ರಿಪಬ್ಲಿಕ್‌ ಟಿವಿಯಲ್ಲಿ ಜಾಹೀರಾತು ನಿಲ್ಲಿಸಿದ ಪ್ರಮುಖ ಕಂಪೆನಿಗಳು

Update: 2021-02-13 15:19 GMT

ಹೊಸದಿಲ್ಲಿ: 2020 ರ ಅಕ್ಟೋಬರ್‌ನಿಂದ ಅರ್ನಬ್‌ ಗೋಸ್ವಾಮಿ ಒಡೆತನದ ರಿಪಬ್ಲಿಕ್ ಮೀಡಿಯಾ ನೆಟ್‌ ವರ್ಕ್ ಚಾನೆಲ್‌ಗಳಲ್ಲಿ ಹಲವಾರು ಬ್ರಾಂಡ್‌ ಗಳು ಜಾಹೀರಾತನ್ನು ನಿಲ್ಲಿಸಿದ ಕುರಿತಾದಂತೆ ವರದಿಯನ್ನು bestmediainfo.com ತಯಾರಿಸುತ್ತಿದ್ದು, ಇದನ್ನು ತಡೆಯುವ ಪ್ರಯತ್ನದಲ್ಲಿ, ಅರ್ನಾಬ್ ಗೋಸ್ವಾಮಿ ಒಡೆತನದ ಎ.ಆರ್.ಜಿ ಔಟ್‌ಲೈಯರ್ ಮೀಡಿಯಾ (ರಿಪಬ್ಲಿಕ್ ಟಿವಿ)ವು bestmediainfo.comನ ಸ್ಥಾಪಕ ಮತ್ತು ಪ್ರಧಾನ ಸಂಪಾದಕ ನೀರಜ್ ಶರ್ಮಾರಿಗೆ ನೋಟಿಸ್‌ ಕಳುಹಿಸಿದೆ ಎಂದು bestmediainfo.com ವರದಿ ಮಾಡಿದೆ.

ಪ್ರಸ್ತಾವಿತ ಸುದ್ದಿ ವರದಿಯನ್ನು ತಯಾರಿಸುತ್ತಿರುವ ವೇಳೆ ಪ್ರತಿಕ್ರಿಯೆಗಾಗಿ ಬೆಸ್ಟ್‌ಮೀಡಿಯಾಇನ್‌ಫೋ.ಕಾಮ್ ‌ನ ಸಂಪಾದಕೀಯ ತಂಡವು ಗುರುವಾರ ರಿಪಬ್ಲಿಕ್‌ನ ಸಿಇಒ ವಿಕಾಸ್ ಖನ್‌ ಚಂದಾನಿಯನ್ನು ಸಂಪರ್ಕಿಸಿತ್ತು.

ರಿಪಬ್ಲಿಕ್‌ ಟಿವಿಯಲ್ಲಿ ಜಾಹೀರಾತು ನಿಲ್ಲಿಸಿರುವ ಕುರಿತಾದಂತೆ ಅಧ್ಯಯನದಲ್ಲಿ ತೊಡಗಿದ್ದ ವೇಳೆ ಅಕ್ಟೋಬರ್ ಮತ್ತು ಡಿಸೆಂಬರ್ 2020 ರ ನಡುವೆ ದೇಶದ 40 ಕ್ಕೂ ಹೆಚ್ಚು ಉನ್ನತ ಬ್ರ್ಯಾಂಡ್‌ಗಳು (ಹೆಸರುಗಳನ್ನು ತಡೆಹಿಡಿಯಲಾಗಿದೆ) ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್‌ನಲ್ಲಿ ಜಾಹೀರಾತನ್ನು ನಿಲ್ಲಿಸಿದೆ ಎಂದು ಬೆಸ್ಟ್‌ ಮೀಡಿಯಾ ತಂಡವು ಕಂಡುಕೊಂಡಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದ್ವೇಷಪೂರಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಚಾನೆಲ್‌ ಗಳಿಗೆ ಜಾಹೀರಾತು ನೀಡಲು ಹಲವಾರು ಕಂಪೆನಿಗಳು ನಿರಾಕರಿಸುತ್ತಿರುವ ಕುರಿತು ಬೆಸ್ಟ್‌ ಮೀಡಿಯಾವು ವರದಿ ತಯಾರಿಸಿತ್ತು. ಈ ಕುರಿತಾದಂತೆ ಹಲವಾರು ಚರ್ಚೆಗಳು ನಡೆದಿದ್ದು, ಬಹುತೇಕ ಇತರ ಜಾಹೀರಾತುದಾರರು ಕೂಡ ಈ ಮಾತನ್ನು ಒತ್ತಿ ಹೇಳಿದ್ದರು ಎನ್ನಲಾಗಿದೆ.

