ಅತಿಯಾದ ರಾಷ್ಟ್ರವಾದ ಭಾರತವನ್ನು ಅಸಹಿಷ್ಣುವಾಗಿಸುತ್ತಿದೆ, ಮುಸ್ಲಿಮರನ್ನು ಅಭದ್ರತೆ ಕಾಡತೊಡಗಿದೆ: ಹಾಮಿದ್ ಅನ್ಸಾರಿ

Update: 2021-02-10 10:33 GMT

ಹೊಸದಿಲ್ಲಿ, ಫೆ.10: ಭಾರತದ ಮಾಜಿ ರಾಷ್ಟ್ರಪತಿ ಹಾಮಿದ್ ಅನ್ಸಾರಿ ಅವರು ಸುದ್ದಿ ಜಾಲತಾಣ ‘ದಿ ವೈರ್’ಗೆ ನೀಡಿರುವ ಬಿಚ್ಚುಮನಸ್ಸಿನ ಮತ್ತು ನಿರ್ಭಿಡೆಯ ಸಂದರ್ಶನವೊಂದರಲ್ಲಿ,ಸಾಂಸ್ಕೃತಿಕ ಬದ್ಧತೆಗಳನ್ನು ಪ್ರಧಾನವಾಗಿರಿಸಿಕೊಂಡಿರುವ ಮತ್ತು ಅಸಹಿಷ್ಣುತೆ ಹಾಗೂ ಉನ್ಮತ್ತ ದೇಶಪ್ರೇಮವನ್ನು ಉತ್ತೇಜಿಸುವ ರಾಷ್ಟ್ರವಾದದ ಹೊಸ ರೂಪವು ಈ ದೇಶದ ರಾಜಕೀಯ ಮತ್ತು ಸಾಂಸ್ಕೃತಿಕ ಸ್ವರೂಪವನ್ನು ಆಕ್ರಮಿಸಿಕೊಳ್ಳುವ ಪ್ರವೃತ್ತಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.

ರಾಷ್ಟ್ರವಾದದ ಈ ರೂಪವನ್ನು ‘ಅತಿಯಾದ ರಾಷ್ಟ್ರವಾದ’ ಮತ್ತು ‘ಕಠೋರ ರಾಷ್ಟ್ರವಾದ ’ಎಂದು ಬಣ್ಣಿಸಿದ ಅನ್ಸಾರಿ,ಅದು ಭಿನ್ನಾಭಿಪ್ರಾಯದ ಧ್ವನಿಗಳಿಗೆ ಬೆದರಿಕೆಯನ್ನೊಡ್ಡುತ್ತಿದೆ ಮತ್ತು ವಿಶ್ವದಲ್ಲಿ ದೇಶದ ಸ್ಥಾನದ ಬಗ್ಗೆ ಕಳವಳಗೊಳ್ಳುವಂತೆ ಮಾಡುತ್ತಿದೆ. ಅದು ಭಾರತವನ್ನು ಅಸಹಿಷ್ಣು,ದುರಹಂಕಾರಿ ಮತ್ತು ಅಭದ್ರವನ್ನಾಗಿಯೂ ಮಾಡುತ್ತಿದೆ ಎಂದು ಆತಂಕವನ್ನು ವ್ಯಕ್ತಪಡಿಸಿದರು.

ನಮ್ಮ ದೇಶವನ್ನು ರೂಪಿಸಿರುವ, ವಿಭಿನ್ನ ಜನ ಸಮುದಾಯಗಳನ್ನು,ಸಂಸ್ಕೃತಿಗಳನ್ನು,ಧರ್ಮಗಳನ್ನು ಮತ್ತು ಜನಾಂಗೀಯತೆಗಳನ್ನು ಒಗ್ಗೂಡಿಸಿರುವ ಭ್ರಾತೃತ್ವವನ್ನು ಈ ಅತಿಯಾದ ರಾಷ್ಟ್ರವಾದವು ಕಡೆಗಣಿಸಿದೆ ಎಂದು ಅವರು ಹೇಳಿದರು.

