಕ್ಕಾಗಿ ಸರಕಾರವನ್ನು ಟೀಕಿಸಿರುವ ಐಎಂಎ,ಕೊರೋನವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲಿ ಪರಹಿತ ಚಿಂತನೆಗಾಗಿ ಕೊರೋನ ಯೋಧರು ಹೋರಾಡಿದ್ದರು ಮತ್ತು ಈ ಹೋರಾಟದಲ್ಲಿ ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಆದರೆ ಈ ಸಾವುಗಳನ್ನು ಸರಕಾರವು ಸೂಕ್ತವಾಗಿ ದಾಖಲೀಕರಿಸದಿರುವುದು ದುರದೃಷ್ಟಕರವಾಗಿದೆ. ಐಎಂಎ ಒದಗಿಸಿದ್ದ ಮಾಹಿತಿಗಳನ್ನು ದೃಢಪಡಿಸಿಕೊಳ್ಳುವಲ್ಲಿ ಸರಕಾರದ ಉದಾಸೀನ ಮತ್ತು ಕೋವಿಡ್ ಹುತಾತ್ಮರ ಕುಟುಂಬಗಳಿಗೆ ಪರಿಹಾರ ವಿತರಣೆಯಲ್ಲಿ ವಿಳಂಬವನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ತಿಳಿಸಿದೆ.

 ವೈದ್ಯರ ಸಾವುಗಳ ಕುರಿತು ಮಾಹಿತಿಗಳನ್ನು ವಿವರವಾಗಿ ಅಧ್ಯಯನ ಮಾಡಲು ಮತ್ತು ಅವರ ಕುಟುಂಬಗಳಿಗೆ ಪರಿಹಾರ ವಿತರಣೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸುವಂತೆ ಐಎಂಎ ಸರಕಾರವನ್ನು ಆಗ್ರಹಿಸಿದೆ.

 ನವಂಬರ್ ಮತ್ತು ಜನವರಿಯಲ್ಲಿ,ಹೀಗೆ ಎರಡು ಬಾರಿ ಸಂಘವು ಸಂಬಂಧಿಸಿದ ಮಾಹಿತಿಗಳನ್ನು ಸರಕಾರಕ್ಕೆ ಸಲ್ಲಿಸಿತ್ತು ಎಂದು ತಿಳಿಸಿದ ಐಎಂಎ ರಾಷ್ಟ್ರೀಯ ಅಧ್ಯಕ್ಷ ಡಾ.ಜೆ.ಎ.ಜಯಲಾಲ ಅವರು,ಕರ್ತವ್ಯದಲ್ಲಿದ್ದಾಗ ನಿಧನರಾದ ವೈದ್ಯರ ಕುರಿತು ಮಾಹಿತಿಗಳು ತನ್ನ ಬಳಿಯಿಲ್ಲ ಎಂದು ಸರಕಾರವು ಪ್ರಕಟಿಸಿದ ಬಳಿಕ ನಾವು ಈ ಮಾಹಿತಿಗಳನ್ನು ಸ್ವಯಂಪ್ರೇರಿತವಾಗಿ ಒದಗಿಸಿದ್ದೆವು ಎಂದರು.

ಅಕ್ಟೋಬರ್‌ನಲ್ಲಿ ಐಎಂಎ ಕೊರೋನವೈರಸ್ ಸೋಂಕಿನಿಂದ ಮೃತಪಟ್ಟಿದ್ದ 500ಕ್ಕೂ ಅಧಿಕ ವೈದ್ಯರ ಪಟ್ಟಿಯನ್ನು ಪ್ರಕಟಿಸಿತ್ತು.

ಮುಂಚೂಣಿಯ ಕೊರೋನ ಹೋರಾಟಗಾರರ ಬಗ್ಗೆ ಕೇಂದ್ರದ ಅಸಡ್ಡೆಯನ್ನೂ ಐಎಂಎ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News