ಪ್ರತಿಭಟನೆ ಒಂದು ರಾಜ್ಯಕ್ಕೆ ಸೀಮಿತವಾಗಿದೆ, ರೈತರನ್ನು ಪ್ರಚೋದಿಸಲಾಗುತ್ತಿದೆ: ತೋಮರ್

Update: 2021-02-05 15:18 GMT

ಹೊಸದಿಲ್ಲಿ,ಫೆ.5: ಮೂರು ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆಗಳು ಒಂದು ರಾಜ್ಯಕ್ಕೆ ಮಾತ್ರ ಸೀಮಿತವಾಗಿವೆ ಮತ್ತು ರೈತರನ್ನು ಪ್ರಚೋದಿಸಲಾಗುತ್ತಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಶುಕ್ರವಾರ ಹೇಳಿದರು.

ರಾಜ್ಯಸಭೆಯಲ್ಲಿ ಬಜೆಟ್ ಅಧಿವೇಶನದ ಆರಂಭದಲ್ಲಿ ಜಂಟಿ ಸದನವನ್ನುದೇಶಿಸಿ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು,ಈ ಕಾಯ್ದೆಗಳು ಜಾರಿಗೊಂಡರೆ ರೈತರ ಭೂಮಿ ಬೇರೆಯವರ ಪಾಲಾಗುತ್ತದೆ ಎಂದು ಹೇಳುವ ಮೂಲಕ ಅವರನ್ನು ದಾರಿ ತಪ್ಪಿಸಲಾಗುತ್ತಿದೆ. ಯಾವುದೇ ವ್ಯಾಪಾರಿ ರೈತನ ಭೂಮಿಯನ್ನು ಕಬಳಿಸಲು ಅವಕಾಶ ನೀಡುವ ಯಾವುದೇ ನಿಬಂಧನೆ ಗುತ್ತಿಗೆ ಕೃಷಿ ಕಾಯ್ದೆಯಲ್ಲಿದ್ದರೆ ತನಗೆ ತೋರಿಸಿ ಎಂದು ಸವಾಲು ಹಾಕಿದರು.

ನೂತನ ಕೃಷಿ ಕಾಯ್ದೆಗಳಲ್ಲಿ ಒಂದೇ ಒಂದು ಲೋಪವನ್ನು ಎತ್ತಿ ತೋರಿಸಲು ರೈತ ಸಂಘಟನೆಗಳು ಮತ್ತು ಪ್ರತಿಪಕ್ಷಗಳು ವಿಫಲಗೊಂಡಿವೆ ಎಂದ ಅವರು,ಸರಕಾರವು ರೈತರಿಗೆ ಸೂಕ್ತ ಗೌರವವನ್ನು ನೀಡಿದೆ ಮತ್ತು ಅವರೊಂದಿಗೆ ಮಾತುಕತೆಗಳಲ್ಲಿ ತೊಡಗಿಕೊಂಡಿದೆ. ಆದರೆ ತಿದ್ದುಪಡಿಗೆ ಸರಕಾರವು ಸಿದ್ಧವಿದೆ ಎಂದ ಮಾತ್ರಕ್ಕೆ ಕೃಷಿ ಕಾಯ್ದೆಗಳಲ್ಲಿ ಲೋಪದೋಷಗಳಿವೆ ಎಂದು ವ್ಯಾಖ್ಯಾನಿಸಬೇಕಿಲ್ಲ ಎಂದು ಹೇಳಿದರು.

ಸರಕಾರ ಮತ್ತು ಅದರ ಬೆಂಬಲಿಗರು ರೈತರ ಹೆಸರು ಕೆಡಿಸುತ್ತಿದ್ದಾರೆ ಎಂಬ ಆರೋಪಗಳ ಕುರಿತಂತೆ ಸಚಿವರು,‘ರೈತರಿಗೆ ಮಾನಹಾನಿಯನ್ನುಂಟು ಮಾಡುವ ಒಂದೇ ಒಂದು ಶಬ್ದವನ್ನು ನಾವು ಉಸುರಿಲ್ಲ ’ಎಂದರು.

ಸರಕಾರವು ರೈತರ ಏಳಿಗೆಗೆ ಮತ್ತು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಆಧಾರಿತ ವ್ಯವಸ್ಥೆಯಡಿ ಕೃಷಿ ಉತ್ಪನ್ನಗಳ ಖರೀದಿಗಾಗಿ ಮಂಡಿ ವ್ಯವಸ್ಥೆಯನ್ನು ಮುಂದುವರಿಸಲು ಬದ್ಧವಾಗಿದೆ ಎಂದರು.

ನೂತನ ಕೃಷಿ ಕಾಯ್ದೆಗಳು ರೈತರು ಮಂಡಿಗಳ ಹೊರಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿವೆ ಮತ್ತು ರಾಜ್ಯ ಸರಕಾರದ ಅಧಿಸೂಚಿತ ಮಾರುಕಟ್ಟೆ ಸ್ಥಳಗಳಲ್ಲಿರುವಂತೆ ಇಂತಹ ಮಾರಾಟಗಳ ಮೇಲೆ ಯಾವುದೇ ತೆರಿಗೆಯನ್ನು ಪಾವತಿಸಬೇಕಿಲ್ಲ. ಮಂಡಿಗಳಲ್ಲಿ ಮಾಡುವ ಮಾರಾಟಗಳ ಮೇಲೆ ರಾಜ್ಯ ಸರಕಾರಗಳು ವಿಧಿಸುತ್ತಿರುವ ತೆರಿಗೆಯ ವಿರುದ್ಧ ಪ್ರತಿಭಟನೆಯು ನಡೆಯಬೇಕಾಗಿತ್ತು,ಆದರೆ ಇಂತಹ ತೆರಿಗೆಗಳಿಂದ ವ್ಯವಸ್ಥೆಯನ್ನು ಮುಕ್ತಗೊಳಿಸುವದರ ವಿರುದ್ಧ ಪ್ರತಿಭಟನೆ ನಡೆಯುತ್ತಿರುವುದು ವಿಚಿತ್ರವಾಗಿದೆ ಎಂದೂ ತೋಮರ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News