2019ರ ಸಾರ್ವತ್ರಿಕ ಚುನಾವಣೆಗಳ ಫಲಿತಾಂಶವು ನಿರಂಕುಶವಾದ,ರಾಷ್ಟ್ರವಾದ ಮತ್ತು ಬಹುಸಂಖ್ಯಾತವಾದಗಳ ನೆರವಿನೊಂದಿಗೆ ಜನಪ್ರಿಯತೆಯ ಯಶಸ್ಸನ್ನು ಪ್ರತಿನಿಧಿಸಿದೆ ಎಂದಿರುವ ಅನ್ಸಾರಿ,ಭಾರತದ ಪಾಲಿಗೆ ನಿಜವಾದ ತಿರುವು ನೀಡಿರುವುದು 2019 ಆಗಿದೆಯೇ ಹೊರತು 2014 ಅಲ್ಲ. ಈ ಸಾಂಸ್ಕ್ರತಿಕ ರಾಷ್ಟ್ರವಾದವು 1947ರಲ್ಲಿ ದೇಶಕ್ಕೆ ಸ್ವಾತಂತ್ರವನ್ನು ತಂದುಕೊಟ್ಟಿದ್ದ ಭಾರತದ ಸ್ಥಾಪಕರ ಸಾಮಾಜಿಕ ರಾಷ್ಟ್ರವಾದಕ್ಕಿಂತ ತುಂಬ ಭಿನ್ನವಾಗಿದೆ. ಇದು ವಿಭಿನ್ನ ಮೌಲ್ಯಗಳು ಮತ್ತು ನೀತಿಗಳಿಂದ ಕೂಡಿರುವ,ರಾಷ್ಟ್ರವಾದದ ಸಂಪೂರ್ಣ ವಿಭಿನ್ನ ರೂಪವಾಗಿದೆ ಎಂದರು.

ದೇಶದ ಬಹು ಮುಖ್ಯ ಮೌಲ್ಯಗಳ ಧ್ವಂಸವು ಈ ಅತಿಯಾದ ರಾಷ್ಟ್ರವಾದದ ಪರಿಣಾಮಗಳಲ್ಲೊಂದಾಗಿದೆ ಎಂದ ಅನ್ಸಾರಿ,ಅಂದರೆ ನಮ್ಮ ಸಂವಿಧಾನದ ತತ್ತ್ವಗಳು ಮತ್ತು ಮೌಲ್ಯಗಳಿಗೆ ನಮ್ಮ ಬದ್ಧತೆಯು ದುರ್ಬಲಗೊಳ್ಳುತ್ತಿದೆ ಮತ್ತು ಕಡಿಮೆಯಾಗುತ್ತಿದೆ ಎಂದು ಹೇಳಿದರು.

ದೇಶದ ಜಾತ್ಯತೀತವಾದವು ತನ್ನ ಸ್ವರೂಪವನ್ನು ಕಳೆದುಕೊಳ್ಳುತ್ತಿರುವುದು ಮುಖ್ಯ ಮೌಲ್ಯಗಳು ಧ್ವಂಸಗೊಳ್ಳುತ್ತಿರುವುದರಿಂದಾಗಿ ಉಂಟಾಗಿರುವ ಪರಿಣಾಮಗಳಲ್ಲೊಂದಾಗಿದೆ. ಜಾತ್ಯತೀತತೆಯು ಇಂದು ಸರಕಾರದ ಅಧಿಕೃತ ಶಬ್ದಭಂಡಾರದಿಂದ ಹೆಚ್ಚುಕಡಿಮೆ ಮಾಯವಾಗಿಬಿಟ್ಟಿದೆ. ಅದರ ಜಾಗದಲ್ಲಿ ರಾಜಕೀಯ-ಸೈದ್ಧಾಂತಿಕತೆ,ಧಾರ್ಮಿಕ ಬಹುಸಂಖ್ಯಾತ ವಾದವು ಮನ್ನಣೆ ಪಡೆದುಕೊಂಡಿದೆ ಎಂದ ಅನ್ಸಾರಿ,ಅದು ಸಂವಿಧಾನದ ಮೂಲಸ್ವರೂಪವನ್ನು ಕಡೆಗಣಿಸುತ್ತಿರುವುದು ಮಾತ್ರವಲ್ಲ,ಈ ಜಾತ್ಯತೀತ ದೇಶವನ್ನು ಹಿಂದು ರಾಷ್ಟ್ರವನ್ನಾಗಿಸುವತ್ತ ಒತ್ತು ನೀಡುತ್ತಿದೆ ಎಂದರು.

