ಮ್ಯಾನ್ಮಾರ್: ಪ್ರತಿಭಟನಕಾರರ ವಿರುದ್ಧ ಗಾಳಿಯಲ್ಲಿ ಗುಂಡು

Update: 2021-02-09 14:55 GMT

ಯಾಂಗನ್ (ಮ್ಯಾನ್ಮಾರ್), ಫೆ. 9: ಮ್ಯಾನ್ಮಾರ್ ರಾಜಧಾನಿ ನೇಪಿಡಾವ್‌ನಲ್ಲಿ ಸೇನಾಡಳಿತದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಜನರನ್ನು ಚದುರಿಸಲು ಪೊಲೀಸರು ಮಂಗಳವಾರ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪ್ರತಿಭಟನೆಗಳನ್ನು ಸೇನಾ ಸರಕಾರ ನಿಷೇಧಿಸಿದ ಹೊರತಾಗಿಯೂ, ಕಳೆದ ವಾರದ ಸೇನಾ ಕ್ಷಿಪ್ರಕ್ರಾಂತಿಯನ್ನು ವಿರೋಧಿಸಿ ಜನರು ದೇಶಾದ್ಯಂತ ಪ್ರತಿಭಟನೆಗಳನ್ನು ನಡೆಸಿದ್ದಾರೆ.

ಪೊಲೀಸರು ಮೊದಲು ಜಲಫಿರಂಗಿ ಧಾರೆಯನ್ನು ಬಳಸಿ ಪ್ರತಿಭಟನಕಾರರನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಆಗ ಪ್ರತಿಭಟನಕಾರರು ಅವರ ವಿರುದ್ಧ ವಸ್ತುಗಳನ್ನು ಎಸೆದರು. ದೂರದಲ್ಲಿ ಗುಂಡು ಹಾರಾಟದ ಸದ್ದು ಕೇಳುತ್ತಿರುವಂತೆಯೇ, ಜನರು ಓಡುತ್ತಿರುವುದನ್ನು ತೋರಿಸುವ ವೀಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

‘‘ಅವರು ಎರಡು ಬಾರಿ ಗಾಳಿಯಲ್ಲಿ ಎಚ್ಚರಿಕೆ ಗುಂಡುಗಳನ್ನು ಸಿಡಿಸಿದರು. ಬಳಿಕ, ಪ್ರತಿಭಟನಕಾರರತ್ತ ರಬ್ಬರ್ ಗುಂಡುಗಳನ್ನು ಹಾರಿಸಿದರು’’ ಎಂದು ಸ್ಥಳೀಯರೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದರು. ಕೆಲವರು ಗಾಯಗೊಂಡಿರುವುದನ್ನು ನಾನು ನೋಡಿದೆ ಎಂದು ಅವರು ಹೇಳಿದ್ದಾರೆ.

ಜನರು ಐದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಒಟ್ಟು ಸೇರುವುದನ್ನು ಸೇನಾಡಳಿತ ನಿಷೇಧಿಸಿದೆ ಹಾಗೂ ಬೃಹತ್ ಮೆರವಣಿಗೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಬೆದರಿಕೆಯನ್ನು ಕ್ಷಿಪ್ರಕ್ರಾಂತಿಯ ನಾಯಕ ಸೀನಿಯರ್ ಜನರಲ್ ಮಿನ್ ಆಂಗ್ ಹಲೈಂಗ್ ಒಡ್ಡಿದ್ದಾರೆ.

 ಆದರೆ, ಸೇನಾಡಳಿತ ಆದೇಶವನ್ನು ಧಿಕ್ಕರಿಸಿ ಸತತ ನಾಲ್ಕನೇ ದಿನವಾದ ಮಂಗಳವಾರವೂ ಪ್ರತಿಭಟನಕಾರರು ಪ್ರತಿಭಟನೆ ನಡೆಸಿದರು.

ಸೇನಾ, ರಾಜಕೀಯ ಸಂಪರ್ಕ ಸ್ಥಗಿತ: ನ್ಯೂಝಿಲ್ಯಾಂಡ್

 ಮ್ಯಾನ್ಮಾರ್ ಜೊತೆಗಿನ ಉನ್ನತ ಮಟ್ಟದ ಸೇನಾ ಮತ್ತು ರಾಜಕೀಯ ಸಂಪರ್ಕಗಳನ್ನು ಅಮಾನತಿನಲ್ಲಿಡುವುದಾಗಿ ನ್ಯೂಝಿಲ್ಯಾಂಡ್ ಮಂಗಳವಾರ ಘೋಷಿಸಿದೆ. ಇದು ಆ ದೇಶದ ಸೇನಾಡಳಿತದ ವಿರುದ್ಧ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತವಾದ ಮೊದಲ ಪ್ರಮುಖ ಪ್ರತಿಕ್ರಿಯೆಯಾಗಿದೆ.

