ಮರ್ಟೆನ್ಸ್, ಸಬಲೆಂಕಾ ಮುಡಿಗೆ ಮಹಿಳೆಯರ ಡಬಲ್ಸ್ ಕಿರೀಟ

Update: 2021-02-20 04:49 GMT

ಮೆಲ್ಬೋರ್ನ್: ಎಲಿಸ್ ಮರ್ಟೆನ್ಸ್ ಹಾಗೂ ಅರ್ಯನಾ ಸಬಲೆಂಕಾ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಜೋಡಿ ಎರಡನೇ ಬಾರಿ ಡಬಲ್ಸ್ ಪ್ರಶಸ್ತಿಯನ್ನು ಬಾಚಿಕೊಂಡಿದೆ.

ಶುಕ್ರವಾರ ನಡೆದ ಮಹಿಳೆಯರ ಡಬಲ್ಸ್ ಫೈನಲ್ ಹಣಾಹಣಿಯಲ್ಲಿ ಮರ್ಟೆನ್ಸ್ ಹಾಗೂ ಸಬಲೆಂಕಾ ಅವರು ಝೆಕ್ ಜೋಡಿ ಬಾರ್ಬೊರ ಕ್ರೆಜ್‌ಸಿಕೊವಾ ಹಾಗೂ ಕಟೆರಿನಾ ಸಿನಿಯಾಕೊವಾರನ್ನು 6-2, 6-3 ನೇರ ಸೆಟ್‌ಗಳಿಂದ ಸೋಲಿಸಿದರು.

  ಮೆಲ್ಬೋರ್ನ್ ಪಾರ್ಕ್‌ನಲ್ಲಿ ಎರಡನೇ ಶ್ರೇಯಾಂಕದೊಂದಿಗೆ ಸ್ಪರ್ಧಿಸಿದ್ದ ಮರ್ಟೆನ್ಸ್ ಹಾಗೂ ಸಬಲೆಂಕಾ ಅವರು 2019ರ ಅಮೆರಿಕನ್ ಓಪನ್ ಟೂರ್ನಿಯಲ್ಲಿ ಮೊದಲ ಬಾರಿ ಡಬಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ರಾಡ್ ಲಾವೆರ್ ಅರೆನಾದಲ್ಲಿ ಒಟ್ಟಾರೆ ಐದನೇ ಬಾರಿ ಪ್ರಶಸ್ತಿಯನ್ನು ಜಯಿಸಿದ್ದಾರೆ. ಸಬಲೆಂಕಾ ಸಿಂಗಲ್ಸ್ ಪಂದ್ಯದತ್ತ ಹೆಚ್ಚು ಗಮನ ನೀಡಲು ನಿರ್ಧರಿಸಿರುವ ಕಾರಣ ಈ ಜೋಡಿ 2021ರ ಇನ್ನುಳಿದ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಒಟ್ಟಿಗೆ ಆಡುವುದಿಲ್ಲ. ‘‘ನಾನು ನನ್ನ ಎಲ್ಲ ಗಮನವನ್ನು ಸಿಂಗಲ್ಸ್‌ನತ್ತ ಹರಿಸಲು ಪ್ರಯತ್ನಿಸುತ್ತೇನೆ. ಡಬಲ್ಸ್ ಪಂದ್ಯ ಸಿಂಗಲ್ಸ್‌ನಷ್ಟು ಕಠಿಣವಲ್ಲ ಎಂದು ನನಗೆ ಗೊತ್ತಿದೆ. ಸಿಂಗಲ್ಸ್ ಪಂದ್ಯಕ್ಕೆ ಸಾಕಷ್ಟು ಶ್ರಮದ ಅಗತ್ಯವಿದೆ. ನನ್ನ ಶಕ್ತಿಯನ್ನು ಸಿಂಗಲ್ಸ್ ಪಂದ್ಯಕ್ಕೆ ಮೀಸಲಿಡಲು ಬಯಸುವೆ’’ ಎಂದು ಸುದ್ದಿಗಾರರಿಗೆ ಸಬಲೆಂಕಾ ತಿಳಿಸಿದರು.

ಈ ಜೋಡಿಯು ದುಬೈ ಹಾಗೂ ಮಿಯಾಮಿಯಲ್ಲಿ ನಡೆಯಲಿರುವ ಮುಂಬರುವ ಡಬ್ಲುಟಿಎ ಟೂರ್ನಿಗಳಲ್ಲಿ ಒಟ್ಟಿಗೆ ಆಡಲಿದೆ.

 ಸಬಲೆಂಕಾ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವದ ನಂ.7ನೇ ಆಟಗಾರ್ತಿಯಾಗಿದ್ದು, ಬೆಲ್ಜಿಯಂ ನ ಮರ್ಟೆನ್ಸ್ ಸಿಂಗಲ್ಸ್ ಪಂದ್ಯದಲ್ಲಿ 16ನೇ ರ್ಯಾಂಕಿನಲ್ಲಿದ್ದಾರೆ. ಬೆಲಾರಸ್ ನ ಸಬಲೆಂಕಾ ಆಸ್ಟ್ರೇಲಿಯನ್ ಓಪನ್ ಮಹಿಳೆಯರ ಸಿಂಗಲ್ಸ್‌ನಲ್ಲಿ ನಾಲ್ಕನೇ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News