ಕೊಳ್ಳುವವರು-ಕೊಲ್ಲುವವರ ನಡುವೆ ಪ್ರಜಾಸತ್ತೆಯ ನಾಲ್ಕನೇ ಸ್ತಂಭ

Update: 2021-02-20 05:51 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಪ್ರಭುತ್ವ ಸರ್ವಾಧಿಕಾರಿಯಾಗುತ್ತಾ ಹೋದ ಹಾಗೆ ಮೊತ್ತ ಮೊದಲು ಅದು ದಮನಿಸುವುದು ಪತ್ರಿಕೆಗಳನ್ನು. ಯಾಕೆಂದರೆ, ಪತ್ರಿಕೆಗಳು ಮಾತನಾಡದೇ ಹೋದರೆ, ಸರ್ವಾಧಿಕಾರದ ದುಷ್ಪರಿಣಾಮದ ಹಿಂದಿರುವವರ ಮಾಹಿತಿಗಳು ಜನರನ್ನು ತಲುಪುವುದೇ ಇಲ್ಲ. ಪತ್ರಿಕೆಗಳನ್ನು ದಮನಿಸಲು ಅಥವಾ ಬಾಯಿ ಮುಚ್ಚಿಸಲು ಎರಡು ಮಾರ್ಗಗಳನ್ನು ಪ್ರಭುತ್ವ ಆರಿಸಿಕೊಳ್ಳುತ್ತದೆ. ಒಂದು ಮಾರ್ಗ, ಕೊಳ್ಳುವುದು. ಇನ್ನೊಂದು, ಕೊಲ್ಲುವುದು. ಪ್ರಜಾಸತ್ತೆ ಅಪಾಯಕಾರಿ ಸ್ಥಿತಿಯಲ್ಲಿರುವ ಈ ದಿನಗಳಲ್ಲಿ ಬಹುತೇಕ ಮಾಧ್ಯಮಗಳನ್ನು ಆಳುವವರು ಕೊಂಡು ಕೊಂಡಿದ್ದಾರೆ. ಪರಿಣಾಮವಾಗಿ, ಆಡಳಿತ ಅದೆಷ್ಟೇ ಕೆಟ್ಟದಾಗಿರಲಿ, ಅವುಗಳನ್ನು ಜನರ ಮುಂದಿಡದೆ ಆಳುವವರನ್ನು ಹಾಡಿ ಹೊಗಳುವ ಕಾರ್ಯಕ್ಕಷ್ಟೇ ಮಾಧ್ಯಮಗಳು ಸೀಮಿತವಾಗಿವೆ. ಕೊಂಡು ಕೊಳ್ಳುವ ಮೂಲಕ, ಮಾಧ್ಯಮಗಳನ್ನು ಕೊಲ್ಲುವುದು ಬಹಳ ಸುಲಭ. ಇನ್ನೊಂದು, ನೇರವಾಗಿ ಕೊಲ್ಲುವುದು. ತಮ್ಮ ಗೂಂಡಾಗಳ ಮೂಲಕ ಬೆದರಿಸುವುದು ಅಥವಾ ಹಲ್ಲೆ ನಡೆಸುವುದು ಒಂದು ಬಗೆಯಾದರೆ ಕಾನೂನುಗಳನ್ನು ಬಳಸಿಕೊಂಡು ಪತ್ರಕರ್ತರಿಗೆ ಹಿಂಸೆಗಳನ್ನು ನೀಡುವುದು, ಅವರ ಬಾಯಿ ಮುಚ್ಚಿಸುವುದು ಇನ್ನೊಂದು ಬಗೆ. ಭಾರತದಾದ್ಯಂತ ಮಾಧ್ಯಮಕಚೇರಿಗಳು ಹಾಗೂ ಪತ್ರಕರ್ತರ ಮೇಲೆ ಹೆಚ್ಚುತ್ತಿರುವ ದಾಳಿಗಳ ಬಗ್ಗೆ ಆತಂಕ ವ್ಯಕ್ತಪಡಿಸಿ ಭಾರತದ ಪ್ರತಿಷ್ಠಿತ ನಾಗರಿಕಹಕ್ಕು ಸಂಘಟನೆ ಜನತಾ ಚಳವಳಿಗಳ ರಾಷ್ಟ್ರೀಯ ಒಕ್ಕೂಟ (ಎನ್‌ಎಪಿಎಂ)ವು ಇತ್ತೀಚೆಗೆ ಬಹಿರಂಗ ಹೇಳಿಕೆಯನ್ನು ನೀಡಿರುವುದು ದೇಶದ ಮಾಧ್ಯಮರಂಗದ ಜೊತೆಗೆ ಪ್ರಜಾಸತ್ತೆಯೂ ಅಪಾಯದಲ್ಲಿರುವುದನ್ನು ತೋರಿಸಿಕೊಟ್ಟಿದೆ.

