ಉತ್ತರಾಖಂಡದಲ್ಲಿ ಹಿಮಪಾತದಿಂದ ಭಾರೀ ಮಹಾಪೂರ: 100ಕ್ಕೂ ಅಧಿಕ ಸಾವುಗಳ ಭೀತಿ,10 ಶವಗಳು ಪತ್ತೆ

Update: 2021-02-07 14:34 GMT

ಚಮೋಲಿ,ಫೆ.7: ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಎಂಬಲ್ಲಿ ಬೃಹತ್ ನೀರ್ಗಲ್ಲುಗಳು ರವಿವಾರ ಬೆಳಿಗ್ಗೆ ಕುಸಿದು ಹಿಮಪಾತಕ್ಕೆ ಕಾರಣವಾಗಿದ್ದು,ಇದರಿಂದಾಗಿ ಅಲಕನಂದಾ ಮತ್ತು ಧೌಲಿಗಂಗಾ ನದಿಗಳಲ್ಲಿ ಭಾರೀ ಮಹಾಪೂರ ಉಂಟಾಗಿದೆ. ನೂರಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದು,ಸಾವನ್ನಪ್ಪಿರುವ ಭೀತಿ ವ್ಯಕ್ತವಾಗಿದೆ. ಸಂಜೆಯವರೆಗೆ 10 ಶವಗಳನ್ನು ಪತ್ತೆ ಹಚ್ಚಲಾಗಿದೆ. ನಾಪತ್ತೆಯಾದವರಲ್ಲಿ ವಿದ್ಯುತ್ ಸ್ಥಾವರಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಹೃಷಿಗಂಗಾ ವಿದ್ಯುತ್ ಸ್ಥಾವರ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ 150ಕ್ಕೂ ಅಧಿಕ ಕಾರ್ಮಿಕರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯುತ್ ಯೋಜನೆಯ ಅಧಿಕಾರಿಗಳು ತಿಳಿಸಿರುವುದಾಗಿ ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆಯ ಡಿಐಜಿ ರಿದ್ದಿಮಾ ಅಗರವಾಲ್ ತಿಳಿಸಿದ್ಧಾರೆ. ಮಹಾಪೂರದಿಂದಾಗಿ ಧೌಲಿಗಂಗಾ ನದಿಯಲ್ಲಿ ನೀರು ಸಾಮಾನ್ಯ ಮಟ್ಟಕ್ಕಿಂತ 2ರಿಂದ 3 ಮೀ.ಎತ್ತರದಲ್ಲಿ ಹರಿಯುತ್ತಿದೆ.

ಪೌಡಿ,ತೆಹ್ರಿ,ರುದ್ರಪ್ರಯಾಗ,ಹರಿದ್ವಾರ ಮತ್ತು ಡೆಹ್ರಾಡೂನ್ ಸೇರಿದಂತೆ ಹಲವಾರು ಜಿಲ್ಲೆಗಳನ್ನು ಕಟ್ಟೆಚ್ಚರದಲ್ಲಿರಿಸಲಾಗಿದೆ.

ನದಿಪಾತ್ರಗಳಲ್ಲಿಯ ಸಾವಿರಾರು ಜನರನ್ನು ತೆರವುಗೊಳಿಸಲಾಗಿದ್ದು,ಮಹಾಪೂರದ ರಭಸಕ್ಕೆ ಹಲವಾರು ಮನೆಗಳು ಕೊಚ್ಚಿಹೋಗಿವೆ ಹಾಗೂ ಸಮೀಪದ ಹೃಷಿಗಂಗಾ ಮತ್ತು ಎನ್‌ಪಿಟಿಸಿ ವಿದ್ಯುತ್ ಸ್ಥಾವರಗಳಿಗೆ ಅಪಾರ ಹಾನಿಯನ್ನುಂಟು ಮಾಡಿದೆ. ವಿಪತ್ತು ಪ್ರತಿಕ್ರಿಯಾ ತಂಡಗಳನ್ನು ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ. ಸೇನೆಯ 600 ಯೋಧರು ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ನಿರತರಾಗಿದ್ದು,ಅದರ ಮೂರು ಹೆಲಿಕಾಪ್ಟರ್‌ಗಳು ನಾಪತ್ತೆಯಾದವರಿಗಾಗಿ ವೈಮಾನಿಕ ಸಮೀಕ್ಷೆಗಳಲ್ಲಿ ತೊಡಗಿಕೊಂಡಿದ್ದವು. ಸೇನೆಯು ತನ್ನ ಸಾರಿಗೆ ವಿಮಾನಗಳ ಮೂಲಕ ಎನ್‌ಡಿಆರ್‌ಎಫ್ ಸಿಬ್ಬಂದಿಗಳನ್ನು ಪೀಡಿತ ಸ್ಥಳಗಳಿಗೆ ಸಾಗಿಸುತ್ತಿದೆ. ನೌಕಾಪಡೆಯ ಮುಳುಗುಗಾರರ ಏಳು ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿತ್ತು.

