ಆಸ್ಟ್ರೇಲಿಯ ಬಳಕೆದಾರರಿಗೆ ಸುದ್ದಿಗಳನ್ನು ತಡೆಹಿಡಿದ ಬಳಿಕ ಸರಕಾರದೊಂದಿಗೆ ಫೇಸ್‌ಬುಕ್ ಮಾತುಕತೆ

Update: 2021-02-19 18:11 GMT

ಸಿಡ್ನಿ (ಆಸ್ಟ್ರೇಲಿಯ), ಫೆ. 19: ಆಸ್ಟ್ರೇಲಿಯದ ಪ್ರಸ್ತಾಪಿತ ನೂತನ ಕಾನೂನನ್ನು ವಿರೋಧಿಸಿ, ತನ್ನ ಆಸ್ಟ್ರೇಲಿಯ ಬಳಕೆದಾರರಿಗೆ ಸುದ್ದಿಗಳನ್ನೇ ತಡೆಹಿಡಿದ ಅಭೂತಪೂರ್ವ ಕ್ರಮದ ಬಳಿಕ, ಫೇಸ್‌ಬುಕ್ ಶುಕ್ರವಾರ ಅಲ್ಲಿನ ಸರಕಾರದೊಂದಿಗೆ ಮಾತುಕತೆ ನಡೆಸಿದೆ.

 ಬಳಕೆದಾರರನ್ನು ಸುದ್ದಿಗಳಿಂದ ವಂಚಿತರನ್ನಾಗಿ ಮಾಡುವ ಫೇಸ್‌ಬುಕ್‌ನ ನಿರ್ಧಾರಕ್ಕೆ ಜಗತ್ತಿನಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಆಸ್ಟ್ರೇಲಿಯದ ಪ್ರಸ್ತಾಪಿತ ನೂತನ ಕಾನೂನಿನ ಪ್ರಕಾರ, ಗೂಗಲ್ ಮತ್ತು ಫೇಸ್‌ಬುಕ್ ಕಂಪೆನಿಗಳು ತಮ್ಮ ಮಾಧ್ಯಮಗಳಲ್ಲಿ ಹರಿದಾಡುವ ಸುದ್ದಿ ವರದಿಗಳಿಗಾಗಿ ಆಯಾಯ ಮಾಧ್ಯಮ ಸಂಸ್ಥೆಗಳಿಗೆ ಹಣ ಪಾವತಿಸಬೇಕಾಗುತ್ತದೆ.

ಫೇಸ್‌ಬುಕ್ ಗುರುವಾರದಿಂದ ಆಸ್ಟ್ರೇಲಿಯದ ಬಳಕೆದಾರರಿಗಾಗಿ ಮಾಧ್ಯಮ ಸಂಸ್ಥೆಗಳ ಪುಟಗಳನ್ನು ಖಾಲಿಯಿರಿಸಿದೆ. ಅಂದರೆ, ಅವುಗಳ ಮೂಲಕ ಹರಿದಾಡುತ್ತಿದ್ದ ಸುದ್ದಿ ವರದಿಗಳು ಈಗ ನಿಂತಿವೆ. ಅದೂ ಅಲ್ಲದೆ, ತನ್ನ ಬಳಕೆದಾರರು ಸುದ್ದಿ ವರದಿಗಳನ್ನು ಹಂಚಿಕೊಳ್ಳುವುದನ್ನೂ ತಡೆದಿದೆ.

 ಈ ಮೂಲಕ ಪ್ರಸ್ತಾಪಿತ ಕಾನೂನಿಗೆ ತಲೆಬಾಗಲು ಅದು ನಿರಾಕರಿಸಿದೆ. ಆದರೆ, ನೂತನ ಕಾನೂನಿನಿಂದ ತಾನು ಹಿಂದೆ ಸರಿಯುವುದಿಲ್ಲ ಎಂದು ಆಸ್ಟ್ರೇಲಿಯ ಸರಕಾರ ಹೇಳಿದೆ.

ಈ ಬಿಕ್ಕಟ್ಟನ್ನು ನಿವಾರಿಸುವ ನಿಟ್ಟಿನಲ್ಲಿ ಶುಕ್ರವಾರ ಫೇಸ್‌ಬುಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್ ಝುಕರ್‌ಬರ್ಗ್ ಜೊತೆ ಮಾತುಕತೆ ನಡೆಸಿರುವುದಾಗಿ ಆಸ್ಟ್ರೇಲಿಯದ ಹಣಕಾಸು ಸಚಿವ ಜೋಶ್ ಫ್ರೈಡನ್‌ಬರ್ಗ್ ಹೇಳಿದ್ದಾರೆ. ಮಾಉತಕತೆಯು ವಾರಂತ್ಯದಲಿ ಮುಂದುವರಿಯುವುದಾಗಿ ಅವರು ಹೇಳಿದ್ದಾರೆ.

ಅದೇ ವೇಳೆ, ಬೆದರಿಕೆಯ ವರ್ತನೆಯನ್ನು ತೊರೆದು ಮಾತುಕತೆಯ ಮೇಜಿಗೆ ಬನ್ನಿ ಎಂದು ಪ್ರಧಾನಿ ಸ್ಕಾಟ್ ಮೊರಿಸನ್ ಕೂಡ ಫೇಸ್‌ಬುಕ್ಕನ್ನು ಒತ್ತಾಯಿಸಿದ್ದಾರೆ.

ಮೋದಿ ಜೊತೆ ಚರ್ಚೆ: ಮೊರಿಸನ್

ತಮ್ಮ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವ ಸುದ್ದಿಗಳಿಗಾಗಿ ಗೂಗಲ್ ಮತ್ತು ಫೇಸ್‌ಬುಕ್ ಕಂಪೆನಿಗಳು ಆಯಾಯ ಮಾಧ್ಯಮ ಸಂಸ್ಥೆಗಳಿಗೆ ಹಣ ಪಾವತಿಸಬೇಕೆನ್ನುವ ಜಗತ್ತಿನ ಪ್ರಥಮ ಕಾನೂನಿನ ಬಗ್ಗೆ ಜಗತ್ತಿನಾದ್ಯಂತ ನಾಯಕರು ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದಾರೆ.

‘‘ಆಸ್ಟ್ರೇಲಿಯ ತೆಗೆದುಕೊಂಡಿರುವ ಕ್ರಮದತ್ತ ಜನರು ಕುತೂಹಲದಿಂದ ನೋಡುತ್ತಿದ್ದಾರೆ’’ ಎಂದು ಅವರು ಹೇಳಿದರು. ಈ ವಿಷಯದ ಬಗ್ಗೆ ನಾನು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಕೆನಡದ ಪ್ರಧಾನಿ ಜಸ್ಟಿನ್ ಟ್ರೂಡೊ ಜೊತೆ ಚರ್ಚಿಸಿದ್ದೇನೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News