ನ್ಯೂಯಾರ್ಕ್ ಅಸೆಂಬ್ಲಿಯಲ್ಲಿ ‘ಕಾಶ್ಮೀರ ಅಮೆರಿಕನ್ ದಿನ’ದ ಕುರಿತು ನಿರ್ಣಯ : ಅಸಮಾಧಾನ ವ್ಯಕ್ತಪಡಿಸಿದ ಭಾರತ

Update: 2021-02-07 15:56 GMT

 ನೂಯಾರ್ಕ್,ಫೆ.: ವಿವಾದಾತ್ಮಕ ನಡೆಯೊಂದರಲ್ಲಿ ನ್ಯಾಯಾರ್ಕ್ ರಾಜ್ಯದ ಶಾಸನಸಭೆಯು ಫೆಬ್ರವರಿ 5 ಅನ್ನು ಕಾಶ್ಮೀರ ಅಮೆರಿಕನ್ ದಿನವಾಗಿ ಘೋಷಿಸ ಬೇಕೆಂದು ಗವರ್ನರ್ ಆ್ಯಂಡ್ರೂ ಕ್ಯೂಮೊ ಅವರಿಗೆ ಕರೆ ನೀಡುವ ನಿರ್ಣಯವನ್ನು ಮಂಗಳವಾರ ಅಂಗೀಕರಿಸಿರುವುದಕ್ಕೆ ಭಾರತ ಆತಂಕ ವ್ಯಕ್ತಪಡಿಸಿದೆ.

  ನ್ಯೂಯಾರ್ಕ್‌ಶಾಸನ ಸಭೆಯ ಈ ನಿರ್ಣಯಕ್ಕೆ ಭಾರತವು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಜನರನ್ನು ವಿಭಜಿಸುವುದಕ್ಕಾಗಿ ಜಮ್ಮುಕಾಶ್ಮೀರದ ಶ್ರೀಮಂತ ಸಂಸ್ಕೃತಿಯನ್ನು ಹಾಗೂ ಸಾಮಾಜಿಕ ಸಂರಚನೆಯನ್ನು ತಪ್ಪಾಗಿ ಬಿಂಬಿಸಲು, ಸ್ಥಾಪಿತ ಹಿತಾಸಕ್ತಿಗಳು ನಡೆಸುತ್ತಿರುವ ಆತಂಕಕಾರಿ ಪ್ರಯತ್ನಗಳನ್ನು ಗಮನಿಸಿರುವುದಾಗಿ ಹೇಳಿದೆ.

ನ್ಯೂಯಾರ್ಕ್ ಅಸೆಂಬ್ಲಿಯ ಸದಸ್ಯ ನಾದೆರ್ ಸಾಯೆಗ್ ಹಾಗೂ ಇತರ 12 ಮಂದಿ ಕಾನೂನುನಿರೂಪಕರು ಪ್ರಾಯೋಜಿಸಿದ ನಿರ್ಣಯವು ‘‘ ಕಾಶ್ಮೀರಿ ಸಮು ದಾಯವು ಪ್ರತಿಕೂಲತೆಯನ್ನು ಜಯಿಸಿದ್ದು, ಪರಿಶ್ರಮವನ್ನು ಪ್ರದರ್ಶಿಸಿದೆ ಹಾಗೂ ನ್ಯೂಯಾರ್ಕ್ನ ವಲಸಿಗ ಸಮುದಾಯಗಳ ಆಧಾರಸ್ತಂಭಗಳಲ್ಲೊಂದಾಗಿ ತನ್ನನ್ನು ಸ್ಥಾಪಿಸಿಕೊಂಡಿದೆ’’ ಎಂದು ಹೇಳಿತ್ತು.