ಭಾರತವು ಉತ್ತರಾಖಂಡದ ಜೊತೆಯಲ್ಲಿದೆ ಮತ್ತು ಪ್ರತಿಯೊಬ್ಬರ ಸುರಕ್ಷತೆಗಾಗಿ ಇಡೀ ದೇಶವೇ ಪ್ರಾರ್ಥಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟಿಸಿದ್ದಾರೆ.

ಸಂಜೆಯವರೆಗೆ 10 ಸಾವುಗಳನ್ನು ದೃಢಪಡಿಸಲಾಗಿದೆ. ಸುಮಾರು 150 ಜನರು ಸಾವನ್ನಪ್ಪಿರುವ ಭೀತಿಯಿದೆ ಎಂದು ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ಓಂ ಪ್ರಕಾಶ ಅವರು ಈ ಮೊದಲು ತಿಳಿಸಿದ್ದರು.

ಎನ್‌ಟಿಪಿಸಿ ಮತ್ತು ಹೃಷಿಗಂಗಾ ವಿದ್ಯುತ್ ಸ್ಥಾವರ ಯೋಜನೆಗಳಲ್ಲಿ ಸುಮಾರು 160 ಜನರು ಕಾರ್ಯನಿರತರಾಗಿದ್ದು,ಅವರ ಪೈಕಿ ಹೆಚ್ಚಿನವರು ನಾಪತ್ತೆಯಾಗಿದ್ದಾರೆ. ತಪೋವನ ಅಣೆಕಟ್ಟಿನ ಸಮೀಪ ನಿರ್ಮಾಣ ಹಂತದಲ್ಲಿರುವ ಸುರಂಗದಲ್ಲಿ ಸಿಕ್ಕಿಹಾಕಿಕೊಂಡಿದ್ದ 16 ಜನರನ್ನು ಐಟಿಬಿಪಿ ತಂಡವು ರಕ್ಷಿಸಿದೆ. ಸಮೀಪದ ಪ್ರದೇಶಗಳಲ್ಲಿಯ ರಸ್ತೆ ಮತ್ತು ರೈಲು ಮಾರ್ಗ ನಿರ್ಮಾಣ ಯೋಜನೆಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರ ಸುರಕ್ಷತೆಯ ಬಗ್ಗೆಯೂ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಪೊಲೀಸ್,ಸೇನೆ,ಐಟಿಬಿಪಿ,ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆಗಳ ತಂಡಗಳು ವಿಕೋಪಕ್ಕೆ ತುತ್ತಾಗಿರುವ ಸ್ಥಳಗಳಲ್ಲಿಯ ಕಾರ್ಮಿಕರ ಜೀವರಕ್ಷಣೆಗಾಗಿ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿವೆ ಎಂದು ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ತಿಳಿಸಿದರು. ಭಾಗೀರಥಿ ನದಿಯ ಹರಿವನ್ನು ಜಿವಿಕೆ ಅಣೆಕಟ್ಟಿನಲ್ಲಿ ತಡೆಹಿಡಿಯಲಾಗಿದೆ ಮತ್ತು ಅಲಕನಂದಾ ನದಿಯಲ್ಲಿ ಹೆಚ್ಚುತ್ತಿರುವ ನೀರಿನ ಸಂಗ್ರಹಕ್ಕಾಗಿ ಹೃಷಿಕೇಶದಲ್ಲಿಯ ವೀರಭದ್ರ ಅಣೆಕಟ್ಟನ್ನು ಖಾಲಿ ಮಾಡಲಾಗಿದೆ ಎಂದರು.

