ಪ್ರತಿಭಟನೆಯ ಹಕ್ಕನ್ನು ಯಾವುದೇ ಸಮಯ, ಎಲ್ಲೆಡೆಯೂ ವ್ಯಕ್ತಪಡಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

Update: 2021-02-13 18:43 GMT

ಹೊಸದಿಲ್ಲಿ, ಫೆ. 13: ಪ್ರತಿಭಟಿಸುವ ಹಕ್ಕು ಹಾಗೂ ಅಭಿವ್ಯಕ್ತಿ ಸ್ವಾತಂತ್ರದ ಹಕ್ಕು ನಿರ್ದಿಷ್ಟ ಕರ್ತವ್ಯಗಳೊಂದಿಗೆ ಬರುತ್ತವೆ. ಅದು ಎಲ್ಲಾ ಸಮಯದಲ್ಲಿ ಹಾಗೂ ಎಲ್ಲೆಡೆ ಇರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಶನಿವಾರ ಹೇಳಿದೆ.

ಪೌರತ್ವ ಕಾಯ್ದೆ ವಿರೋಧಿಸಿ ಶಾಹಿನ್‌ಬಾಗ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಈ ಹಿಂದೆ ಸುಪ್ರೀಂ ಕೋರ್ಟ್ ಕಾನೂನು ಬಾಹಿರ ಎಂದು ಹೇಳಿತ್ತು. ಇದನ್ನು ಮರು ಪರಿಶೀಲಿಸುವಂತೆ ಕೋರಿ 12 ಸಾಮಾಜಿಕ ಕಾರ್ಯಕರ್ತರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಮನವಿ ಪರಿಶೀಲನೆಗೆ ನಿರಾಕರಿಸಿರುವ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

‘‘ಪ್ರತಿಭಟನೆ ನಡೆಸುವ ಹಕ್ಕು ಎಲ್ಲೆಡೆ ಹಾಗೂ ಎಲ್ಲಾ ಸಮಯದಲ್ಲಿ ಇರಲು ಸಾಧ್ಯವಿಲ್ಲ. ಕೆಲವು ಸಂದರ್ಭ ತತ್‌ಕ್ಷಣ ಪ್ರತಿಭಟನೆ ನಡೆಯಬಹುದು. ಆದರೆ, ದೀರ್ಘಕಾಲದ ಭಿನ್ನಾಭಿಪ್ರಾಯ ಅಥವಾ ಪ್ರತಿಭಟನೆಯ ಸಂದರ್ಭ ಇತರರ ಹಕ್ಕುಗಳಿಗೆ ತೊಂದರೆ ಉಂಟು ಮಾಡುವ ಸಾರ್ವಜನಿಕ ಸ್ಥಳಗಳಲ್ಲಿ ಮುಂದುವರಿಸಲು ಸಾಧ್ಯವಿಲ್ಲ’’ ಎಂದು ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್, ಅನಿರುದ್ಧ ಬೋಸ್ ಹಾಗೂ ಕೃಷ್ಣ ಮುರಾರಿ ಇದ್ದ ಮೂವರು ಸದಸ್ಯರ ಪೀಠ ಹೇಳಿದೆ.

ಪ್ರತಿಭಟನೆಗೆ ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಕೊಳ್ಳಬಾರದು. ಸಾರ್ವಜನಿಕ ಪ್ರತಿಭಟನೆ ಗೊತ್ತುಪಡಿಸಿದ ಪ್ರದೇಶಗಳಲ್ಲಿ ಮಾತ್ರ ನಡೆಸಬೇಕು ಎಂದು ನ್ಯಾಯಪೀಠ ಪುನರುಚ್ಚರಿಸಿದೆ.

ಈ ಮರು ಪರಿಶೀಲನಾ ಅರ್ಜಿಯನ್ನು ಫೆಬ್ರವರಿ 9ರಂದು ನಿರ್ಧರಿಸಲಾಗಿತ್ತು. ಆದರೆ, ನಿನ್ನೆ ರಾತ್ರಿ ಆದೇಶ ಹೊರಬಿದ್ದಿತ್ತು.

ಭಿನ್ನಾಭಿಪ್ರಾಯ ಹಾಗೂ ಪ್ರಜಾಪ್ರಭುತ್ವ ಜೊತೆ ಜೊತೆಯಾಗಿ ಸಾಗಬೇಕು ಎಂದು 2020ರ ಅಕ್ಟೋಬರ್‌ನ ತನ್ನ ತೀರ್ಪಿನಲ್ಲಿ ಪ್ರತಿಪಾದಿಸಿದ್ದ ಸುಪ್ರೀಂ ಕೋರ್ಟ್, ಇಂತಹ ಪ್ರತಿಭಟನೆಗಳು ಸ್ವೀಕಾರಾರ್ಹವಲ್ಲ ಎಂದು ಒತ್ತಿ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News