ಭಾರತ-ಚೀನೀ ಸೇನೆಗಳ ಹಿಂದೆಗೆತ ಪ್ರಕ್ರಿಯೆಯ ಮೊದಲ ಹಂತ ಆರಂಭ: ರಾಜನಾಥ್ ಸಿಂಗ್

Update: 2021-02-11 14:01 GMT

ಹೊಸದಿಲ್ಲಿ, ಫೆ.11: ಪ್ಯಾಂಗಾಂಗ್ ಸರೋವರದ ಉತ್ತರದಂಡೆಯಲ್ಲಿ ಫೆಬ್ರವರಿ 10ರಂದು ಆರಂಭವಾದ ಸೇನೆ ಹಿಂದೆಗೆತ ಪ್ರಕ್ರಿಯೆಯ ಭಾಗವಾಗಿ ಚೀನಾವು ತನ್ನ ಸೇನೆಯನ್ನು ಫಿಂಗರ್ 8 ಪ್ರದೇಶಕ್ಕೆ ಕರೆಸಿಕೊಳ್ಳಲಿದೆ ಮತ್ತು ಭಾರತದ ಸೇನೆ ಫಿಂಗರ್ 3ರ ಬಳಿಯ ಧನ್‌ಸಿಂಗ್ ಥಾಪದ ಖಾಯಂ ಸೇನಾನೆಲೆಗೆ ವಾಪಸಾಗಲಿದೆ.

ಇದೇ ರೀತಿಯ ಪ್ರಕ್ರಿಯೆ ಸರೋವರದ ದಕ್ಷಿಣ ದಂಡೆಯಲ್ಲೂ ಆರಂಭವಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ. ಈ ಪ್ರದೇಶದಲ್ಲಿ ಮಾಡಿರುವ ಯಾವುದೇ ನಿರ್ಮಾಣ ಕಾರ್ಯವನ್ನು ತೆರವುಗೊಳಿಸಲು ಮತ್ತು ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದ ಮಾತುಕತೆಯಲ್ಲಿ ಒಪ್ಪಂದಕ್ಕೆ ಬರುವವರೆಗೆ ಫಿಂಗರ್ 3 ಮತ್ತು ಫಿಂಗರ್ 8ರ ನಡುವಿನ ಪ್ರದೇಶದಲ್ಲಿ ಉಭಯ ಸೇನೆಗಳೂ ಗಸ್ತು ತಿರುಗಬಾರದು ಎಂಬ ಷರತ್ತಿಗೆ ಎರಡೂ ದೇಶಗಳು ಒಪ್ಪಿಕೊಂಡಿವೆ. ಪ್ಯಾಂಗಾಂಗ್ ಸರೋವರ ದಂಡೆಯಿಂದ ಸೇನೆ ಹಿಂದೆಗೆತ ಪ್ರಕ್ರಿಯೆ ಪೂರ್ಣಗೊಂಡ ಬಳಿಕ 48 ಗಂಟೆಯೊಳಗೆ ಸೇನೆಯ ಹಿರಿಯ ಕಮಾಂಡರ್‌ಗಳು ಸಭೆ ನಡೆಸಿ ಇತರ ಬಿಕ್ಕಟ್ಟುಗಳನ್ನು ಬಗೆಹರಿಸಲು ಚರ್ಚೆ ನಡೆಸಲಿದ್ದಾರೆ. ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಸೇನೆ ನಿಯೋಜನೆ ಕುರಿತ ವಿವಾದ ಇನ್ನೂ ಬಗೆಹರಿದಿಲ್ಲ. ಈ ಬಗ್ಗೆ ಮುಂದಿನ ದಿನದಲ್ಲಿ ನಡೆಯುವ ಮಾತುಕತೆ ಸಂದರ್ಭ ಗಮನ ಹರಿಸಲಾಗುವುದು ಎಂದು ಸಿಂಗ್ ಹೇಳಿದ್ದಾರೆ.

ಪ್ಯಾಂಗಾಂಗ್ ಸರೋವರ ಪ್ರದೇಶದಲ್ಲಿ ಸೇನೆ ವಾಪಸಾತಿ ಒಪ್ಪಂದದ ಪ್ರಕಾರ, ಉಭಯ ರಾಷ್ಟ್ರಗಳು ಮುಂಚೂಣಿ ನಿಯೋಜನೆಯನ್ನು ಹಂತಹಂತವಾಗಿ, ಸಂಘಟಿತ ಮತ್ತು ಪರಿಶೀಲಿಸಿದ ರೀತಿಯಲ್ಲಿ ಹಿಂದಕ್ಕೆ ಪಡೆದುಕೊಳ್ಳಲಿವೆ. ಪರಸ್ಪರ ಒಪ್ಪಂದದಡಿ ಈ ಹಂತಗಳನ್ನು ವಿಸ್ತರಿಸಲಾಗುವುದು. ಉತ್ತರ ಮತ್ತು ದಕ್ಷಿಣ ದಂಡೆಯಲ್ಲಿ ಉಭಯ ಸೇನೆಗಳು 2020ರ ಎಪ್ರಿಲ್ ಬಳಿಕ ನಡೆಸಿರುವ ನಿರ್ಮಾಣ ಕಾಮಗಾರಿಯನ್ನು ತೊಡೆದುಹಾಕಲು ಮತ್ತು ಅಲ್ಲಿ ಈ ಹಿಂದೆ ಇದ್ದ ಪರಿಸ್ಥಿತಿಯನ್ನು ಮರುಸ್ಥಾಪಿಸಲು ಒಪ್ಪಲಾಗಿದೆ. ಸಾಂಪ್ರದಾಯಿಕ ಸ್ಥಳ ಸೇರಿದಂತೆ ಬಿಕ್ಕಟ್ಟು ನೆಲೆಸಿದ್ದ ಸ್ಥಳದಲ್ಲಿ ಗಸ್ತು ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಉಳಿದೆಡೆ ಉಭಯ ಸೇನೆಗಳ ಗಸ್ತು ಮುಂದುವರಿಯಲಿದೆ ಎಂದು ಸಚಿವರು ಹೇಳಿದ್ದಾರೆ.