     ‘‘ಎಲ್ಲಾ ಕಾಶ್ಮೀರಿ ಜನತೆಗೆ ಧಾರ್ಮಿಕ ಸ್ವಾತಂತ್ರ್ಯ, ಹೋರಾಟದ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಸೇರಿದಂತೆ ನ್ಯೂಯಾರ್ಕ್ ರಾಜ್ಯವು ಅಮೆರಿಕದ ಸಂವಿಧಾನದಲ್ಲಿ ಅಡಕವಾಗಿರುವ ಮಾನವಹಕ್ಕುಗಳ ಪ್ರತಿಪಾದಕನಾಗಿದೆ. ವೈವಿಧ್ಯಮಯ ಸಾಂಸ್ಕೃತಿಕ,ಜನಾಂಗೀಯ ಹಾಗೂ ಧಾರ್ಮಿಕ ಅಸ್ಮಿತೆಗಳಿಗೆ ಅದು ಮಾನ್ಯತೆ ನೀಡುತ್ತದೆ’’ಎಂದು ನಿರ್ಣಯವು ತಿಳಿಸಿತ್ತು.

  ನ್ಯೂಯಾರ್ಕ್ ಅಸೆಂಬ್ಲಿಯ ನಿರ್ಣಯದ ಬಗ್ಗೆ ಪ್ರತಿಕ್ರಿಯಿಸಿರುವ ವಾಶಿಂಗ್ಟನ್‌ನಲ್ಲಿನ ಭಾರತೀಯ ರಾಯಭಾರಿ ಕಚೇರಿಯು, ‘‘ ಕಾಶ್ಮೀರಿ ಅಮೆರಿಕನ್ ದಿನಾಚರಣೆಗೆ ಸಂಬಂಧಿಸಿ ನ್ಯೂಯಾರ್ಕ್ ಅಸೆಂಬ್ಲಿಯು ಅಂಗೀಕರಿಸಿರುವ ನಿರ್ಣಯವನ್ನು ನಾವು ನೋಡಿದ್ದೇವೆ. ಅಮೆರಿಕದ ಹಾಗೆ ಭಾರತ ಕೂಡಾ ಸ್ಪಂದನಾಶೀಲ ಪ್ರಜಾಪ್ರಭುತ್ವ ದೇಶವಾಗಿದ್ದು, ಬಹುತ್ವವಾದಿ ಸಂಪ್ರದಾಯವನ್ನು ಹೊಂದಿರುವುದು ಹೆಮ್ಮೆಯ ವಿಚಾರವಾಗಿದೆ’’ ಎಂದರು.

 ಭಾರತದ ಅವಿಭಾಜ್ಯ ಹಾಗೂ ಪ್ರತ್ಯೇಕಿಸಲಾಗದ ಜಮ್ಮುಕಾಶ್ಮೀರ ಸೇರಿದಂತೆ ಭಾರತವು ವೈವಿಧ್ಯಮಯ ಹಾಗೂ ಶ್ರೀಮಂತ ಸಾಂಸ್ಕೃತಿಕ ಸಂರಚನೆಯನ್ನು ಹೊಂದಿದೆ. ಆದರೆ ಜಮ್ಮುಕಾಶ್ಮೀರದ ಶ್ರೀಮಂತ ಸಂಸ್ಕೃತಿ ಹಾಗೂ ಸಾಮಾಜಿಕ ಸಂರಚನೆಯನ್ನು ತಪ್ಪಾಗಿ ಬಿಂಬಿಸಲು ಕೆಲವು ಸ್ಥಾಪಿತ ಹಿತಾಸಕ್ತಿಗಳು ನಡೆಸುತ್ತಿರುವ ಪ್ರಯತ್ನವನ್ನು ನಾವು ಗಮನಿಸಿದ್ದೇವೆ’’ ಎಂದವರು ಹೇಳಿದರು.

  ಫೆಬ್ರವರಿ 3ರಂದು ನ್ಯೂಯಾರ್ಕ್ ರಾಜ್ಯ ಅಸೆಂಬ್ಲಿಯು 2021ರ ಫೆಬ್ರವರಿ 5ನ್ನು ಕಾಶ್ಮೀರಿ ಅಮೆರಿಕನ್ ದಿನವಾಗಿ ಘೋಷಿಸಬೇಕೆಂಬ ನಿರ್ಣಯವನ್ನು ಅಂಗೀಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News