ಕೊರೋನ ವೈರಸ್: ಅಮೆರಿಕದ ಗುಪ್ತಚರ ಮಾಹಿತಿ ವಿಶ್ವಾಸಾರ್ಹವಲ್ಲ

Update: 2021-02-10 14:06 GMT

ವುಹಾನ್ (ಚೀನಾ), ಫೆ. 10: ಕೊರೋನ ವೈರಸ್ ಸಾಂಕ್ರಾಮಿಕದ ಮೂಲಕ್ಕೆ ಸಂಬಂಧಿಸಿದ ಅಮೆರಿಕದ ಗುಪ್ತಚರ ಮಾಹಿತಿ ವಿಶ್ವಾಸಾರ್ಹವಲ್ಲ ಎಂದು ಚೀನಾಕ್ಕೆ ಭೇಟಿ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯ ಪರಿಣಿತರ ತಂಡದ ಸದಸ್ಯರೊಬ್ಬರು ಬುಧವಾರ ಹೇಳಿದ್ದಾರೆ.

 ವಿಶ್ವ ಆರೋಗ್ಯ ಸಂಸ್ಥೆಯ ಪರಿಣತರ ತಂಡದ ತನಿಖೆಯ ಪಾರದರ್ಶಕತೆಯ ಬಗ್ಗೆ ಅವೆುರಿಕ ಸಂಶಯ ವ್ಯಕ್ತ ಪಡಿಸಿದ ಬಳಿಕ ತಂಡದ ಸದಸ್ಯ ಪೀಟರ್ ಡಝಾಕ್ ಈ ಪ್ರತಿಕ್ರಿಯೆ ನೀಡಿದ್ದಾರೆ.

ಕೊರೋನ ವೈರಸ್ ಮೂಲವನ್ನು ಪತ್ತೆಹಚ್ಚುವ ಉದ್ದೇಶದ ಪರಿಣತ ತಂಡದ ತನಿಖೆ ಮಂಗಳವಾರ ಕೊನೆಗೊಂಡಿದೆ. ಆದರೆ, ವೈರಸ್‌ನ ಮೂಲವನ್ನು ಪತ್ತೆಹಚ್ಚುವಲ್ಲಿ ಅದು ಯಶಸ್ವಿಯಾಗಿಲ್ಲ.

ಪರಿಣತ ತಂಡವು ಒತ್ತಡದಲ್ಲೇ ತನ್ನ ತನಿಖೆಯನ್ನು ನಡೆಸಿತ್ತು. ‘ಕಠಿಣ ತನಿಖೆ’ ನಡೆಯಬೇಕೆಂದು ಅಮೆರಿಕ ಒತ್ತಾಯಿಸಿದರೆ, ಸಾಂಕ್ರಾಮಿಕವನ್ನು ‘ರಾಜಕೀಕರಣಗೊಳಿಸುವುದರ’ ವಿರುದ್ಧ ಚೀನಾ ಎಚ್ಚರಿಕೆ ನೀಡಿತ್ತು.

‘‘ಚೀನಾದ ವಿಷಯದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕಠಿಣವಾಗಿ ಕಾಣಿಸಿಕೊಳ್ಳಲೇಬೇಕು. ಆದರೆ, ದಯವಿಟ್ಟು ಅಮೆರಿಕದ ಗುಪ್ತಚರ ಮಾಹಿತಿಯನ್ನು ಅತಿಹೆಚ್ಚು ಅವಲಂಬಿಸಬೇಡಿ. ಟ್ರಂಪ್ ಅಡಿಯಲ್ಲಿ ಅದು ಸಾಕಷ್ಟು ದುರ್ಬಲಗೊಂಡಿದೆ ಹಾಗೂ ಹಲವಾರು ವಿಷಯಗಳಲ್ಲಿ ಅದರ ಮಾಹಿತಿ ಸುಳ್ಳಾಗಿದೆ’’ ಎಂದು ಪೀಟರ್ ಡಝಾಕ್ ಟ್ವೀಟ್ ಮಾಡಿದ್ದಾರೆ.

‘‘ಅತ್ಯಂತ ರಾಜಕೀಯ ಪ್ರೇರಿತ ವಾತಾವರಣದಲ್ಲಿ ನಾವು ನಿರ್ಲಿಪ್ತವಾಗಿ ಕೆಲಸ ಮಾಡಿದ್ದೇವೆ’’ ಎಂಬುದಾಗಿಯೂ ಅವರು ತನ್ನ ಟ್ವೀಟ್‌ನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News