ಮಾತುಕತೆಯಲ್ಲಿ ದೇಶದ ಯಾವುದೇ ಭಾಗವನ್ನು ನಾವು ಕಳೆದುಕೊಂಡಿಲ್ಲ ಎಂದು ಸಂಸತ್ತಿಗೆ ಭರವಸೆ ನೀಡುತ್ತೇನೆ. ಆದರೂ ಸೇನೆ ನಿಯೋಜನೆ ಮತ್ತು ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಗಸ್ತು ತಿರುಗುವಿಕೆಗೆ ಸಂಬಂಧಿಸಿದ ಕೆಲವು ಬಿಕ್ಕಟ್ಟುಗಳು ಇನ್ನೂ ಉಳಿದುಕೊಂಡಿವೆ. ಮುಂದಿನ ಹಂತದ ಮಾತುಕತೆ ಸಂದರ್ಭ ಈ ಬಗ್ಗೆ ಗಮನ ಹರಿಸಲಾಗುವುದು. ದೇಶದ ಸಾರ್ವಭೌಮತೆಯನ್ನು ರಕ್ಷಿಸುವಲ್ಲಿ ನಮ್ಮ ದೃಢನಿರ್ಧಾರ ಮಾತುಕತೆಯ ಬಳಿಕ ಚೀನಾಕ್ಕೆ ಮನವರಿಕೆಯಾಗಿದೆ. ಇನ್ನೂ ಉಳಿದುಕೊಂಡಿರುವ ಕೆಲವು ಬಿಕ್ಕಟ್ಟಿನ ಪರಿಹಾರಕ್ಕೂ ಚೀನಾ ನಮ್ಮೊಂದಿಗೆ ಗಂಭೀರ ಪ್ರಯತ್ನ ನಡೆಸುವುದಾಗಿ ನಿರೀಕ್ಷಿಸುತ್ತೇವೆ ಎಂದು ಸಿಂಗ್ ಹೇಳಿದ್ದಾರೆ. ಲಡಾಖ್‌ನ ತೀವ್ರ ಚಳಿಯ ಸಂದರ್ಭದಲ್ಲೂ ಶೌರ್ಯ, ಪರಾಕ್ರಮ ತೋರಿದ ದೇಶದ ಧೀರ ಯೋಧರ ಸಂಕಲ್ಪಶಕ್ತಿಯೇ ಸೇನೆ ಹಿಂದೆಗೆತ ಪ್ರಕ್ರಿಯೆಗೆ ಮೂಲಾಧಾರವಾಗಿದೆ. ಸೇನೆ ಹಿಂದೆಗೆತ, ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಯಥಾಸ್ಥಿತಿ ಮರುಸ್ಥಾಪನೆ ಹಾಗೂ ಈ ಮೂಲಕ ಇಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಬೇಕು ಎಂಬುದೇ ನಮ್ಮ ಗುರಿಯಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

3 ಸೂತ್ರದ ಪರಿಹಾರ ಚೀನಾದೊಂದಿಗೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಕಳೆದ ವರ್ಷದಿಂದ ನಡೆಯುತ್ತಿರುವ ಮಾತುಕತೆ ಸಂದರ್ಭ ಭಾರತ 3 ಸೂತ್ರದ ಪರಿಹಾರ ಒಪ್ಪಂದವನ್ನು ಪ್ರತಿಪಾದಿಸಿತ್ತು.

ಇವೆಂದರೆ: 1. ವಾಸ್ತವಿಕ ನಿಯಂತ್ರಣ ರೇಖೆಯನ್ನು ಉಭಯ ಸೇನೆಗಳೂ ಮಾನ್ಯ ಮಾಡಬೇಕು ಮತ್ತು ಗೌರವಿಸಬೇಕು.

2. ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಿಸಲು ಎರಡೂ ಸೇನೆ ಪ್ರಯತ್ನಿಸಬಾರದು.

3. ಎಲ್ಲಾ ಒಪ್ಪಂದಗಳನ್ನು ಎರಡೂ ದೇಶಗಳು ಪೂರ್ಣವಾಗಿ ಪಾಲಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News