ಪುದುಚ್ಚೇರಿ ಲೆ. ಗವರ್ನರ್ ಆಗಿ ತಮಿಳ್‌ಇಸೈ ಸೌಂದರರಾಜನ್ ಪ್ರಮಾಣವಚನ
Update: 2021-02-18 22:19 IST
ಪುದುಚೆರಿ, ಫೆ.18: ತೆಲಂಗಾಣದ ರಾಜ್ಯಪಾಲೆ ತಮಿಳ್‌ಇಸೈ ಸೌಂದರರಾಜನ್ ಪುದುಚೆರಿಯ ಲೆಫ್ಪಿನೆಂಟ್ ಗವರ್ನರ್ ಆಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.
ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷೆಯಾಗಿರುವ ಸೌಂದರರಾಜನ್‌ಗೆ ತೆಲಂಗಾಣದ ಜೊತೆಗೆ ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಹೆಚ್ಚುವರಿ ಹೊಣೆ ವಹಿಸಲಾಗಿದ್ದು ತಮಿಳಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಪ್ರಮಾಣವಚನ ಬೋಧಿಸಿದ್ದು ಪುದುಚೆರಿ ವಿಧಾನಸಭೆಯ ಸ್ಪೀಕರ್ ವಿಪಿ ಶಿವಕೊಲುಂದು, ಮುಖ್ಯಮಂತ್ರಿ ವಿ ನಾರಾಯಣಸ್ವಾಮಿ, ವಿಪಕ್ಷ ನಾಯಕ ಎನ್. ರಂಗಸ್ವಾಮಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಕಿರಣ್ ಬೇಡಿಯನ್ನು ಫೆ.16ರಂದು ಹುದ್ದೆಯಿಂದ ಕೆಳಗಿಳಿಸಿ ಸೌಂದರರಾಜನ್‌ಗೆ ಹೆಚ್ಚುವರಿ ಹೊಣೆ ನೀಡಲಾಗಿತ್ತು.