ಈ ಸಾಂಸ್ಕೃತಿಕ ಅತಿ ರಾಷ್ಟ್ರವಾದದ ಇನ್ನೊಂದು ಪರಿಣಾಮವಾಗಿ ಕಾನೂನಿನ ಆಡಳಿತಕ್ಕೆ ನಮ್ಮ ಬದ್ಧತೆಗೆ ಗಂಭೀರ ಬೆದರಿಕೆ ಎದುರಾಗಿರುವಂತೆ ಕಂಡು ಬರುತ್ತಿದೆ. ನಿರಂಕುಶ ನಿರ್ಧಾರಗಳ ವ್ಯವಸ್ಥೆ ಮತ್ತು ಗುಂಪು ಆಡಳಿತದ ಮಧ್ಯೆ ನಾವು ಕಳೆದುಹೋಗಿದ್ದೇವೆ. ಸಾಂವಿಧಾನಿಕ ಸಂಸ್ಥೆಗಳ ಪರಿಣಾಮಕಾರಿತ್ವದಲ್ಲಿ ಗಮನಾರ್ಹ ಕುಸಿತ ಕಂಡು ಬರುತ್ತಿದೆ ಎಂದು ಅನ್ಸಾರಿ ಹೇಳಿದರು.

ಅತಿ ರಾಷ್ಟ್ರವಾದವು ನಮ್ಮ ಸಮಾಜದಲ್ಲಿನ ದೋಷಗಳು ಹೆಚ್ಚು ಗೋಚರವಾಗುವಂತೆ ಮಾಡಿದೆ. ಅದು ಭಾರತವನ್ನು ಇನ್ನಷ್ಟು ಶಿಥಿಲಗೊಳಿಸಿದೆ. ಅದು ಧರ್ಮಗಳು ಮತ್ತು ಜನರನ್ನು ಪರಸ್ಪರರಿಂದ ಬೇರ್ಪಡಿಸುವ ಅದೃಶ್ಯ ಗೋಡೆಗಳನ್ನು ಎಬ್ಬಿಸುತ್ತಿದೆ. ಇದು ನಮ್ಮ ಸಮಾಜದಲ್ಲಿ ಒಡಕುಗಳನ್ನು ಹೆಚ್ಚಿಸುತ್ತಿದೆ. ಪರಿಣಾಮವಾಗಿ ಭ್ರಾತೃತ್ವದ ಬಂಧವು ದುರ್ಬಲಗೊಂಡಿದೆ ಮತ್ತು ಅಭದ್ರತೆಯು ಹೆಚ್ಚಿದೆ ಎಂದು ಅನ್ಸಾರಿ ಸಂದರ್ಶನದಲ್ಲಿ ಹೇಳಿದರು.

ತಮ್ಮನ್ನು ಎರಡನೇ ದರ್ಜೆಯ ಪ್ರಜೆಗಳಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಮುಸ್ಲಿಮರು ಭಾವಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಅನ್ಸಾರಿ,ಅದು ಈಗಾಗಲೇ ಆರಂಭಗೊಂಡಿದೆ ಎಂದರು.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತಂತೆ ಅನ್ಸಾರಿ,ಅಫಘಾನಿಸ್ತಾನ,ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಆಶ್ರಯವನ್ನು ಒದಗಿಸುವುದು ಅಗತ್ಯ ಎಂದು ತಾನು ಭಾವಿಸಿಲ್ಲ. ಈ ಕಾಯ್ದೆಯಿಲ್ಲದೆಯೂ ಹಾಗೆ ಮಾಡುವ ಅಧಿಕಾರವನ್ನು ಸರಕಾರವು ಈಗಾಗಲೇ ಹೊಂದಿದೆ ಎಂದರು.

 ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅನ್ಸಾರಿ, ಸಾಂಸ್ಕೃತಿಕ ಅತಿ ರಾಷ್ಟ್ರವಾದದ ಪರಿಣಾಮಗಳು ಈಗ ಸರಿಪಡಿಸಲಾಗದ ಹಂತವನ್ನು ತಲುಪಿವೆ. ಒಂದು ವೇಳೆ ಅದನ್ನು ಸರಿಪಡಿಸಬಹುದೇನೋ,ಆದರೆ ಅದು ಭಾರತೀಯ ಮತದಾರರ ಆಯ್ಕೆಯನ್ನು ಅವಲಂಬಿಸಿದೆ. ಅಂದರೆ ಜನರು ಪ್ರಚಲಿತ ಸ್ಥಿತಿಯನ್ನು ಬದಲಿಸುವ ಸಾಮೂಹಿಕ ಅಧಿಕಾರ ಮತ್ತು ಸಾಮರ್ಥ್ಯವನ್ನು ಹೊಂದಿದ್ದಾರೆ,ಆದರೆ ಅದನ್ನು ಬಳಸುವುದು ಅವರಿಗೆ ಬಿಟ್ಟ ವಿಷಯವಾಗಿದೆ ಮತ್ತು ಅವರು ಹಾಗೆ ಮಾಡುತ್ತಾರೆಯೇ ಎಂಬ ಬಗ್ಗೆ ಭವಿಷ್ಯ ನುಡಿಯುವುದು ಕಷ್ಟ ಎಂದು ಹೇಳಿದರು.

ತಾನೋರ್ವ ಆಶಾವಾದಿಯಾಗಿದ್ದೇನೆ ಮತ್ತು ಈ ಸ್ಥಿತಿಯು ಬದಲಾಗಲಿದೆ ಎಂದು ತಾನು ನಂಬಿದ್ದೇನೆ. ಕಠೋರ ರಾಷ್ಟ್ರವಾದವು ಶಾಶ್ವತವಾಗಿ ಅಥವಾ ತುಂಬ ಸಮಯದವರೆಗೆ ಮುಂದುವರಿಯಲು ಸಾಧ್ಯವಿಲ್ಲ ಎಂದು ಅನ್ಸಾರಿ ಹೇಳಿದರು.

ತಾವು ಪ್ರತ್ಯೇಕ ಮತ್ತು ಭಿನ್ನ ಸಮುದಾಯ ಎಂದು ಮುಸ್ಲಿಮರು ಎಂದೂ ತಮ್ಮನ್ನು ಪರಿಗಣಿಸಬಾರದು ಮತ್ತು ಪ್ರತ್ಯೇಕವಾಗಿ ಬದುಕಬಾರದು. ಪ್ರತಿಯೊಬ್ಬರೊಂದಿಗೂ ತೊಡಗಿಕೊಳ್ಳಲು ಅವರು ಪ್ರಯತ್ನಿಸಬೇಕು ಎಂದ ಅನ್ಸಾರಿ ಶಾಹೀನ್ ಬಾಗ್ ಮಹಿಳೆಯರನ್ನು ಉಲ್ಲೇಖಿಸಿ ಅವರನ್ನು ಪ್ರಶಂಸಿಸಿದರು. ಅವರು ತಮ್ಮ ಹಕ್ಕುಗಳಿಗಾಗಿ ಧ್ವನಿಯೆತ್ತಿದ್ದು ಮಾತ್ರವಲ್ಲ, ಧ್ವಜ ಮತ್ತು ಸಂವಿಧಾನದಂತಹ ಭಾರತದ ಪ್ರಮುಖ ಚಿಹ್ನೆಗಳೊಂದಿಗೆ ಪ್ರಜ್ಞಾಪೂರ್ವಕವಾಗಿ ಮತ್ತು ದೃಢನಿರ್ಣಯದೊಂದಿಗೆ ಗುರುತಿಸಿಕೊಂಡಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News