×
Ad

"ನೀವು ಸುಳ್ಳು ಹೇಳುತ್ತಿದ್ದೀರಿ": ಎಎನ್ಐ ಸುದ್ದಿಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡ ವಿಶಾಲ್ ದದ್ಲಾನಿ

Update: 2021-02-04 22:27 IST

ಹೊಸದಿಲ್ಲಿ: ಅಮೆರಿಕಾದ ಸ್ಟೇಟ್ ಡಿಪಾರ್ಟ್‍ಮೆಂಟ್ ಭಾರತದ ಕೃಷಿ ಕಾಯಿದೆಗಳನ್ನು  ಬೆಂಬಲಿಸಿದೆ ಎಂಬರ್ಥ ನೀಡುವ ವರದಿ ಪ್ರಕಟಿಸಿದ ಸುದ್ದಿ ಸಂಸ್ಥೆ ಎಎನ್‍ಐ ವಿರುದ್ಧ  ಖ್ಯಾತ ಸಂಗೀತ ಸಂಯೋಜಕ ಹಾಗೂ ಇಂಡಿಯನ್ ಐಡಲ್ ತೀರ್ಪುಗಾರ ವಿಶಾಲ್ ದದ್ಲಾನಿ  ಹರಿಹಾಯ್ದಿದ್ದಾರೆ.

ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳಾದ ಪಾಪ್ ಗಾಯಕಿ ರಿಹಾನ್ನ, ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಸಹಿತ ಹಲವರು ರೈತರ ಹೋರಾಟವನ್ನು ಬೆಂಬಲಿಸಿ ಟ್ವೀಟ್ ಮಾಡಿದ ನಂತರದ ಬೆಳವಣಿಗೆಯಲ್ಲಿ ಎಎನ್‍ಐ ಪ್ರಕಟಿಸಿದ ಸುದ್ದಿಯನ್ನು ವಿಶಾಲ್ ಖಂಡಿಸಿದ್ದಾರೆ.

"ಅಮೆರಿಕಾ ಭಾರತದ ನೂತನ ಕೃಷಿ ಕಾನೂನುಗಳನ್ನು ಬೆಂಬಲಿಸಿದೆ, ಈ ಸುಧಾರಣೆಗಳು ಮಾರುಕಟ್ಟೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವುದು" ಎಂದು ಎಎನ್‍ಐ ಪ್ರಕಟಿಸಿದ ಸುದ್ದಿಯ ಶೀರ್ಷಿಕೆಯಾಗಿತ್ತು.

ಅಮೆರಿಕಾದ ಸ್ಟೇಟ್ ಡಿಪಾರ್ಟ್‍ಮೆಂಟ್ ತನ್ನ ಹೇಳಿಕೆಯಲ್ಲಿ ಭಾರತದ ಮಾರುಕಟ್ಟೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ಕ್ರಮಗಳನ್ನು ಹಾಗೂ ಹೆಚ್ಚಿನ ಖಾಸಗಿ ರಂಗದ ಹೂಡಿಕೆಯನ್ನು ಆಕರ್ಷಿಸುವ ಕ್ರಮಗಳನ್ನು ಸ್ವಾಗತಿಸುವುದಾಗಿ ಹೇಳಿದ್ದರೂ  ಭಾರತದ ವಿವಾದಿತ ಕೃಷಿ ಕಾನೂನುಗಳನ್ನು ಬೆಂಬಲಿಸುವ ಯಾವುದೇ ಮಾತುಗಳನ್ನು ಆಡಿರಲಿಲ್ಲ.

ಇದರಿಂದ ಆಕ್ರೋಶಗೊಂಡ ದದ್ಲಾನಿ ಎಎನ್‍ಐ ಸುಳ್ಳು ಹೇಳುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

"ನೀವು ನೇರವಾಗಿ ಸುಳ್ಳು ಹೇಳುತ್ತಿದ್ದೀರಿ. ನಾನು ನೀವು  ಪ್ರಕಟಿಸಿದ ವರದಿಯನ್ನು  ಲಗತ್ತಿಸಿದ್ದೇನೆ. ನಿಮ್ಮ ಸಂಸ್ಥೆಯಲ್ಲಿರುವ ಯಾರಾದರೂ ಅಕ್ಷರಸ್ಥರಾಗಿದ್ದಾರೆಂದು ನಾನು ನಂಬಿದ್ದೇನೆ. ಮೋದಿಯ ಕೃಷಿ ಕಾನೂನುಗಳನ್ನು ಅಮೆರಿಕಾ ಬೆಂಬಲಿಸುತ್ತದೆಯೆಂದು ಅಮೆರಿಕಾ ಎಲ್ಲಿ ನಿಖರವಾಗಿ ಹೇಳಿದೆ ಎಂದು ತೋರಿಸಿ" ಎಂದು ದದ್ಲಾನಿ ತಮ್ಮ ಟ್ವೀಟ್‍ನಲ್ಲಿ ಬರೆದಿದ್ದಾರೆ ಜತೆಗೆ ಎಎನ್‍ ಐಯ ವರದಿ ಹಾಗೂ ಅಮೆರಿಕಾದ ಹೇಳಿಕೆಯನ್ನೂ ಪೋಸ್ಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News