ದ್ವಿತೀಯ ಟೆಸ್ಟ್: ಭಾರತ 300/6, ರೋಹಿತ್ ಶತಕ, ರಹಾನೆ ಅರ್ಧಶತಕ

Update: 2021-02-13 12:00 GMT

ಚೆನ್ನೈ: ಆರಂಭಿಕ ಆಟಗಾರ ರೋಹಿತ್ ಶರ್ಮಾ ಶತಕ(161, 231 ಎಸೆತ) ಹಾಗೂ ಉಪ ನಾಯಕ ಅಜಿಂಕ್ಯ ರಹಾನೆ(67, 149 ಎಸೆತ)ಅರ್ಧಶತಕಗಳ ಕೊಡುಗೆಯ ನೆರವಿನಿಂದ ಶನಿವಾರ ಇಲ್ಲಿ ಆರಂಭವಾಗಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಇನಿಂಗ್ಸ್ ನಲ್ಲಿ ಮೊದಲ ದಿನದಾಟದಂತ್ಯಕ್ಕೆ 88 ಓವರ್ ಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ 300 ರನ್ ಗಳಿಸಿದೆ.

ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ 2ನೇ ಓವರ್ ನಲ್ಲಿ ಶುಭಮನ್ ಗಿಲ್(0)ವಿಕೆಟನ್ನು ಕಳೆದುಕೊಂಡಿತು. ಆಗ 2ನೇ ವಿಕೆಟ್ ಗೆ 85 ರನ್ ಜೊತೆಯಾಟ ನಡೆಸಿದ ರೋಹಿತ್ ಹಾಗೂ ಚೇತೇಶ್ವರ ಪೂಜಾರ(21)ತಂಡವನ್ನು ಆಧರಿಸಿದರು. ಈ ಜೋಡಿ ಬೇರ್ಪಟ್ಟ ಬಳಿಕ ಕ್ರೀಸ್ ಗೆ ಇಳಿದಿದ್ದ ನಾಯಕ ವಿರಾಟ್ ಕೊಹ್ಲಿ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಆಗ 4ನೇ ವಿಕೆಟ್ ಗೆ 162 ರನ್ ಜೊತೆಯಾಟ ನಡೆಸಿದ ರೋಹಿತ್ ಹಾಗೂ ಅಜಿಂಕ್ಯ ರಹಾನೆ ತಂಡಕ್ಕೆ ಆಸರೆಯಾದರು.

7ನೇ ಶತಕ(161, 231 ಎಸೆತ, 18 ಬೌಂಡರಿ, 2 ಸಿಕ್ಸರ್)ಸಿಡಿಸಿದ ರೋಹಿತ್ ಶರ್ಮಾ ವಿಕೆಟನ್ನು ಪಡೆದ ಲೀಚ್ 4ನೇ ವಿಕೆಟ್ ಜೊತೆಯಾಟವನ್ನು ಮುರಿದರು. ರಹಾನೆ(67, 149 ಎಸೆತ, 9 ಬೌಂಡರಿ)ಅರ್ಧಶತಕ ಸಿಡಿಸಿದರು. ದಿನದಾಟದಂತ್ಯಕ್ಕೆ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಭ್ ಪಂತ್(ಔಟಾಗದೆ 33, 56 ಎಸೆತ)ಹಾಗೂ ಅಕ್ಷರ್ ಪಟೇಲ್(ಔಟಾಗದೆ 5)ಕ್ರೀಸ್ ಕಾಯ್ದುಕೊಂಡಿದ್ದರು.

ಇಂಗ್ಲೆಂಡ್ ಪರವಾಗಿ ಜಾಕ್ ಲೀಚ್(2-78) ಹಾಗೂ  ಮೊಯಿನ್ ಅಲಿ(2-112)ತಲಾ ಎರಡು ವಿಕೆಟ್ ಗಳನ್ನು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News