ರಾವತ್ ಜೊತೆ ತಾನು ಮಾತನಾಡಿರುವುದಾಗಿ ಟ್ವೀಟಿಸಿರುವ ಮೋದಿ,ಈ ದುರದೃಷ್ಟಕರ ಸ್ಥಿತಿಯ ಮೇಲೆ ನಿಕಟ ನಿಗಾಯಿರಿಸಿದ್ದೇನೆ. ಇಡೀ ಭಾರತವು ಉತ್ತರಾಖಂಡದ ಜೊತೆಯಲ್ಲಿದೆ ಮತ್ತು ಅಲ್ಲಿಯ ಪ್ರತಿಯೊಬ್ಬರ ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದೆ. ಹಿರಿಯ ಅಧಿಕಾರಿಗಳೊಂದಿಗೆ ನಿರಂತರವಾಗಿ ಮಾತನಾಡುತ್ತಿದ್ದೇನೆ ಹಾಗೂ ಎನ್‌ಡಿಆರ್‌ಎಫ್ ನಿಯೋಜನೆ,ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳ ಬಗ್ಗೆ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.

ರಾವತ್‌ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲ ನೆರವನ್ನು ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

ಪೀಡಿತ ಸ್ಥಳಗಳಿಗೆ ವೈದ್ಯಕೀಯ ತಂಡಗಳನ್ನೂ ರವಾನಿಸಲಾಗಿದ್ದು,ಜೋಶಿಮಠದಲ್ಲಿ 30 ಹಾಸಿಗೆಗಳ ಆಸ್ಪತ್ರೆಯನ್ನು ಸಜ್ಜುಗೊಳಿಸಲಾಗಿದೆ ಹಾಗೂ ಶ್ರೀನಗರ,ಹೃಷಿಕೇಶ,ಜಾಲಿಗ್ರಾಂಟ್ ಮತ್ತು ಡೆಹ್ರಾಡೂನ್‌ಗಳಲ್ಲಿಯ ಆಸ್ಪತ್ರೆಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ಡೆಹ್ರಾಡೂನ್‌ನಿಂದ ಒಂದು ಮತ್ತು ದಿಲ್ಲಿಯಿಂದ ನಾಲ್ಕು ಎನ್‌ಡಿಆರ್‌ಎಫ್ ತಂಡಗಳು ನೆರೆಪೀಡಿತ ಪ್ರದೇಶಗಳನ್ನು ತಲುಪಿವೆ. ಇನ್ನೂ ನಾಲ್ಕು ಎನ್‌ಡಿಆರ್‌ಎಫ್ ತಂಡಗಳನ್ನು ಸಿದ್ಧಗೊಳಿಸಲಾಗುತ್ತಿದ್ದು,ದಿಲ್ಲಿ ಸಮೀಪದ ಹಿಂಡನ್ ವಾಯುಪಡೆ ನೆಲೆಯಿಂದ ನಿರ್ಗಮಿಸಲಿವೆ ಎಂದು ಎನ್‌ಡಿಆರ್‌ಎಫ್ ವಕ್ತಾರರು ತಿಳಿಸಿದರು. ಎರಡು ಐಟಿಬಿಪಿ ಮತ್ತು ನಾಲ್ಕು ಎಸ್‌ಡಿಆರ್‌ಎಫ್ ತಂಡಗಳೂ ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ತೊಡಗಿಕೊಂಡಿವೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದರು.

