ನ್ಯೂಯಾರ್ಕ್ : ಫುಟ್‌ಬಾಲ್ ಟೂರ್ನಿಯಲ್ಲೂ ರೈತ ಪ್ರತಿಭಟನೆ ಬೆಂಬಲಿಸುವ ಜಾಹೀರಾತು !

Update: 2021-02-09 06:53 GMT

ನ್ಯೂಯಾರ್ಕ್: ಅಮೆರಿಕದ ಅತ್ಯಂತ ಜನಪ್ರಿಯ ’ಸೂಪರ್ ಬೌಲ್’ ವಾರ್ಷಿಕ ಫುಟ್‌ಬಾಲ್ ಟೂರ್ನಿಯ ವೇಳೆ, ಭಾರತದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯನ್ನು ಬೆಂಬಲಿಸುವ 40 ಸೆಕೆಂಡ್‌ಗಳ ಜಾಹೀರಾತು ಪ್ರದರ್ಶಿಸಲಾಗಿದೆ.

ಕ್ಯಾಲಿಫೋರ್ನಿಯಾದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಪ್ರದರ್ಶನಗೊಂಡಿರುವ ಈ ಜಾಹೀರಾತು ನಾಗರಿಕ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ (ಜ್ಯೂನಿಯರ್) ಅವರ "ಅನ್ಯಾಯ ಎಲ್ಲೇ ನಡೆದರೂ ಅದು ಎಲ್ಲೆಡೆ ನ್ಯಾಯಕ್ಕೆ ಅಪಾಯ" ಎಂಬ ಹೇಳಿಕೆಯೊಂದಿಗೆ ಆರಂಭವಾಗುತ್ತದೆ.

ಇದರ ಜತೆಗೆ ಫ್ರೆಸ್ನೊ ನಗರದ ಮೇಯರ್ ಜೆರ್ರಿ ಡೈಯರ್ "ಭಾರತದಲ್ಲಿನ ನಮ್ಮ ಸಹೋದರ ಸಹೋದರಿಯರ ಜತೆ ನಾವು ಅಚಲವಾಗಿ ನಿಂತಿದ್ದೇವೆ ಎನ್ನುವುದನ್ನು ನೀವು ತಿಳಿಯಬೇಕು ಎನ್ನುವುದು ನಮ್ಮ ಅಪೇಕ್ಷೆ" ಎಂದು ಹೇಳುತ್ತಿರುವುದೂ ಜಾಹೀರಾತಿನಲ್ಲಿದೆ.

ಈ ಜಾಹೀರಾತನ್ನು ಫ್ರೆಸ್ನೊ ಕೌಂಟಿಯಲ್ಲಿ ಮಾತ್ರ ಪ್ರಸಾರ ಮಾಡಲಾಗಿದೆ. ಆದರೆ ಟ್ವಿಟ್ಟರ್‌ನಲ್ಲಿ ಹಲವು ಮಂದಿ ಬಳಕೆದಾರರು ಇದನ್ನು ಟ್ವೀಟ್ ಮಾಡಿದ್ದಾರೆ. ಗಾಯಕಿ ರಿಹಾನಾ ಈಗಾಗಲೇ ಭಾರತೀಯ ರೈತರ ಪ್ರತಿಭಟನೆ ಬಗ್ಗೆ ಟ್ವೀಟ್ ಮಾಡಿದ್ದಾರೆ ಎನ್ನುವುದನ್ನೂ ಇದು ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News