×
Ad

"ಟೂಲ್ ಕಿಟ್‍ನಲ್ಲಿ ದೇಶದ್ರೋಹವೆಂದು ಪರಿಗಣಿಸಬಹುದಾದ ಯಾವುದೇ ಅಂಶವಿಲ್ಲ"

Update: 2021-02-16 15:20 IST

ಹೊಸದಿಲ್ಲಿ: ಇಪ್ಪತ್ತೊಂದು ವರ್ಷದ ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧನಕ್ಕೆ ಕಾರಣವಾದ ರೈತರ ಪ್ರತಿಭಟನೆ ಕುರಿತಾದ ಟೂಲ್ ಕಿಟ್‍ನಲ್ಲಿ  'ದೇಶದ್ರೋಹ'ವೆಂದು ಪರಿಗಣಿಸಬಹುದಾದ ಯಾವುದೇ ಅಂಶ ನನಗೆ ಕಂಡು ಬರುತ್ತಿಲ್ಲ ಎಂದು ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಾಧೀಶ ಜಸ್ಟಿಸ್ ದೀಪಕ್ ಗುಪ್ತಾ ಹೇಳಿದ್ದಾರೆ.

ndtv ಸುದ್ದಿವಾಹಿನಿಯಲ್ಲಿ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ  ಜಸ್ಟಿಸ್ ಗುಪ್ತಾ, "ಈ ದೇಶದ ಪ್ರತಿಯೊಬ್ಬ ಪ್ರಜೆಗೆ ಸರಕಾರವನ್ನು ವಿರೋಧಿಸುವ ಹಕ್ಕುಂಟು ಆದರೆ ಈ ವಿರೋಧ ಶಾಂತಿಯುತವಾಗಿರಬೇಕು,'' ಎಂದು ಹೇಳಿದರು.

"ದಿಶಾ ರವಿಯ ಬಂಧನ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ,'' ಎಂದೂ ಅವರು ಹೇಳಿದರು.

"ಟೂಲ್ ಕಿಟ್‍ನಲ್ಲಿ ಹಿಂಸೆ ಅಥವಾ ಜನರನ್ನು ಪ್ರಚೋದಿಸುವ ಕುರಿತಾದ  ಯಾವುದೇ ಅಂಶವಿಲ್ಲ, ಅದನ್ನು ಓದಿದ್ದೇನೆ. ಅದರಲ್ಲಿ ದೇಶದ್ರೋಹವೆಂದು ಪರಿಗಣಿಸುವಂತಹ ಯಾವುದೇ ಅಂಶವಿಲ್ಲ. ಪ್ರತಿಭಟನೆಯ ಕುರಿತಂತೆ ಒಬ್ಬರು ಒಪ್ಪಬಹುದು ಅಥವಾ ಒಪ್ಪದೇ ಇರಬಹುದು, ಅದು ಬೇರೆ ವಿಚಾರ, ಆದರೆ ಇದನ್ನು ದೇಶದ್ರೋಹವೆಂದು ಪರಿಗಣಿಸಲು ಕಾನೂನನ್ನು ಅರ್ಥ ಮಾಡಿಕೊಂಡಿಲ್ಲ ಎಂದೇ ಹೇಳಬೇಕಾಗುತ್ತದೆ,'' ಎಂದು ಅವರು ಅಭಿಪ್ರಾಯ ಪಟ್ಟರು.

"ದೇಶದ್ರೋಹದ ಕಾನೂನನ್ನು ವಸಾಹತುಶಾಹಿ ಬ್ರಿಟಿಷ್ ಸಾಮ್ರಾಜ್ಯ ಜಾರಿಗೆ ತಂದಿತ್ತು. ಆಗಿನ ಕಾಲದಲ್ಲೂ ಅಪರಾಧ ಹಾಗೂ ಅಜೀವ ಸೆರೆವಾಸದ ಶಿಕ್ಷೆ ಈ ಅಪರಾಧಕ್ಕೆ ನೀಡಬಹುದಾಗಿತ್ತು. ಬಾಲ ಗಂಗಾಧರ್ ತಿಲಕ್ ಹಾಗೂ ಗಾಂಧೀಜಿಯನ್ನು ಇದೇ ಕಾನೂನಿನಡಿ  ಜೈಲಿಗೆ ಕಳುಹಿಸಲಾಗಿದ್ದರಿಂದ ನಾವು ಈ ಕಾನೂನನ್ನು ರದ್ದುಪಡಿಸಬೇಕಿತ್ತು ಅಥವಾ ಅದರಲ್ಲಿ ಕೆಲವೊಂದು ಮಾರ್ಪಾಟು ತರಬೇಕಿತ್ತು, ಆದರೆ ದುರದೃಷ್ಟವಶಾತ್ ಕಾನೂನನ್ನು ದುರುಪಯೋಗ ಪಡಿಸಲಾಗುತ್ತಿದೆ,'' ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News