ರಾಜಸ್ಥಾನದಲ್ಲಿ ರೂ. 100ರ ಗಡಿ ದಾಟಿದ ಪೆಟ್ರೋಲ್ ಬೆಲೆ

Update: 2021-02-17 16:09 GMT

ಹೊಸದಿಲ್ಲಿ,ಫೆ.17: ತೈಲ ಬೆಲೆಗಳು ಸತತವಾಗಿ 9 ನೇ ದಿನವೂ ಏರಿಕೆಯಾಗಿದ್ದು, ರಾಜಸ್ಥಾನದಲ್ಲಿ ಬುಧವಾರ ಪೆಟ್ರೋಲ್ ದರವು ಪ್ರತಿ ಲೀಟರ್‌ಗೆ 100 ರೂ. ಗಡಿಯನ್ನು ದಾಟಿದೆ.

 ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಪ್ರತಿ ಲೀಟರ್‌ಗೆ ತಲಾ 25 ಪೈಸೆ ಏರಿಕೆಯಾಗಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತಿತರ ರಾಜ್ಯಗಳ ಕೆಲವು ಸ್ಥಳಗಳಲ್ಲಿ ಪೆಟ್ರೋಲ್ ದರವು 100 ರೂ. ಸನಿಹಕ್ಕೆ ತಲುಪಿದೆ.

ದೇಶದಲ್ಲಿ ಪೆಟ್ರೋಲ್ ದರವು 100 ರೂ.ಗೆ ತಲುಪಿರುವುದು ಇದೇ ಮೊದಲ ಸಲವಾಗಿದೆ. ರಾಜಸ್ಥಾನದ ಶ್ರೀಗಂಗಾ ನಗರದಲ್ಲಿ ಪೆಟ್ರೋಲ್ ಬೆಲೆಯು ಲೀಟರ್‌ಗೆ 100.13 ರೂ. ಆಗಿದ್ದು, ಇದು ದೇಶದಲ್ಲೇ ಅತ್ಯಧಿಕವಾಗಿದೆ ಮತ್ತು ಅಲ್ಲಿ ಡೀಸೆಲ್ ದರ ಲೀಟರ್‌ಗೆ 93.13 ರೂ.ಗೆ ತಲುಪಿದೆ.

  ಸ್ಥಳೀಯ ತೆರಿಗೆಗಳು ಹಾಗೂ ಸರಕುಸಾಗಣೆ ಶುಲ್ಕಗಳು ಬೇರೆ ಬೇರೆ ರಾಜ್ಯಗಳಲ್ಲಿ ವಿಭಿನ್ನವಾಗಿರುವುದರಿಂದ ತೈಲ ದರಗಳಲ್ಲಿಯೂ ವ್ಯತ್ಯಾಸವುಂಟಾಗುತ್ತದೆ. ರಾಜಸ್ಥಾನವು ದೇಶದಲ್ಲೇ ಪೆಟ್ರೋಲ್‌ಗೆ ಅತ್ಯಧಿಕ ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ವಿಧಿಸುವ ರಾಜ್ಯವಾಗಿದೆ.

ರಾಜಸ್ಥಾನ ಸರಕಾರವು ಕಳೆದ ತಿಂಗಳು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್ ಅನ್ನು ಶೇ.2ರಷ್ಟು ಕಡಿತಗೊಳಿಸಿದ್ದರೂ, ಅಲ್ಲಿ ತೈಲ ದರ ದಾಖಲೆಯ ಏರಿಕೆಯನ್ನು ಕಂಡಿದೆ.

ಬುಧವಾರ ತೈಲ ದರದಲ್ಲಿ ಆಗಿರುವ ಹೆಚ್ಚಳದಿಂದಾಗಿ ಪೆಟ್ರೋಲ್ ದರವು ದಿಲ್ಲಿಯಲ್ಲಿ ಪ್ರತಿ ಲೀಟರ್‌ಗೆ 89.4 ರೂ. ಆಗಿದೆ ಹಾಗೂ ಡೀಸೆಲ್ ದರವು 79.95 ರೂ. ಆಗಿದೆ.

 ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ದರವು ಲೀಟರ್‌ಗೆ 96 ರೂ.ಗೆ ತಲುಪಿದ್ದು, ಡೀಸೆಲ್ ದರ 86.98 ರೂ. ಆಗಿದೆ.

ಮಧ್ಯಪ್ರದೇಶದ ಅನುಪ್ಪುರ್‌ನಲ್ಲಿ ಪೆಟ್ರೋಲ್ ಬೆಲೆಯು ಲೀಟರ್‌ಗೆ 99.90 ರೂ. ಹಾಗೂ ಡೀಸೆಲ್ 90.35 ರೂ. ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News