ನ್ಯೂಝಿಲ್ಯಾಂಡ್‌ನ ನಿರ್ಧಾರವನ್ನು ಘೋಷಿಸಿದ ಪ್ರಧಾನಿ ಜಸಿಂಡಾ ಆರ್ಡರ್ನ್, ‘‘ನಾವು ಮ್ಯಾನ್ಮಾರ್‌ನಲ್ಲಿ ಏನು ನಡೆಯುತ್ತಿರುವುದನ್ನು ನೋಡುತ್ತಿದ್ದೇವೆಯೋ ಅದನ್ನು ಬಲವಾಗಿ ಖಂಡಿಸಬೇಕೆಂದು’’ ಅಂತರ್‌ರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದರು.

ಮ್ಯಾನ್ಮಾರ್ ಜನರೊಂದಿಗೆ ನಿಲ್ಲುತ್ತೇವೆ: ಅವೆುರಿಕ

 ಅಮೆರಿಕವು ಸೋಮವಾರ ಮ್ಯಾನ್ಮಾರ್ ದೇಶದ ಜನರಿಗೆ ತನ್ನ ಬೆಂಬಲವನ್ನು ಘೋಷಿಸಿದೆ. ಮ್ಯಾನ್ಮಾರ್‌ನ ಸೇನಾ ಸರಕಾರವು ಪ್ರತಿಭಟನೆಗಳಿಗೆ ನಿರ್ಬಂಧಗಳನ್ನು ಹೇರಿದ ಬಳಿಕ ಅಮೆರಿಕ ಈ ಘೋಷಣೆಯನ್ನು ಮಾಡಿದೆ. ಅದೇ ವೇಳೆ, ಪದಚ್ಯುತ ನಾಗರಿಕ ಸರಕಾರದ ನಾಯಕಿ ಆಂಗ್ ಸಾನ್ ಸೂ ಕಿಯನ್ನು ಭೇಟಿ ಮಾಡಲು ಅವಕಾಶ ಕೋರುವ ತನ್ನ ಮನವಿಗಳನ್ನು ಸೇನಾ ಸರಕಾರ ತಿರಸ್ಕರಿಸಿದೆ ಎಂದು ಅದು ಹೇಳಿದೆ.

‘‘ನಾವು ಬರ್ಮಾ (ಮ್ಯಾನ್ಮಾರ್‌ನ ಮೊದಲಿನ ಹೆಸರು) ದೇಶದ ಜನರೊಂದಿಗೆ ನಿಲ್ಲುತ್ತೇವೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರಕಾರದ ಪರವಾಗಿ ಶಾಂತಿಯುತವಾಗಿ ಪ್ರತಿಭಟಿಸುವುದು ಸೇರಿದಂತೆ ಶಾಂತಿಯುತ ಸಭೆ ನಡೆಸುವ ಹಕ್ಕನ್ನು ನಾವು ಬೆಂಬಲಿಸುತ್ತೇವೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಹೇಳಿದರು.

ಶಾಂತಿ ಸಮಿತಿಯಲ್ಲಿ ಪಾಲ್ಗೊಳ್ಳಲು ರಾಜಕೀಯ ಪಕ್ಷಗಳ ನಿರಾಕರಣೆ

 ಮ್ಯಾನ್ಮಾರ್‌ನಲ್ಲಿ ಸೇನಾ ಕ್ಷಿಪ್ರಕ್ರಾಂತಿ ನಡೆದ ವಾರದ ಬಳಿಕ, ತಾನು ರಚಿಸಿದ ಶಾಂತಿ ಮಾತುಕತೆ ಸಮಿತಿಯಲ್ಲಿ ಭಾಗವಹಿಸುವಂತೆ ಸೇನಾಡಳಿತವು ಚುನಾಯಿತ ಸರಕಾರವನ್ನು ಆಹ್ವಾನಿಸಿದೆ. ಆದರೆ, ಸೇನೆಯ ಆಹ್ವಾನವನ್ನು ದೇಶದ ರಾಜಕೀಯ ಪಕ್ಷಗಳು ತಿರಸ್ಕರಿಸಿವೆ.

ಸೀನಿಯರ್ ಜನರಲ್ ಮಿನ್ ಆಂಗ್ ಹಲೈಂಗ್ ನೇತೃತ್ವದ ಸರಕಾರಿ ಆಡಳಿತ ಮಂಡಳಿಯಲ್ಲಿ ಯಾವುದೇ ಪಾತ್ರಗಳನ್ನು ವಹಿಸಲು ದೇಶದ ಪ್ರಧಾನವಾಹಿನಿಯ ಮತ್ತು ಬುಡಕಟ್ಟು ಜನರ ರಾಜಕೀಯ ಪಕ್ಷಗಳು ನಿರಾಕರಿಸಿವೆ.

ಭವಿಷ್ಯದ ಶಾಂತಿ ಮಾತುಕತೆಗಳು ಸೇನೆ ರಚಿಸಿರುವ ಶಾಂತಿ ಸಮಿತಿಯೊಂದಿಗೆ ಮಾತ್ರ ನಡೆಯುತ್ತವೆ ಎಂಬುದಾಗಿ ಸೇನೆಯು ಬುಡಕಟ್ಟು ಸಶಸ್ತ್ರ ಬಂಡುಕೋರರಿಗೆ ತಿಳಿಸಿದೆ ಎಂದು ‘ಮ್ಯಾನ್ಮಾರ್ ಟೈಮ್ಸ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News