ಪತ್ರಕರ್ತರ ಬಾಯಿ ಮುಚ್ಚಿಸಲು ಕಾನೂನನ್ನು ದುರುಪಯೋಗಪಡಿಸುವುದರಲ್ಲಿ ಯುಪಿಎ ಸರಕಾರವೇನೂ ಹಿಂದೆ ಬಿದ್ದಿಲ್ಲ. ಆದರೆ ಮೋದಿ ಆಡಳಿತದಲ್ಲಿ ಇದು ಭೀಕರ ರೂಪ ತಾಳಿದೆ. 2020ನೇ ವರ್ಷದಲ್ಲಿ ದೇಶವು ಪತ್ರಕರ್ತರ ಬಂಧನ, ಮಾಧ್ಯಮಸಂಸ್ಥೆಗಳ ಮೇಲೆ ದಾಳಿಯಂತಹ ಶೇ.20ರಷ್ಟು ಪ್ರಕರಣಗಳನ್ನು ಕಂಡಿದೆ. ಈ ಪೈಕಿ ಹೆಚ್ಚಿನವು ಬಿಜೆಪಿ ಆಳ್ವಿಕೆಯಿರುವ ರಾಜ್ಯಗಳಲ್ಲೇ ವರದಿಯಾಗಿವೆಯೆಂಬುದು ಗಮನಾರ್ಹ. ವೃತ್ತಿಧರ್ಮದ ಆದರ್ಶಗಳನ್ನು ಎತ್ತಿ ಹಿಡಿದ ದಿಟ್ಟ ಹಾಗೂ ಪ್ರಾಮಾಣಿಕ ಪತ್ರಕರ್ತರು ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಹಾಗೂ ಹಿಂಸಾಚಾರಕ್ಕೂ ತುತ್ತಾಗಿದ್ದಾರೆ. 2014 ಹಾಗೂ 2019ರ ನಡುವೆ ಪತ್ರಕರ್ತರ ಮೇಲೆ 200ಕ್ಕೂ ಅಧಿಕ ದೈಹಿಕ ಹಲ್ಲೆಗಳು ನಡೆದಿದ್ದು, ಹಲವರು ಸಾವನ್ನೂ ಅಪ್ಪಿದ್ದಾರೆ. ಸಿಎಎ ವಿರುದ್ಧದ ಆಂದೋಲನ ಮತ್ತು ರೈತ ಚಳವಳಿಗಳು ದೇಶಾದ್ಯಂತ ವಿಸ್ತಾರವಾದಂತೆ, ಪತ್ರಕರ್ತರ ಮೇಲಿರುವ ನಿರ್ಬಂಧಗಳು ಹೆಚ್ಚುತ್ತಾ ಹೋದವು. ರೈತರ ಪ್ರತಿಭಟನೆಗಳನ್ನು ವರದಿ ಮಾಡುವ ಪತ್ರಕರ್ತರ ಮೇಲೆ ಇತ್ತೀಚಿನ ದಿನಗಳಲ್ಲಿ ನೇರ ದಾಳಿಗಳು ನಡೆಯುತ್ತಿವೆ. ರೈತರ ಪ್ರತಿಭಟನೆಗಳನ್ನು ನಿರಂತರವಾಗಿ ವರದಿ ಮಾಡುತ್ತಿದ್ದ ಆನ್‌ಲೈನ್ ಸುದ್ದಿಜಾಲತಾಣ ‘ನ್ಯೂಸ್‌ಕ್ಲಿಕ್’ನ ಪತ್ರಿಕಾ ಕಚೇರಿಯ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿ ಇದಕ್ಕೊಂದು ನಿದರ್ಶನವಾಗಿದೆ. ನ್ಯೂಸ್‌ಕ್ಲಿಕ್‌ನ ಮುಖ್ಯಸಂಪಾದಕ ಪ್ರಬಿರ್ ಪುರಕಾಯಸ್ಥ ಹಾಗೂ ಲೇಖಕ ಗೀತಾ ಹರಿಹರನ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಐದು ದಿನಗಳ ಕಾಲ ವಸ್ತುಶಃ ಗೃಹಬಂಧನದಲ್ಲಿರಿಸಿದರು.

