ರಾಹುಲ್ ಭೇಟಿಯ ವೇಳೆ 'ದೂರು ನೀಡಿದ್ದನ್ನೇ ಹೊಗಳಿಕೆಯನ್ನಾಗಿ'ಅನುವಾದಿಸಿದ ಪುದುಚ್ಚೇರಿ ಸಿಎಂ

Update: 2021-02-18 06:37 GMT

ಪುದುಚ್ಚೇರಿ: ಬುಧವಾರ ಕಾಂಗ್ರೆಸ್ ನಾಯಕ ಹಾಗೂ ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ಪುದುಚ್ಚೇರಿಯಲ್ಲಿ ಮೀನುಗಾರರ ಜತೆ ನಡೆಸಿದ ಸಾರ್ವಜನಿಕ ಸಭೆಯ ವೇಳೆ ಅವರ ಅನುವಾದಕರಾಗಿ ಕಾರ್ಯನಿರ್ವಹಿಸಿದ ಪುದುಚ್ಚೇರಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಅವರು ತಮ್ಮ ತಪ್ಪನ್ನು ಅಡಗಿಸುವ ಸಲುವಾಗಿ ಉದ್ದೇಶಪೂರ್ವಕವಾಗಿ ತಪ್ಪಾಗಿ ಅನುವಾದಿಸಿ ಪೇಚಿಗೆ ಸಿಲುಕಿದ್ದಾರಲ್ಲದೆ ಅವರ ಈ ಕೃತ್ಯ ವೀಡಿಯೋದಲ್ಲೂ ಸೆರೆಯಾಗಿ ಅದೀಗ ವೈರಲ್ ಆಗಿದೆ.

ಈ ಸಭೆಯಲ್ಲಿ  ಸಾಕಷ್ಟು ಚೆನ್ನಾಗಿಯೇ ರಾಹುಲ್ ಗಾಂಧಿ ಅವರ ಮಾತುಗಳನ್ನು ತಮಿಳು ಭಾಷೆಗೆ ಹಾಗೂ  ಸ್ಥಳಿಯರು ತಮಿಳು ಮಾತನಾಡಿದಾಗ ಅದನ್ನು ಇಂಗ್ಲಿಷಿನಲ್ಲಿ ರಾಹುಲ್ ಗೆ ವಿವರಿಸುತ್ತಿದ್ದ ನಾರಾಯಣಸ್ವಾಮಿ, ಮಹಿಳೆಯೊಬ್ಬರು ಸ್ವತಃ ಸಿಎಂ ವಿರುದ್ಧವೇ ದೂರಿದಾಗ ಉದ್ದೇಶಪೂರ್ವಕವಾಗಿ ತಪ್ಪಾಗಿ ಅನುವಾದಿಸಿದ್ದಾರೆ.

ವೀಡಿಯೋದಲ್ಲಿ ಹಸಿರು ಸೀರೆಯುಟ್ಟ ಮಹಿಳೆಯೊಬ್ಬರು ಮಾತನಾಡುತ್ತಾ, "ಕರಾವಳಿ ಪ್ರದೇಶಗಳು ಯಾವತ್ತೂ ಹೀಗೆಯೇ ಇವೆ. ಯಾರೂ ನಮಗೆ ಬೆಂಬಲ ನೀಡುತ್ತಿಲ್ಲ. ಈ ವ್ಯಕ್ತಿ (ನಾರಾಯಣಸ್ವಾಮಿ) ಕೂಡ  ಚಂಡಮಾರುತದ ಸಂದರ್ಭ ನಮ್ಮನ್ನು ಭೇಟಿಯಾಗಲು ಬಂದಿಲ್ಲ. ಬಂದಿದ್ದಾರೆಯೇ?" ಎಂದು ಹೇಳಿದಾಗ ನೆರೆದಿದ್ದ ಜನರು ಜೋರಾಗಿ ಬೊಬ್ಬೆ ಹಾಕಿ ಆಕೆಯನ್ನು ಹುರಿದುಂಬಿಸಿದ್ದರು.

ಆದರೆ ಮಹಿಳೆಯ ಮಾತನ್ನು ನಾರಾಯಣಸ್ವಾಮಿ  ಅನುವಾದಿಸಿದ ರೀತಿ ಮಾತ್ರ ಭಿನ್ನವಾಗಿತ್ತು. "ನಿವಾರ್ ಚಂಡಮಾರುತದ ಸಂದರ್ಭ ನಾನು ಇಲ್ಲಿಗೆ ಭೇಟಿ ನೀಡಿ ಅವರಿಗೆ ಪರಿಹಾರ ನೀಡಿದ್ದೇನೆಂದು ಆಕೆ ಹೇಳುತ್ತಿದ್ದಾರೆ" ಎಂದು  ಅವರು ಹೇಳಿದ್ದರು. ಈ  ವೀಡಿಯೋ ಅವರ ಫೇಸ್ ಬುಕ್ ಪುಟದಲ್ಲಿ ನೇರ ಪ್ರಸಾರವಾಗುತ್ತಿತ್ತು.

ಅರೆಕ್ಷಣದಲ್ಲಿ ಈ ವೀಡಿಯೋ ವೈರಲ್ ಆಗಿತ್ತಲ್ಲದೆ ಹಲವರು ಹಲವು ರೀತಿಯಲ್ಲಿ ಇದರ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News