ಇದೀಗ ಫೀನಿಕ್ಸ್‌ ಲೀಗಲ್‌ ಮೂಲಕ ರಿಪಬ್ಲಿಕ್‌ ಟಿವಿಯು ನೋಟಿಸ್‌ ಕಳುಹಿಸಿದ್ದು,  “ನಿಮ್ಮ ಉದ್ದೇಶಿತ ಮಾನಹಾನಿಕರ, ಸುಳ್ಳು, ಪ್ರೇರಿತ, ಸಂಯೋಜಿತ ಪ್ರಕಟಣೆಯ ಕುರಿತಾದಂತೆ ನಾವು ಈ ಪತ್ರವನ್ನು ನೀಡುತ್ತಿದ್ದೇವೆ. “ರಿಪಬ್ಲಿಕ್‌ ಟಿವಿಯಿಂದ ಹಲವು ಜಾಹೀರಾತುದಾರರು ಹೊರಹೋಗುವ” ಬಗ್ಗೆ  ನೀವು ತಯಾರಿಸುತ್ತಿರುವ ವರದಿಯಲ್ಲಿ ಉಲ್ಲೇಖಿಸಲಾದ ನಿರೂಪಣೆ, ಮತ್ತು ನಿರ್ದಿಷ್ಟವಾಗಿ 30 ಜಾಹೀರಾತುದಾರರು ‘ವಾಟ್ಸಾಪ್ ಚಾಟ್ ಸೋರಿಕೆಯಾದ’ ನಂತರ‌ ಹೊರಬಂದಿರುವ ಕುರಿತಾದ ಉಲ್ಲೇಖವು ಸಂಪೂರ್ಣವಾಗಿ ಸುಳ್ಳು ಮಾಹಿತಿಯಾಗಿದೆ. ನಿಮ್ಮ ಲೇಖನದಲ್ಲಿ ಪರಸ್ಪರ ಸಂಬಂಧವಿಲ್ಲದ ಮಾಹಿತಿಗಳನ್ನು ನೀಡಲಾಗಿದೆ. ಸದ್ಯದ ಸಾಂಕ್ರಾಮಿಕ ಮತ್ತು ಕಠಿಣ ಆರ್ಥಿಕ ಪರಿಸ್ಥಿತಿಗಳು ಚಾನೆಲ್‌ನಲ್ಲಿನ ಜಾಹೀರಾತಿನ ಮೇಲೂ ಪರಿಣಾಮ ಬೀರಬಹುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

“ಇದಲ್ಲದೆ, ಕೋವಿಡ್ -19 ರ ಕಾರಣದಿಂದಾಗಿ ಒಟ್ಟಾರೆಯಾಗಿ ವಿಶ್ವ ಆರ್ಥಿಕ ಹಿನ್ನಡೆಯನ್ನು ಅನುಭವಿಸಿದೆ ಮತ್ತು ಕೋವಿಡ್ -19 ನಮ್ಮ ಗ್ರಾಹಕರ ಮೇಲೆ ಪರಿಣಾಮ ಬೀರಿದೆ ಎಂಬ ಬಗ್ಗೆ ಯಾವುದೇ ಸಂದೇಹವಿಲ್ಲ, ಮತ್ತು ಜಾಹೀರಾತು ಉದ್ಯಮವೂ ಇದಕ್ಕೆ ಹೊರತಾಗಿಲ್ಲ. ಆದರೂ, ಸಾಮಾನ್ಯ ವಿಚಾರಗಳನ್ನು ಟಿಆರ್‌ಪಿ ವಿವಾದದೊಂದಿಗೆ ಸಂಬಂಧಪಡಿಸಲು ನೀವು ಪ್ರಯತ್ನಿಸುವುದು ಸಂಪೂರ್ಣವಾಗಿ ದುರುದ್ದೇಶಪೂರಿತ ಮತ್ತು ದಾರಿತಪ್ಪಿಸುವ ಸಂಗತಿಯಾಗಿದೆ” ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News