ದಿಲ್ಲಿಯ ಗಡಿಗಳಲ್ಲಿ ರೈತರ ಪ್ರತಿಭಟನೆಯ ಬಗ್ಗೆ ಮೊದಲ ದಿನದಿಂದಲೇ ವರದಿ ಮಾಡುತ್ತಿದ್ದ ಫ್ರೀಲ್ಯಾನ್ಸ್ ವರದಿಗಾರ ಮನದೀಪ್ ಪುನಿಯಾರನ್ನು ಸಿಂಘು ಗಡಿಯಲ್ಲಿ ಅಮಾನುಷವಾಗಿ ಎಳೆದುಕೊಂಡು ಹೋಗಿ, ವಶಕ್ಕೆ ತೆಗೆದುಕೊಂಡರು. ಖ್ಯಾತ ಪತ್ರಕರ್ತರಾದ ರಾಜದೀಪ್ ಸರ್ದೇಸಾಯಿ, ಮೃಣಾಲ್ ಪಾಂಡೆ, ಝಫರ್ ಅಗಾ, ಕಾರವಾನ್ ಪತ್ರಿಕೆಯ ಸಂಸ್ಥಾಪಕ ಪರೇಶ್ ನಾಥ್, ಸಂಪಾದಕ ಅನಂತ ನಾಥ್ ಹಾಗೂ ಕಾರ್ಯಕಾರಿ ಸಂಪಾದಕ ವಿನೋದ್ ಕೆ. ಜೋಸ್ ಸೇರಿದಂತೆ ಖ್ಯಾತ ಪತ್ರಕರ್ತರ ವಿರುದ್ಧ ಐದು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. 2017ರಲ್ಲಿ ‘ ದಿ ವೈರ್’ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಲೇಖನಗಳಿಗಾಗಿ ಬೃಹತ್ ಕಾರ್ಪೊರೇಟ್ ಉದ್ಯಮಿ ಅದಾನಿ ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿ ಹಿರಿಯ ಪತ್ರಕರ್ತ ಪರಂಜಯ್ ಗುಹಾ ತಕುರ್ತಾ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ ಜಾರಿಗೊಳಿಸಿತ್ತು. ತರುವಾಯ ಗುಜರಾತ್ ಹೈಕೋರ್ಟ್ ವಾರಂಟನ್ನು ರದ್ದುಪಡಿಸಿತಲ್ಲದೆ, ಪ್ರಕರಣಕ್ಕೆ ಸಂಬಂಧಿಸಿ ಕೆಳ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಗುಜರಾತ್ ಹೈಕೋರ್ಟ್‌ಗೆ ಸೂಚಿಸಿತು.

