ತ್ರಿಪುರಾ: ಚುನಾವಣೆಗೆ ಕೆಲವು ತಿಂಗಳಿರುವಂತೆಯೇ ಬಿಜೆಪಿಯನ್ನು ತೊರೆದ ಪ್ರಮುಖ ಮಿತ್ರಪಕ್ಷ

Update: 2021-02-20 06:48 GMT

ಅಗರ್ತಲಾ: ತ್ರಿಪುರ ಟ್ರೈಬಲ್ ಆಟೊನೋಮಸ್ ಡಿಸ್ಟ್ರಿಕ್ಟ್ ಕೌನ್ಸಿಲ್ ಚುನಾವಣೆಗೆ ಇನ್ನೇನು ಕೆಲವು ತಿಂಗಳು ಬಾಕಿಯಿವೆಯೆನ್ನುವಾಗ ಆಡಳಿತ ಬಿಜೆಪಿಗೆ ದೊಡ್ಡ  ಹಿನ್ನಡೆಯುಂಟು ಮಾಡುವ ಬೆಳವಣಿಗೆಯಲ್ಲಿ ಅದರ ಮಿತ್ರ ಪಕ್ಷ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ(ಐಪಿಎಫ್‍ಟಿ) ಬಿಜೆಪಿಯನ್ನು ಕೈಬಿಟ್ಟು ದಿ ಇಂಡಿಜಿನಸ್ ಪ್ರೊಗ್ರೆಸ್ಸಿವ್ ರೀಜನಲ್ ಅಲಯನ್ಸ್(ಟಿಐಪಿಆರ್‍ಎ) ಜತೆಗೆ ಕೈಜೋಡಿಸಿದೆ.

ತ್ರಿಪುರಾದಲ್ಲಿ 25 ವರ್ಷದ ಎಡ ಪಕ್ಷದ ಆಡಳಿತಕ್ಕೆ ಅಂತ್ಯ ಹಾಡಿ ಮಾರ್ಚ್ 18, 2018ರಂದು  ಬಿಜೆಪಿಯು ಐಪಿಎಫ್‍ಟಿ ಜತೆ ಮೈತ್ರಿ ಸಾಧಿಸಿ  ರಾಜ್ಯದಲ್ಲಿ ಅಧಿಕಾರಕ್ಕೇರಿತ್ತು. ಟಿಐಪಿಆರ್‍ಎ ಒಂದು ರಾಜಕೀಯೇತರ ಪಕ್ಷವಾಗಿ ತನ್ನ ಚಟುವಟಿಕೆ ಆರಂಭಿಸಿದ್ದರೂ ಇದೀಗ ಅದು ತ್ರಿಪುರಾದ ರಾಜಮನೆತನದ ಪ್ರದ್ಯೋತ್ ಕಿಶೋರ್ ಮಾಣಿಕ್ಯ ದೆಬ್ಬರ್ಮ ನೇತೃತ್ವದಲ್ಲಿ ಚುನಾವಣಾ ಆಖಾಡದಲ್ಲಿದೆ.

ಜತೆಯಾಗಿಯೇ ಸರಕಾರ ರಚಿಸಿದ್ದರೂ ಬಿಜೆಪಿ ಹಾಗೂ ಐಪಿಎಫ್‍ಟಿ ಸದಾ ಸೀಟು ಹಂಚಿಕೆ ವಿಚಾರದಲ್ಲಿ ಕಚ್ಚಾಡಿವೆಯಲ್ಲದೆ  2018ರ ನಂತರ ಯಾವುದೇ ಚುನಾವಣೆ  ಜತೆಯಾಗಿ ಎದುರಿಸಿಲ್ಲ. ಸದ್ಯ ತ್ರಿಪುರಾದಲ್ಲಿ  ಬಿಜೆಪಿಗೆ 36 ಸ್ಥಾನಗಳು ಹಾಗೂ ಐಪಿಎಫ್‍ಟಿಗೆ 8 ಸ್ಥಾನಗಳಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು  ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ತ್ರಿಪುರಾದ ಮೂಲನಿವಾಸಿಗಳಿಗಾಗಿ ತಿಪ್ರಾಲ್ಯಾಂಡ್ ರಚನೆಯ ಭರವಸೆಯನ್ನು ಐಪಿಎಫ್‍ಟಿ ನೀಡಿದ್ದರೆ ಈ ಬಾರಿ ಪ್ರದ್ಯೋತ್ ಅವರ ಟಿಐಪಿಆರ್‍ಎ ಗ್ರೇಟರ್ ತಿಪ್ರಾಲ್ಯಾಂಡ್ ಬೇಕೆಂಬ ಬೇಡಿಕೆ ಮುಂದಿಟ್ಟಿದೆ. ಐಪಿಎಫ್‍ಟಿ ಜತೆಗೆ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ ತಿಪ್ರಾಹ ಮತ್ತು ತಿಪ್ರಾಲ್ಯಾಂಡ್ ಸ್ಟೇಟ್ ಪಾರ್ಟಿ ಕೂಡ ಪ್ರದ್ಯೋತ್ ಜತೆಗೆ ಕೈಜೋಡಿಸಿವೆಯಲ್ಲದೆ ಗ್ರೇಟರ್ ತಿಪ್ರಾಲ್ಯಾಂಡ್ ರಚನೆ ಉದ್ದೇಶದಿಂದ ಬೇಷರತ್ ಆಗಿ ಜತೆಯಾಗಿವೆ. ಈ ಪಕ್ಷಗಳೆಲ್ಲವೂ ಜತೆಗೂಡಿ ತಿಪ್ರಾಹ ಇಂಡಿಜಿನಸ್ ಪ್ರೊಗ್ರೆಸ್ಸಿವ್ ರೀಜನಲ್ ಅಲಾಯನ್ಸ್ ರಚಿಸಿವೆ.

ಟ್ರೈಬಲ್ ಕೌನ್ಸಿಲ್ ಚುನಾವಣೆ ನಂತರವೂ ಈ ಮೈತ್ರಿ ಮುಂದುವರಿಯಲಿದೆ ಎಂದು ಪ್ರದ್ಯೋತ್ ಹೇಳಿದ್ದಾರೆ

ಟ್ರೈಬಲ್ ಕೌನ್ಸಿಲ್ ಚುನಾವಣೆಯನ್ನು ಕಳೆದ ವರ್ಷ ತ್ರಿಪುರಾ ಸರಕಾರ ಕೋವಿಡ್ ಸಾಂಕ್ರಾಮಿಕ ನೆಪವೊಡ್ಡಿ ಮುಂದೂಡಿತ್ತು, ಆದರೆ ಹೈಕೋರ್ಟ್ ಮೇ 17, 2021ರೊಳಗೆ ಚುನಾವಣೆ ನಡೆಸಬೇಕೆಂದು ಪಿಐಎಲ್ ಒಂದರ ವಿಚಾರಣೆ ವೇಳೆ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News