 ವಿದ್ಯುತ್ ಸ್ಥಾವರದ ಕೆಳಗಿನ ಕಿರಿದಾದ ಕಣಿವೆಯಲ್ಲಿ ನುಗ್ಗುತ್ತಿರುವ ಮಹಾಪೂರದ ನೀರು ರಸ್ತೆಗಳು ಮತ್ತು ಸೇತುವೆಗಳನ್ನು ಧ್ವಂಸಗೊಳಿಸುತ್ತಿರುವ ಭೀಕರ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಳ್ಳಲಾದ ವೀಡಿಯೊಗಳು ತೊರಿಸಿವೆ. ನೆರೆ ನೀರು ಹೃಷಿಕೇಶ ಮತ್ತು ಹರಿದ್ವಾರವನ್ನು ತಲುಪುವುದನ್ನು ತಡೆಯುವ ಪ್ರಯತ್ನವಾಗಿ ಅಧಿಕಾರಿಗಳು ಎರಡು ಅಣೆಕಟ್ಟುಗಳನ್ನು ಖಾಲಿ ಮಾಡಿದ್ದಾರೆ. ಹೃಷಿಕೇಶ ಮತ್ತು ಹರಿದ್ವಾರದಲ್ಲಿ ಜನರು ಗಂಗಾನದಿಯ ದಂಡೆಗಳ ಬಳಿ ಹೋಗುವುದನ್ನು ನಿಷೇಧಿಸಲಾಗಿದೆ.

ಚಮೋಲಿ,ತಪೋವನ ಮತ್ತು ಜೋಶಿಮಠ ಪ್ರದೇಶಗಳಲ್ಲಿ ಸದ್ಯ ಯಾವುದೇ ಪ್ರತಿಕೂಲ ಹವಾಮಾನದ ನಿರೀಕ್ಷೆಯಿಲ್ಲ ಎಂದು ತಿಳಿಸಿದ್ದು, ಇದು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗೆ ನಿರಾಳತೆಯನ್ನು ಒದಗಿಸಿದೆ.

ಕಟ್ಟೆಚ್ಚರದಲ್ಲಿರುವಂತೆ ಮತ್ತು ನದಿ ನೀರಿನ ಮಟ್ಟಗಳ ಮೇಲೆ ನಿರಂತರ ನಿಗಾಯಿರಿಸುವಂತೆ ಉತ್ತರಾಖಂಡ ಸರಕಾರವು ಗಂಗಾ ನದಿಯ ದಂಡೆಗಳಲ್ಲಿರುವ ಎಲ್ಲ ಜಿಲ್ಲೆಗಳ ಅಧಿಕಾರಿಗಳಿಗೆ ನಿರ್ದೇಶ ನೀಡಿದೆ. ದಿಲ್ಲಿ,ಪ.ಬಂಗಾಳ ಸೇರಿದಂತೆ ದೇಶಾದ್ಯಂತದ ಮುಖ್ಯಮಂತ್ರಿಗಳಿಂದ ಉತ್ತರಾಖಂಡ ಸರಕಾರಕ್ಕೆ ಬೆಂಬಲ ಮತ್ತು ಸಂತಾಪಗಳ ಸಂದೇಶಗಳು ಹರಿದುಬರುತ್ತಿವೆ.

2013 ಜನವರಿಯಲ್ಲಿ ಬಹುದಿನಗಳ ಮೇಘಸ್ಫೋಟದಿಂದಾಗಿ ಉತ್ತರಾಖಂಡದ ಕೇದಾರನಾಥದಲ್ಲಿ ಭಾರೀ ಮಹಾಪೂರ ಮತ್ತು ಭೂಸಿತಗಳು ಉಂಟಾಗಿದ್ದವು. ಸುಮಾರು 6,000 ಜನರು ಸಾವನ್ನಪ್ಪಿದ್ದು,ಇದು 2004ರ ಸುನಾಮಿ ನಂತರ ದೇಶದ ಅತ್ಯಂತ ವಿನಾಶಕರ ಪ್ರಕೃತಿ ವಿಕೋಪಗಳಲ್ಲೊಂದಾಗಿತ್ತು. ನೆರೆಯಿಂದಾಗಿ ಸಮುದ್ರ ಮಟ್ಟದಿಂದ 3,581 ಮೀ.ಎತ್ತರದಲ್ಲಿರುವ ಪ್ರಸಿದ್ಧ ಕೇದಾರನಾಥ ದೇವಸ್ಥಾನವು ಹಾನಿಗೀಡಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News