ಜನವರಿಯಲ್ಲಿ ಮಣಿಪುರದ ಪತ್ರಿಕೆಯೊಂದರಲ್ಲಿ ಪ್ರಕಟವಾದ ಲೇಖನಕ್ಕಾಗಿ ಪತ್ರಕರ್ತರಾದ ಧಿರೇನ್ ಸಡೋಕಪಮ್, ಪಾವೊಜಲ್ ಚಾವೊಬಾ ಹಾಗೂ ಎ.ಜೊಯ್ ಲುವಾಂಗ್ ವಿರುದ್ಧ ಕರಾಳವಾದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)ಯನ್ನು ದಾಖಲಿಸಲಾಯಿತು. ಇತ್ತೀಚಿನ ಕೆಲವು ವರ್ಷಗಳಲ್ಲಿ ದೇಶಾದ್ಯಂತ ಸರಕಾರದ ವಿವಾದಾತ್ಮಕ ನಿರ್ಧಾರಗಳನ್ನು, ನಿಲುವುಗಳನ್ನು ವಿರೋಧಿಸಿದ ಪತ್ರಕರ್ತರ ವಿರುದ್ಧ ಯುಎಪಿಎ ಕಾಯ್ದೆ ಹೇರುವುದು ಸಾಮಾನ್ಯವಾಗಿಬಿಟ್ಟಿದೆ. ಕೇರಳದ ಪತ್ರಕರ್ತ ಸಿದ್ದೀಕ್‌ಕಪ್ಪನ್ ಅವರ ಬಂಧನ ಪ್ರಕರಣದಲ್ಲಿ ಉ.ಪ್ರ. ಸರಕಾರವು ಸಂವಿಧಾನದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿತ್ತು. ಹಾಥರಸ್‌ನಲ್ಲಿ ದಲಿತ ಯುವತಿಯ ಅತ್ಯಾಚಾರ, ಕೊಲೆ ಪ್ರಕರಣದ ವರದಿಗಾರಿಕೆಗಾಗಿ ತೆರಳಿದ್ದ ಪತ್ರಕರ್ತ ಸಿದ್ದೀಕ್ ಕಪ್ಪನ್ ಮೇಲೆ ಉ.ಪ್ರ. ಪೊಲೀಸರು ಅಸಾಂವಿಧಾನಿಕವಾದ ರೀತಿಯಲ್ಲಿ ದೋಷಾರೋಪ ಹೊರಿಸಿ, ಯುಎಪಿಎ ಕಾಯ್ದೆಯಡಿ ಬಂಧಿಸಿದರು. ಅಕ್ಟೋಬರ್ 20ರಿಂದ ಬಂಧಿತರಾದ ಕಪ್ಪನ್, ಒಂದೂವರೆ ತಿಂಗಳಿಗೂ ಅಧಿಕ ಸಮಯದವರೆಗೆ ಜೈಲು ವಾಸ ಅನುಭವಿಸಿದ್ದರು. ಕೊನೆಗೂ ಅವರಿಗೆ ಫೆ.15ರಂದು ಜಾಮೀನು ಬಿಡುಗಡೆ ದೊರೆಯಿತು.

ಸಂವಿಧಾನದ 19ನೇ ವಿಧಿಯು ಮುದ್ರಣ ಹಾಗೂ ಇಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರವನ್ನು ಖಾತರಿಪಡಿಸುತ್ತದೆ ಹಾಗೂ ಇದು ಪ್ರಜಾಪ್ರಭುತ್ವದ ಮೂಲಭೂತ ಆಶಯಗಳಲ್ಲೊಂದಾಗಿದೆೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬರ್ಬರ ಕ್ರಮಗಳ ಮೂಲಕ ಮಾಹಿತಿ ಹಾಗೂ ಸುದ್ದಿಗಳನ್ನು ನಿಯಂತ್ರಿಸುತ್ತಿದೆ. ಈ ಫ್ಯಾಶಿಸ್ಟ್ ಪ್ರವೃತ್ತಿಯು ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಪ್ರಜಾಪ್ರಭುತ್ವದ ವೌಲ್ಯಗಳಿಗೆ ವಿರುದ್ಧವಾಗಿದೆ. ಎಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆಯೋ ಅಲ್ಲಿ, ಪತ್ರಕರ್ತರು ಅಪಾಯದಲ್ಲಿರುತ್ತಾರೆ. ದೇಶದ ಪ್ರಜಾಸತ್ತೆ ಅಪಾಯದಲ್ಲಿದೆ ಎನ್ನುವುದರ ಸೂಚನೆಯಾಗಿದೆ, ಪತ್ರಕರ್ತರ ಮೇಲೆ ಹೆಚ್ಚುತ್ತಿರುವ ದಮನ. ಬಹುಶಃ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪತ್ರಕರ್ತರು ಇಂತಹದೇ ಭೀತಿಯಲ್ಲಿ ದಿನಕಳೆದಿದ್ದಾರೆ. ಇದೀಗ ಆ ದಿನಗಳು ಮರುಕಳಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News