ಹೆಚ್ಚುತ್ತಿರುವ ಕೋವಿಡ್-19 ಸೋಂಕು: ಅಮರಾವತಿಯಲ್ಲಿ ಒಂದು ದಿನದ ಲಾಕ್ ಡೌನ್

Update: 2021-02-18 16:11 GMT

ಮುಂಬೈ,ಫೆ.18: ಕಳೆದ ಎರಡು ತಿಂಗಳುಗಳಿಂದ ರಾಜ್ಯದಲ್ಲಿ ಕಡಿಮೆಯಾಗಿದ್ದ ಕೋವಿಡ್-19 ಸೋಂಕು ನಿಧಾನವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ವಾರಾಂತ್ಯದಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಶನಿವಾರ ರಾತ್ರಿ ಎಂಟು ಗಂಟೆಯಿದ ಸೋಮವಾರ ಬೆಳಿಗ್ಗೆ ಏಳು ಗಂಟೆಯವರೆಗೆ ಲಾಕ್‌ಡೌನ್ ಜಾರಿಯಲ್ಲಿರಲಿದೆ. ಯವತ್ಮಾಲ್ ಜಿಲ್ಲೆಯಲ್ಲಿಯೂ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಅಲ್ಲಿ ಫೆ.28ರವರೆಗೂ ಶಾಲಾ-ಕಾಲೇಜುಗಳು ಮುಚ್ಚಿರಲಿವೆ. ರೆಸ್ಟೋರಂಟ್‌ಗಳು ಮತ್ತು ಕಲ್ಯಾಣ ಮಂಟಪಗಳು ಕಾರ್ಯ ನಿರ್ವಹಿಸಲಿದ್ದು, ಶೇ.50ಕ್ಕೂ ಕಡಿಮೆ ಸಾಮರ್ಥ್ಯದೊಂದಿಗೆ ಮದುವೆ ಸಮಾರಂಭಗಳಿಗೆ ಅನುಮತಿ ನೀಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಐದು ಅಥವಾ ಹೆಚ್ಚು ಜನರು ಸೇರುವಂತಿಲ್ಲ.

ಅಮರಾವತಿ ಜಿಲ್ಲೆಯಲ್ಲಿ ಲಾಕ್‌ಡೌನ್ ಘೋಷಿಸಿದ ಜಿಲ್ಲಾಧಿಕಾರಿ ಶೈಲೇಶ್ ನವಲ್ ಅವರು ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸುವಂತೆ ಜನರನ್ನು ಕೋರಿದ್ದಾರೆ. ಮಾರುಕಟ್ಟೆಗಳು,ಈಜುಕೊಳಗಳು,ಒಳಾಂಗಣ ಕ್ರೀಡಾಂಗಣಗಳು ಮುಚ್ಚಿರಲಿವೆ. ಧಾರ್ಮಿಕ ಸಮಾರಂಭಗಳಲ್ಲಿ ಕೇವಲ ಐದು ಜನರು ಪಾಲ್ಗೊಳ್ಳಬಹುದಾಗಿದೆ. ಆದರೆ ಅಗತ್ಯ ಸೇವೆಗಳು ಎಂದಿನಂತಿರಲಿವೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News