"ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದಾಗ ಅಡ್ವಾಣಿ, ವಾಜಪೇಯಿ ಸಹಿತ ಎಲ್ಲರೂ ಆಂದೋಲನ ಜೀವಿಗಳಾಗಿದ್ದರು"

Update: 2021-02-09 09:35 GMT

ಹೊಸದಿಲ್ಲಿ: ಕೇಂದ್ರ ಸರಕಾರದ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಸಹಿತ ಎಲ್ಲರನ್ನೂ ಪ್ರಧಾನಿ ನರೇಂದ್ರ ಮೋದಿ ʼಆಂದೋಲನ್‌ ಜೀವಿʼಗಳು ಎಂದು ಕರೆದಿದ್ದರು. ಈ ಕುರಿತಾದಂತೆ ಇದೀಗ ಸಾಮಾಜಿಕ ತಾಣದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. "ಹೊಸದೊಂದು ಜಮಾತ್‌ ಉದ್ಭವವಾಗಿದೆ. ಅದು ಆಂದೋಲನ ಜೀವಿಗಳು. ವಕೀಲರ ಕೋಲಾಹಲವಿದ್ದರೆ ಅವರು ಅಲ್ಲಿ ಪ್ರತ್ಯಕ್ಷರಾಗುತ್ತಾರೆ. ವಿದ್ಯಾರ್ಥಿಗಳದ್ದಾದರೆ ಅಲ್ಲೂ ಇರುತ್ತಾರೆ. ಕೆಲವೊಮ್ಮೆ ಪರದೆಯ ಹಿಂದೆ, ಕೆಲವೊಮ್ಮೆ ಮುಂದೆ. ನಾವು ಅಂತಹವರನ್ನು ಪತ್ತೆಹಚ್ಚಬೇಕಾಗಿದೆ ಎಂದು ಹೇಳಿಕೆ ನೀಡಿದ್ದರು.

ಈ ಕುರಿತಾದಂತೆ ಸಾಮಾಜಿಕ ತಾಣದಾದ್ಯಂತ ವ್ಯಂಗ್ಯ ಮಿಶ್ರಿತ ಆಕ್ರೋಶ ವ್ಯಕ್ತವಾಗಿದೆ. ಹಲವಾರು ಮಂದಿ ಬಳಕೆದಾರರು ತಮ್ಮ ಖಾತೆಯಲ್ಲಿ ಆಂದೋಲನ್‌ ಜೀವಿ ಎಂದು ನಮೂದಿಸಲು ಪ್ರಾರಂಭಿಸಿದ್ದಾರೆ. "ಇಂದಿರಾ ಗಾಂಧಿಯು ತುರ್ತು ಪರಿಸ್ಥಿತಿಯನ್ನು ಹೇರಿದ ಸಂದರ್ಭ ವಾಜಪೇಯಿ, ಅಡ್ವಾಣಿ, ಜಾರ್ಜ್‌ ಫೆರ್ನಾಂಡೀಸ್‌ ಸೇರಿದಂತೆ ಹಲವರು ಆಂದೋಲನ ಜೀವಿಗಳಾಗಿದ್ದು ನಾವು ನೋಡಿದ್ದೇವೆ. ಸ್ವಾತಂತ್ರ್ಯ ಸಿಗುವುದಕ್ಕೆ ಮುಂಚೆ ಗಾಂಧಿ, ಅಂಬೇಡ್ಕರ್‌, ಲೋಹಿಯಾ ಕೂಡಾ ಆಂದೋಲನ ಜೀವಿಗಳಾಗಿದ್ದಂತೆ" ಎಂದು ಪತ್ರಕರ್ತ ಮಾಧವನ್‌ ನಾರಾಯಣನ್‌ ಟ್ವೀಟ್‌ ಮಾಡಿದ್ದಾರೆ.

"ಆಂದೋಲನ ಜೀವಿಗಳು ಎನ್ನುವುದು ಹೆಮ್ಮೆಯ ಸಂಕೇತ" ಎಂದು ಇನ್ನೋರ್ವ ಬಳಕೆದಾರರು ಟ್ವೀಟ್‌ ಮಾಡಿದ್ದರೆ, ನರೇಂದ್ರ ಮೋದಿ ಸತ್ಯಾಗ್ರಹದಲ್ಲಿ ನಿರತರಾಗಿದ್ದ ಚಿತ್ರ ಎನ್ನಲಾದ ಫೋಟೊವೊಂದನ್ನು ಟ್ವೀಟ್‌ ಮಾಡಿ ಇದು ಕೂಡಾ ಆಂದೋಲನ್‌ ಜೀವಿಯಡಿಗೆ ಬರುತ್ತದೆಯೇ ಎಂದು ಬಳಕೆದಾರರು ಕಿಚಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News