ರಿಕಿ ಪಾಂಟಿಂಗ್ ದಾಖಲೆ ಮುರಿಯುವ ಹಾದಿಯಲ್ಲಿ ವಿರಾಟ್ ಕೊಹ್ಲಿ

Update: 2021-02-05 18:41 GMT

ಹೊಸದಿಲ್ಲಿ,ಫೆ.5: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಈಗ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಿಕಿ ಪಾಂಟಿಂಗ್ ಅವರ ದಾಖಲೆಯೊಂದನ್ನು ಮುರಿಯುವ ಅವಕಾಶ ಒದಗಿಬಂದಿದೆ.

ನಾಯಕನಾಗಿ ಗರಿಷ್ಠ ಅಂತರ್‌ರಾಷ್ಟ್ರೀಯ ಶತಕಗಳನ್ನು(ಟೆಸ್ಟ್, ಏಕದಿನ,ಟ್ವೆಂಟಿ-20)ಗಳಿಸಿ ಹೊಸ ಮೈಲುಗಲ್ಲು ತಲುಪಲು ಕೇವಲ ಒಂದು ಶತಕದ ಅಗತ್ಯವಿದೆ. ಸದ್ಯ ಕೊಹ್ಲಿ ಒಟ್ಟು 41 ಅಂತರ್‌ರಾಷ್ಟ್ರೀಯ ಶತಕಗಳನ್ನು ಗಳಿಸಿದ್ದು, ಆಸ್ಟ್ರೇಲಿಯದ ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್‌ರೊಂದಿಗೆ ಅಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ. ಪಾಂಟಿಂಗ್ ನಾಯಕನಾಗಿ ಒಟ್ಟು 41 ಶತಕಗಳನ್ನು ಸಿಡಿಸಿದ್ದಾರೆ.

ಕೊಹ್ಲಿ ಈ ತನಕ ಒಟ್ಟು 423 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಈ ಪೈಕಿ 188 ಪಂದ್ಯಗಳಲ್ಲಿ ಭಾರತದ ಸಾರಥ್ಯವನ್ನು ವಹಿಸಿದ್ದರು. ಪಾಂಟಿಂಗ್ 41 ಶತಕಗಳನ್ನು ಗಳಿಸಲು 324 ಪಂದ್ಯಗಳಲ್ಲಿ ಆಡಿದ್ದರು. ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ 286 ಪಂದ್ಯಗಳಲ್ಲಿ 33 ಅಂತರ್‌ರಾಷ್ಟ್ರೀಯ ಶತಕಗಳನ್ನು ಗಳಿಸಿ 3ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯದವರಾದ ಸ್ಟೀವನ್ ಸ್ಮಿತ್ ಹಾಗೂ ಮೈಕಲ್ ಕ್ಲಾರ್ಕ್ ಕ್ರಮವಾಗಿ 4ನೇ ಹಾಗೂ 5ನೇ ಸ್ಥಾನದಲ್ಲಿದ್ದಾರೆ. ಸ್ಮಿತ್ ನಾಯಕನಾಗಿ 93 ಪಂದ್ಯಗಳಲ್ಲಿ 20 ಅಂತರ್‌ರಾಷ್ಟ್ರೀಯ ಶತಕಗಳನ್ನು ಗಳಿಸಿದ್ದರೆ, ಕ್ಲಾರ್ಕ್ 139 ಪಂದ್ಯಗಳಲ್ಲಿ 19 ಶತಕಗಳನ್ನು ಗಳಿಸಿದ್ದರು. ವೆಸ್ಟ್‌ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದು, ನಾಯಕನಾಗಿ 172 ಪಂದ್ಯಗಳಲ್ಲಿ ಆಡಿ 19 ಅಂತರ್‌ರಾಷ್ಟ್ರೀಯ ಶತಕಗಳನ್ನು ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News