ರಶ್ಯ: ನವಾಲ್ನಿ ಬೆಂಬಲಿಗನ ಬಂಧನಕ್ಕೆ ಜಾಗತಿಕ ವಾರಂಟ್

Update: 2021-02-10 14:19 GMT

ಮಾಸ್ಕೋ (ರಶ್ಯ), ಫೆ. 10: ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸಿ ನವಾಲ್ನಿಯ ಕಟ್ಟಾ ಬೆಂಬಲಿಗನೊಬ್ಬನ ಬಂಧನಕ್ಕಾಗಿ ವಾರಂಟ್ ಹೊರಡಿಸಲಾಗಿದೆ ಎಂದು ಮಾಸ್ಕೋದ ನ್ಯಾಯಾಲಯವೊಂದು ಬುಧವಾರ ತಿಳಿಸಿದೆ. ಈ ಬಂಧನ ವಾರಂಟ್ ಮಾಜಿ ಸೋವಿಯತ್ ಒಕ್ಕೂಟಕ್ಕೆ ಸೇರಿದ ಇತರ ದೇಶಗಳಲ್ಲೂ ಸಿಂಧುವಾಗಿರುತ್ತದೆ.

ನವಾಲ್ನಿಯ ಪ್ರಾದೇಶಿಕ ಪ್ರಧಾನ ಕಚೇರಿಯ ಉಸ್ತುವಾರಿ ಹೊತ್ತಿರುವ ಲಿಯೊನಿಡ್ ವೊಲ್ಕೊವ್ ಲಿಥುವೇನಿಯದಲ್ಲಿ ನೆಲೆಸಿದ್ದಾರೆ.

ಬಂಧನ ವಾರಂಟನ್ನು ರಶ್ಯ ಸೇರಿದಂತೆ ಮಾಜಿ ಸೋವಿಯತ್ ರಿಪಬ್ಲಿಕ್‌ಗಳ ಗುಂಪಾಗಿರುವ ಕಾಮನ್‌ವೆಲ್ತ್ ಆಫ್ ಇಂಡಿಪೆಂಡೆಂಟ್ ಸ್ಟೇಟ್ಸ್ (ಸಿಐಎಸ್)ನಾದ್ಯಂತ ಹೊರಡಿಸಲಾಗಿದೆ. ಆದರೆ ಲಿಥುವೇನಿಯ ಈ ಗುಂಪಿನ ಸದಸ್ಯತ್ವ ಹೊಂದಿಲ್ಲ.

ಕಳೆದ ತಿಂಗಳು ಬಂಧನಕ್ಕೀಡಾಗಿರುವ ಅಲೆಕ್ಸಿ ನವಾಲ್ನಿಯನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ರಶ್ಯಾದ್ಯಂತ ಧರಣಿಗಳನ್ನು ಏರ್ಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಹಾಗಾಗಿ, ಅವರು ರಶ್ಯ ಸರಕಾರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ವಾರಾಂತ್ಯದಲ್ಲಿ ಪ್ರೇಮಿಗಳ ದಿನದಂದು ತಮ್ಮ ತಮ್ಮ ಮನೆಗಳ ಮುಂದೆ ಮೊಬೈಲ್ ಫೋನ್ ಟಾರ್ಚ್‌ಗಳನ್ನು ಹೊತ್ತಿಸುವ ಹಾಗೂ ಮೇಣದಬತ್ತಿಗಳನ್ನು ಉರಿಸುವ ಮೂಲಕ ನವಾಲ್ನಿಗೆ ಬೆಂಬಲ ಸೂಚಿಸುವಂತೆ ಅವರು ರಶ್ಯನ್ನರನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News